ಸಾಗರ, ಮೇ.೧೬:
ತಾಲೂಕಿನ ಗಡಿ ಪ್ರದೇಶದಲ್ಲಿರುವ ಕುಗ್ರಾಮಗಳಲ್ಲಿಯೇ ಅತ್ಯಂತ ಅಗತ್ಯವಾದ ಉಚಿತ ಆರೋಗ್ಯ ತಪಾಸಣೆ ಮತ್ತು ಆರೋಗ್ಯ ರಕ್ಷಣೆ ಕಾರ್ಯಕ್ರಮವನ್ನು ನಡೆಸಲು ತೀರ್ಮಾನಿಸಲಾಗಿದ್ದು, ಕಳೆದ ಏ.೨೪ರಿಂದ ಮೇ ೮ರ ವರೆಗೆ ಅಂತಹ ಸ್ಥಳಗಳಲ್ಲಿ ಶಿಬಿರಗಳಲ್ಲಿ ಯಶಸ್ವಿಯಾಗಿ ನಡೆಸಲಾಗಿದೆ ಎಂದು ಕಾಗೋಡು ತಿಮ್ಮಪ್ಪ ಫೌಂಡೇಷನ್‌ನ ಪ್ರಮುಖರಾದ ಡಾ| ರಾಜನಂದಿನಿ ತಿಳಿಸಿದರು.
ತಾಲೂಕು ಕೇಂದ್ರದಿಂದ ೮೦ ಕಿಮೀ ದೂರದಲ್ಲಿರುವ ಚನ್ನಗೊಂಡ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಹೆಬ್ಟಾನಕೇರಿ ಶಿಬಿರ ಉದ್ಘಾಟಿಸಿ ಮಾತನಾಡಿ ಅವರು, ಮೇಘಾನೆ, ಅರ್ಕಳ, ನಾಗವಳ್ಳಿ, ಬಾನ್ಕುಳಿ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಉರುಳುಗಲ್ಲು, ಸಾಲ್ಕೋಡು, ಕರಕೋಡು ಗ್ರಾಮಗಳಲ್ಲಿ ಕೂಡ ಆರೋಗ್ಯ ಶಿಬಿರವನ್ನು ಆಯೋಜಿಸಲಾಗಿದೆ ಎಂದು ಅವರು ತಿಳಿಸಿದರು.
ಶರಾವತಿ ಅಭಯಾರಣ್ಯ ಪ್ರದೇಶದ ವ್ಯಾಪ್ತಿಗೆ ಬರುವ ರಸ್ತೆ, ವಿದ್ಯುತ್ ಸೇರಿ ಹಲವು ಮೂಲ ಸೌಕರ್ಯಗಳಿಂದ ವಂಚಿತರಾಗಿರುವ ಗ್ರಾಮಗಳಲ್ಲಿ ಶಿಬಿರವನ್ನು ಸಂಘಟಿಸಲಾಗಿದೆ. ಅನಾರೋಗ್ಯ ಪೀಡಿತರನ್ನು ಆಸ್ಪತ್ರೆಗೆ ಕರೆತರಲು ಹೆಗಲ ಮೇಲೆ ಹೊತ್ತುಕೊಂಡು ಬರಬೇಕಾದ ಪರಿಸ್ಥಿತಿ ಕೆಲವು ಗ್ರಾಮಗಳಲ್ಲಿ ಇದೆ. ಅಂತಹ ಗ್ರಾಮಗಳಲ್ಲಿ ಆರೋಗ್ಯ ರಕ್ಷಣೆ ಕುರಿತು ಜಾಗೃತಿ ಮೂಡಿಸಲಾಗಿದೆ ಎಂದು ಅವರು ತಿಳಿಸಿದರು.