ಶಿವಮೊಗ್ಗ,ಮೇ.12: ರಜೆಯಮಜೆಯೊಳಗೆ ತುಂಬಿದೆ ಭದ್ರೆಯ ನಾಲೆಯೊಳಗೆ ಈಜುವ ತವಕ ಹೊಂದಿದ್ದ ನಾಲ್ವರು ಮಕ್ಕಳಲ್ಲಿ ಇಬ್ನರು ದುರಾದೃಷ್ಟವಶಾತ್ ನೀರು ಪಾಲಾಗಿರುವ ಹೃದಯವಿದ್ರಾವಕ ಘಟನೆ ಭದ್ರಾವತಿ ತಾ. ಹೆಂಚಿನ ಸಿದ್ದಾಪುರ ಬಳಿ ಹರಿಯುವ ಭದ್ರಾ ನಾಲೆಯಲ್ಲಿ ನಡೆದಿದೆ.
ಭದ್ರಾ ನಾಲೆಯಲ್ಲಿ ಈಜಲು ಹೋಗಿದ್ದ ಈ ಇಬ್ಬರು ಮಕ್ಕಳು ನಾಪತ್ತೆಯಾಗಿದ್ದಾರೆ. ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಕಳೆದ ಎರಡು ದಿನದಿಂದ ನಾಪತ್ತೆಯಾದ ಮಕ್ಕಳಿಗೆ ಹುಡುಕಾಡಲಾಗುತ್ತಿದೆ. ಈಗಿನ ಮಾಹಿತಿ ಪ್ರಕಾರ ಇಲ್ಲಿಯವರೆಗೆ ಅವರ ಸುಳಿವಿಲ್ಲ.
ಶಿವಮೊಗ್ಗ ತಾ. ಮುದುವಾಲದ ಚಂದನಾ (14) ಮತ್ತು ಹರ್ಷ (10) ನಾಪತ್ತೆಯಾಗಿರುವ ದುರ್ದೈವಿ ಮಕ್ಕಳು. ಹೊಳೆಹೊನ್ನೂರು ರಸ್ತೆಯ ಅಗರದಹಳ್ಳಿ ಬಳಿ ಭದ್ರಾ ಬಲದಂಡೆ ನಾಲೆಯಲ್ಲಿ ಮಕ್ಕಳು ತಮ್ಮ ದೊಡ್ಡಪ್ಪನೊಂದಿಗೆ ಈಜಲು ತೆರಳಿದ್ದ ಸಂದರ್ಭದಲ್ಲಿ ನಾಪತ್ತೆಯಾಗಿದ್ದಾರೆ.
ರಜೆಗೆ ದೊಡ್ಡಪ್ಪನ ಮನೆಗೆ ಬಂದಿದ್ದ ಈ ಮಕ್ಕಳು ಶಿವಮೊಗ್ಗ ತಾಲೂಕು ಮುದುವಾಲ ಗ್ರಾಮದವರು. ಶಾಲೆಗೆ ರಜೆ ಇದ್ದ ಹಿನ್ನೆಲೆ ಇವರು ಅಗರದಹಳ್ಳಿಯಲ್ಲಿರುವ ದೊಡ್ಡಪ್ಪನ ಮನೆಗೆ ಬಂದಿದ್ದರು. ಬುಧವಾರ ದೊಡ್ಡಪ್ಪನ ಜೊತೆಗೆ ಭದ್ರಾ ನಾಲೆಯಲ್ಲಿ ಈಜಲು ತೆರಳಿದ್ದರು. ಈ ವೇಳೆ ನಾಲೆಯಲ್ಲಿ ನಾಪತ್ತೆಯಾಗಿದ್ದಾರೆ. ಅದೃಷ್ಟಾವಶಾತ್ ದೊಡ್ಡಪ್ಪನ ಕೈಲಿದ್ದ ಒಂದು ಮಗು ಹಾಗೂ ಕುರಿ ಮೇಯಿಸುವ ಹುಡುಗ ಇನ್ನೊಂದು ಹುಡುಗನನ್ನು ರಕ್ಷಿಸಿದ್ದಾರೆ.
ಇಂದೂ ಶೋಧ ಕಾರ್ಯ ಪುನರಾರಂಭ
ಮಕ್ಕಳು ನಾಪತ್ತೆ ಪ್ರಕರಣ ತಿಳಿಯುತ್ತಿದ್ದಂತೆ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದಾರೆ. ಬೋಟ್ ಬಳಸಿ ಶೋಧ ಕಾರ್ಯ ನಡೆಸಲಾಗುತ್ತಿದೆ. ಬುಧವಾರ ಮಕ್ಕಳು ಪತ್ತೆಯಾಗಿಲ್ಲ. ಕತ್ತಲಾಗಿದ್ದರಿಂದ ಇವತ್ತು ಶೋಧ ಕಾರ್ಯ ಪುನಾರಾರಂಭ ಮಾಡಲಾಗಿದೆ. ಹೊಳೆಹೊನ್ನೂರು ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.