ರಾಕೇಶ್ ಸೋಮಿನಕೊಪ್ಪ
ಶಿವಮೊಗ್ಗ : ಪಾಲಿಕೆ ವ್ಯಾಪ್ತಿಯಲ್ಲಿ ಬರುವ ವಾರ್ಡ್ ನಂ.01ರ ಸೋಮಿನಕೊಪ್ಪ ಭೋವಿ ಕಾಲೋನಿಯಲ್ಲಿರುವ ಸ್ಮಶ್ಮಾನ ಮೂಲಭೂತ ಸೌಕರ್ಯಗಳಿಲ್ಲದೇ ಸೊರಗಿದೆ.
ಈ ಸ್ಮಶಾನಕ್ಕೆ ಸುತ್ತಲೂ ಕಾಂಪೌಂಡ್, ನೀರಿನ ವ್ಯವಸ್ಥೆ, ಓಡಾಡಲು ಸರಿಯಾದ ರಸ್ತೆಯಿಲ್ಲದೇ ಕಲ್ಲು, ಮುಳ್ಳುಗಳನ್ನೆ ತುಳಿದುಕೊಂಡು ಅಂತ್ಯಸಂಸ್ಕಾರ ಮಾಡುವ ದುಸ್ಥಿತಿಗೆ ಬಂದಿದೆ ಎಂದರೆ ತಪ್ಪಾಗಲಾರದು.
ಸ್ಮಶಾನ ಜಾಗ ಒತ್ತುವರಿ: ಪಶುವೈದ್ಯಕೀಯ ಕಾಲೇಜಿನ ವತಿಯಿಂದ ಡೀನ್ ಅವರು ಸ್ಮಶಾನ ಜಾಗಕ್ಕೆಂದು ಎರಡು ಎಕರೆ ನೀಡಿದ್ದರು. ಆದರೆ ವಿಲೇಜ್ ಅಕೌಂಟೆಂಟ್ ಮಾಡಿರುವ ಎಡವಟ್ಟಿನಿಂದ ಆರ್ಟಿಸಿಯಲ್ಲಿ ಒಂದು ಎಕರೆ ಎಂದು ಪ್ರಿಂಟ್ ಆಗಿರುವುದನ್ನು ನೋಡಿದರೆ ನಾನಾ ಅನುಮಾನಗಳು ಮೂಡುತ್ತಿವೆ ಎಂದು ವಾರ್ಡ್ ಸಾರ್ವಜನಿಕರು ಆರೋಪಿಸಿದ್ದಾರೆ.
ರೈಲು ಹಳಿ ದಾಟಲು ಹರಸಾಹಸ : ಸ್ಮಶಾನಕ್ಕೆ ಹೋಗುವ ಮಾರ್ಗ ಮದ್ಯೆ ರೈಲ್ವೆ ಹಳಿ ಬಂದಿದ್ದು, ತಗ್ಗು, ಉಬ್ಬು ಗಳಿಂದ ಕೂಡಿದೆ. ಸ್ವಲ್ಪ ಯಾಮಾರಿದರೆ ಅಂತ್ಯ ಸಂಸ್ಕಾರಕ್ಕೆ ತೆರಳುವವರು ಕೈಕಾಲು ಮುರಿದುಕೊಳ್ಳುವ ಸಂಭವವಿದೆ ಎಂದು ಇಲ್ಲಿನ ಪ್ರಜ್ಞಾವಂತ ಯುವಪಡೆ ತಿಳಿಸಿದ್ದಾರೆ.
ಈಶ್ವರಪ್ಪರ ಪೊಳ್ಳು ಭರವಸೆ:
ಮಾಜಿ ಸಚಿವ, ಶಾಸಕ ಕೆ.ಎಸ್ ಈಶ್ವರಪ್ಪ ಅವರು ಚುನಾವಣಾ ಸಂದರ್ಭದಲ್ಲಿ ವಾರ್ಡ್ ಗೆ ಭೇಟಿ ನೀಡಿ ಮತ ಯಾಚಿಸುವ ಸಂದರ್ಭದಲ್ಲಿ ನಡಿಗೆಯ ಮೂಲಕವೇ ಸ್ಮಶಾನವನ್ನು ವೀಕ್ಷಿಸಿ
ನೀರು ಹಾಗೂ ಕಾಂಪೌಂಡ್ ವ್ಯವಸ್ಥೆ ಮಾಡಿಕೊಡುವುದಾಗಿ ಭರವಸೆ ನೀಡಿದ್ದರು ಆದರೆ ಶಾಸಕರಾಗಿ ಅವಧಿ ಮುಗಿಯುತ್ತಾ ಬಂದರೂ ಸಹ ಇಲ್ಲಿಗೆ ಭೇಟಿ ನೀಡದಿರುವುದು ಸಾರ್ವಜನಿಕರ ಅಕ್ರೋಶಕ್ಕೆ ಕಾರಣವಾಗಿದೆ.
ಮುಂಬರುವ ಚುನಾವಣಾ ಬಹಿಷ್ಕಾರಕ್ಕೆ ಯುವಕರ ನಿರ್ಧಾರ:
ಈ ವಾರ್ಡ್ ನ ಸಾರ್ವಜನಿಕರ ಹಲವು ದಿನಗಳ ಬೇಡಿಕೆ ಈಡೇರಿಸದಿರುವುದು ಇಲ್ಲಿನ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಚುನಾವಣೆಯನ್ನು ಬಹಿಷ್ಕಾರ ಮಾಡುವುದಾಗಿ ಸಾರ್ವಜನಿಕರು ನಿರ್ಧಾರ ಮಾಡಿರುವುದಾಗಿ ಮೂಲಗಳಿಂದ ಮಾಹಿತಿ ಬಂದಿದೆ.
ಇನ್ನಾದರೂ ಸಹ ಜಿಲ್ಲಾಧಿಕಾರಿಗಳು, ಜನಪ್ರತಿನಿಧಿಗಳಯ, ಪಾಲಿಕೆಯ ಅಧಿಕಾರಿಗಳು, ಕಂದಾಯ ಇಲಾಖೆ ಅಧಿಕಾರಿಗಳು ಕ್ರಮಕೈಗೊಳ್ಳುವರೇ ಹಾಗೂ ಈ ಬಡ ಜನರ ಹಲವು ದಿನಗಳಬೇಡಿಕೆ ಈಡೇರುವುದೇ ಎಂಬುದು ಕಾದು ನೋಡಬೇಕಿದೆ.
