ಶ್ರೀಕಾಂತ್ ವಿ ನಾಯಕ್ ತೀರ್ಥಹಳ್ಳಿ
ತೀರ್ಥಹಳ್ಳಿ: ಪಟ್ಟಣದ ತುಂಗಾ ಕಾಲೇಜು ಕುವೆಂಪು ವಿವಿ ಮಟ್ಟದಲ್ಲಿ ಅಮೋಘ ಸಾಧನೆ ಮಾಡಿದೆ. ಪ್ರಥಮ ರ‍್ಯಾಂಕ್ ಜೊತೆಗೆ ಒಟ್ಟು 4 ರ‍್ಯಾಂಕ್ ತುಂಗಾ ಮಹಾವಿದ್ಯಾಲಯ ಪಡೆದಿದೆ. ಜೊತೆಗೆ ಎಲ್ಲಾ 16 ವಿದ್ಯಾರ್ಥಿಗಳು ಮೊದಲ ಶ್ರೇಣಿಯೊಂದಿಗೆ ಪಾಸಾಗಿದ್ದಾರೆ. ಕುವೆಂಪು ವಿಶ್ವವಿದ್ಯಾಲಯದ 2021ರ ಎಂ.ಕಾಂ ಅಂತಿಮ ಪದವಿ ಪರೀಕ್ಷೆ ಫಲಿತಾಂಶದಲ್ಲಿ ತೀರ್ಥಹಳ್ಳಿ ತುಂಗಾ ಮಹಾವಿದ್ಯಾಲಯದ ಪ್ರತಿಷ್ಠಿತ ಮೊದಲ ರ‍್ಯಾಂಕ್ ಸಹಿತ ಒಟ್ಟು ನಾಲ್ಕು ರ‍್ಯಾಂಕ್ ಪಡೆಯುವ ಮೂಲಕ ಅಮೋಘ ಸಾಧನೆ ಮಾಡಿದೆ.
ಪ್ರತಿಭಾನ್ವಿತ ವಿದ್ಯಾರ್ಥಿನಿಯಾದ ಗಾಯತ್ರಿ ಕೆ. ಎ ಮೊದಲ ರ‍್ಯಾಂಕ್ ಸುನೈನ ಕೆ ಮತ್ತು ಜ್ಯೋತಿ ಪ್ರಭು 6ನೇ ರ‍್ಯಾಂಕ್ ಹಾಗೂ ಅನ್ವಿತಾ ಬಿ.ಜೆ 7 ನೇ ರ‍್ಯಾಂಕ್ ಪಡೆದು ತಾಲೂಕಿನ ಜನರ ಅಭಿನಂದನೆಗೆ ಪಾತ್ರರಾಗಿದ್ದಾರೆ. ಈ ಮೂಲಕ ತುಂಗಾ ಕಾಲೇಜು ವಿ. ವಿ ಮಟ್ಟದಲ್ಲಿ ಅತಿಹೆಚ್ಚು ಶ್ರೇಣಿ ಪಡೆದ ಖಾಸಗಿ ಅನುದಾನಿತ ಕಾಲೇಜು ಎಂಬ ಕೀರ್ತಿಗೆ ಪಾತ್ರವಾಗಿದೆ.
ಕಾಲೇಜಿನಲ್ಲಿ ಸ್ನಾತಕೋತ್ತರ ವಾಣಿಜ್ಯ ವಿಭಾಗ ಪ್ರಾರಂಭ ಗೊಂಡ ಕಳೆದ ಬ್ಯಾಚುಗಳಲ್ಲಿ ಪ್ರತಿವರ್ಷ 100% ಡಿಸ್ಟಿಂಕ್ಷನ್ ಫಲಿತಾಂಶದೊಂದಿಗೆ ಶ್ರೇಣಿಗಳಿಸುತ್ತಾ ಬಂದಿದ್ದು ಈವರೆಗೆ 11 ಶ್ರೇಣಿಗಳನ್ನು ಕಾಲೇಜು ತನ್ನದಾಗಿಸಿಕೊಂಡಿದೆ. ಈ ಸಾಧನೆಗೆ ಪಾತ್ರರಾದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಹಾಗೂ ಪರಿಣಾಮಕಾರಿ ಬೋಧನೆಯೊಂದಿಗೆ ಮಾರ್ಗದರ್ಶಿಸಿದ ವಿಭಾಗದ ಸಮರ್ಥ ಪ್ರಾಧ್ಯಾಪಕ ವೃಂದವನ್ನು ಹಾಗೂ ಸಹಕರಿಸಿದ ಪ್ರಾಂಶುಪಾಲರು, ಅಧ್ಯಾಪಕ ಸಿಬ್ಬಂದಿ ವರ್ಗದವರನ್ನು ಹಾಗೂ ಪ್ರೋತ್ಸಾಹಿಸಿದ ಪೋಷಕ ವೃಂದವನ್ನು ಕಾಲೇಜು ಆಡಳಿತ ಮಂಡಳಿ ಅಭಿನಂದಿಸಿದೆ.