ಬೆಂಗಳೂರು,ಆ.06:
ರಾಜ್ಯಾದ್ಯಂತ ಅದರಲ್ಲೂ ಮಲೆನಾಡು, ಕರಾವಳಿ ಭಾಗದಲ್ಲಿ ಮಳೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವ ಜತೆಗೆ ತುರ್ತು ನಿರ್ವಹಣೆಗಾಗಿ ತಕ್ಷಣ 50 ಕೋ. ರೂ. ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಇಂದಿಲ್ಲಿ ಆದೇಶಿಸಿದ್ದಾರೆ.
ಬೆಂಗಳೂರು ನಗರದ ಮಣಿಪಾಲ್ ಆಸ್ಪತ್ರೆಯಲ್ಲಿ ಕೋವಿಡ್-19ಕ್ಕೆ ಚಿಕಿತ್ಸೆ ಪಡೆಯುತ್ತಿರುವ ಅವರು ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ.
ಬಹುತೇಕ ಕಡೆ ಭಾರೀ ಮಳೆಯಾಗುತ್ತಿರುವ ಬಗ್ಗೆ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯ ಭಾಸ್ಕರ್ ಅವರೊಂದಿಗೆ ದೂರವಾಣಿ ಕರೆಯಲ್ಲಿ ಚರ್ಚಿಸಿದ ಯಡಿಯೂರಪ್ಪ ಅವರು ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಎಲ್ಲಾ ಜಿಲ್ಲಾಧಿಕಾರಿಗಳ ಜತೆ ಸಂಪರ್ಕ ಪಡೆಯುತ್ತಿರುವ ಯಡಿಯೂರಪ್ಪ ಅವರು ಎಲ್ಲ ಹಿರಿಯ ಅಧಿಕಾರಿಗಳು, ಜಿಲ್ಲಾಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ.
ಚಿಕ್ಕಮಗಳೂರಿನತ್ತ ಗಮನ
ಭಾರೀ ಮಳೆಯಿಂದ ಚಿಕ್ಕಮಗ ಳೂರಿನಲ್ಲಿ ಬಾಳೆ ತೋಟ ಹಾಳಾಗಿರುವ ಬಗ್ಗೆ ಮಾಧ್ಯಮದಲ್ಲಿ ವೀಕ್ಷಿಸಿದ ಮುಖ್ಯಮಂತ್ರಿ ಜಿಲ್ಲಾಧಿಕಾರಿಗಳಿಗೆ ಮುಂಜಾಗ್ರತಾ ಕ್ರಮಕ್ಕೆ ಸೂಕ್ತ ನಿರ್ದೇಶನ ನೀಡಿದರು.
ಚಿಕ್ಕಮಗಳೂರಿನ ಜಿಲ್ಲಾಧಿಕಾರಿಗೆ ಕರೆ ಮಾಡಿದ ಸಿಎಂ ಯಡಿಯೂರಪ್ಪ ಅವರು, ಮೂಡಿಗೆರೆ ತಾಲೂಕಿನ ಕೆಂಬತ್ಮಕ್ಕಿಯಲ್ಲಿ ಮಳೆಯಿಂದ 5 ಎಕರೆ ಬಾಳೆ ತೋಟಕ್ಕೆ ಹಾನಿಯಾಗಿದೆ. ತಾವೇ ಖುದ್ದಾಗಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಪರಿಹಾರ ನೀಡಬೇಕು ಎಂದು ಸೂಚನೆ ನೀಡಿದರು.
ಸಾಧನೆಗೆ ಮೆಚ್ಚುಗೆ
ಕನ್ನಡದಲ್ಲಿ ಯುಪಿಎಸ್ಸಿ ಪರೀಕ್ಷೆ ಬರೆದು ಉತ್ತೀರ್ಣರಾದ ದರ್ಶನ್ ಅವರಿಗೆ ಮುಖ್ಯ ಮಂತ್ರಿಗಳು ಅವರು ಅಭಿನಂದನೆ ಸಲ್ಲಿಸಿದ್ದಾರೆ. ದರ್ಶನ್ ಸಾಧನೆ ಬಗ್ಗೆ ಮಾಧ್ಯಮಗಳಿಂದ ಮಾಹಿತಿ ಪಡೆದ ಯಡಿಯೂರಪ್ಪ ಅವರು ಬಳಿಕ ದೂರವಾಣಿ ಕರೆ ಮಾಡಿ ದರ್ಶನ್ ಅವರನ್ನು ಅಭಿನಂದಿಸಿ ಅವರ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.