,

ಶಿವಮೊಗ್ಗ: ಯಾವುದೇ ವೃತ್ತಿಗೂ ನಿವೃತ್ತಿ ಇಲ್ಲ. ಬಯಸಿದಾಗ ಮಾತ್ರ ನಿವೃತ್ತಿ ಪಡೆಯಬಹುದು. ಸದಾ ಚಟುವಟಿಕೆಯಿಂದ ಇರುವರಿಗೆ ನಿವೃತ್ತಿಯ ಮಾತೇ ಇಲ್ಲ ಎಂದು ಶಾಸಕ ಆಯನೂರು ಮಂಜುನಾಥ್ ಹೇಳಿದ್ದಾರೆ.

ಅವರು ಇಂದು ಸರ್ಕಾರಿ ನೌಕರರ ಭವನದ ಸಭಾಂಗಣದಲ್ಲಿ ಶಿವಮೊಗ್ಗ ಸರ್ಕಾರಿ ನಿವೃತ್ತಿ ನೌಕರರ ಸಂಗದ ವತಿಯಿಂದ 2019/20 ಮತ್ತು 2020/21 ನೇ ಸಾಲಿನ ಸರ್ವ ಸದಸ್ಯರ 53 ನೇ ವಾರ್ಷಿಕ ಮಹಾಸಭೆ ಹಾಗೂ ಹಿರಿಯ ಸದಸ್ಯರಿಗೆ ಸನ್ಮಾನ ಮತ್ತು ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ನಿವೃತ್ತಿ ಆಯ್ತು ಎಂದು ಮನೆಯಲ್ಲೇ ಕುಳಿತರೆ ಮಾನಸಿಕವಾಗಿ ಕುಗ್ಗಿ ಬಹುಬೇಗ ಕರಗಿ ಹೋಗುತ್ತಾರೆ. ಜೀವನ ಪೂರ್ತಿ ಓಡಿದ ಗಾಡಿ ಗ್ಯಾರೇಜ್ ನಲ್ಲಿ ನಿಲ್ಲಿಸದರೆ ಹೇಗೆ ತುಕ್ಕು ಹಿಡಿಯುತ್ತದೆಯೋ ಹಾಗೆ ನಿವೃತ್ತ ನೌಕರರ ಜೀವನ ಕೂಡ ಆಗುತ್ತದೆ. ನಿವೃತ್ತಿ ಆಯಿತೆಂದು ಆತಂಕ ಪಡದೇ ತಮ್ಮ ಅನುಭವ ಮತ್ತು ಮಾರ್ಗದರ್ಶನವನ್ನು ಕಿರಿಯರಿಗೆ ನೀಡಿ ಎಂದರು.ಕೆಲವು ಮನೆಗಳಲ್ಲಿ ಹಿರಿತನಕ್ಕೆ ಗೌರವ ಸಿಕ್ಕಿದರೆ ಅವರು ಅದೃಷ್ಟಶಾಲಿ. ಯಾರಿಗೆ ಎತ್ತಿ ಆಡಿಸಿ ಕೈಹಿಡಿದು ಬೆಳೆಸುತ್ತಾರೋ ಅವರೇ ವಯಸ್ಸಾಗಿದೆ ಎಂಬ ಒಂದೇ ಕಾರಣಕ್ಕೆ ಬುದ್ಧಿ ಹೇಳಲು ಬರುತ್ತಾರೆ. ಅವರು ಕೂಡ ಒಂದು ದಿನ ವೃದ್ಧರಾಗುತ್ತಾರೆ ಎಂಬ ಜ್ಞಾನ ಕೆಲವರಿಗೆ ಇರುವುದಿಲ್ಲ. ಅನೇಕ ಕಡೆ ಹಿರಿಯತ ಪೆನ್ಷನ್ ಗಾಗಿಯೇ ಪ್ರೀತಿ ತೋರಿಸುವ ಮಕ್ಕಳಿದ್ದಾರೆ. ಪೆನ್ಷನ್ ಬರುವ ದಿನ ಹೊಸ ಡ್ರೆಸ್ ನೀಡಿ, ಮಸಾಲೆ ದೋಸೆ ತಿನ್ನಿಸಿ ಆಮೇಲೆ ಮರೆತುಬಿಡುತ್ತಾರೆ ಎಂದರು.

ಸರ್ಕಾರಿ ನೌಕರರು ನಿವೃತ್ತರಾಗುವವರೆಗೆ ಸೇವೆ ಸಲ್ಲಿಸಿರುತ್ತಾರೆ. ನಿವೃತ್ತಿ ನಂತರ ಹಿರಿಯ ನಾಗರಿಕರಿಗೆ ಸಿಗುವ ಎಲ್ಲಾ ಸೌಲಭ್ಯಗಳು ಕೂಡ ಸಾಮಾಜಿಕ ನ್ಯಾಯದ ಚೌಕಟ್ಟಿನೊಳಗೆ ಅವರಿಗೂ ಸಿಗಲೇಬೇಕು. ಆರೋಗ್ಯ ಸಂಜೀವಿನಿ ಇರಬಹುದು, ಸುವರ್ಣ ಆರೋಗ್ಯ ಯೋಜನೆ ಇರಬಹುದು ಎಲ್ಲದಕ್ಕೂ ಅವರು ಅರ್ಹರು. ಎಜುಕೇಷನ್ ಮತ್ತು ಮೆಡಿಸನ್ ಎರಡೂ ದುಬಾರಿಯಾಗಿರುವ ಕಾಲದಲ್ಲಿ ನಿವೃತ್ತರಿಗೆ ಅದನ್ನು ಸರ್ಕಾರದಿಂದ ಪಡೆಯುವ ಹಕ್ಕಿದೆ ಎಂದರು.

ರಾಜಕಾರಣದಲ್ಲಿ ಒಮ್ಮೆ ಶಾಸಕನಾದರೆ ಆತನಿಗೆ 45 ಸಾವಿರ ರೂ. ಮಾಸಾಶನ ಜೊತೆಗೆ ಆರೋಗ್ಯ ಸೇರಿದಂತೆ ಎಲ್ಲಾ ಸೌಲಭ್ಯ ಸಿಗುತ್ತವೆ ಮತ್ತೆ ನಿಮಗೇಕೆ ಇಲ್ಲ. ನಿಮಗೂ ಈ ಸೌಲಭ್ಯ ಸಿಗುವಂತಾಗಲು ಸರ್ಕಾರಕ್ಕೆ ಒತ್ತಾಯಿಸುತ್ತೇನೆ ಎಂದರು.

ಚಿವ ಕೆ.ಎಸ್. ಈಶ್ವರಪ್ಪ ಮಾತನಾಡಿ, ನಿಮ್ಮ ಅನುಭವ ಮತ್ತು ಜ್ಞಾನ ರಾಜ್ಯಕ್ಕೆ ಬೇಕೆ ಬೇಕು. ಸಮಾಜಕ್ಕೆ ಕೂಡ ನಿಮ್ಮ ಮಾರ್ಗದರ್ಶನ ಬೇಕಿದೆ. ನಿವೃತ್ತ ನೌಕರರನ್ನು ನೋಡಿದಾಗ ಅವರು ನಿವೃತ್ತರಾಗಿದ್ದಾರೆ ಎಂದು ನನಗೆ ಅನಿಸುತ್ತಿಲ್ಲ. ಅಷ್ಟು ಚಟುವಟಿಕೆಯಿಂದ ಇದ್ದಾರೆ. ನಿಮ್ಮ ಅನೇಕ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಬದ್ಧವಾಗಿದೆ ಎಂದರು.

ಈ ಸಂದರ್ಭದಲ್ಲಿ ಹಲವಾರು ಹಿರಿಯ ಸದಸ್ಯರನ್ನು ಸನ್ಮಾನಿಸಲಾಯಿತು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ. ನಾಗೇಂದ್ರ ಎಫ್. ಹೊನ್ನಳ್ಳಿ, ಮುಖ್ಯ ಗ್ರಂಥಾಲಯ ಅಧಿಕಾರಿ ಎಂ.ಆರ್. ಹರೀಶ್, ಸಂಘದ ವಿಭಾಗೀಯ ಕಾರ್ಯದರ್ಶಿ ಆರ್. ಹನುಮಂತಪ್ಪ, ಎಸ್. ಷಣ್ಮುಖಪ್ಪ, ಆರ್. ನಂದಿಬಸಪ್ಪ ಮೊದಲಾದವರಿದ್ದರು. ಸಂಘದ ಡಿ.ಎಂ. ಚಂದ್ರಶೇಖರ್ ಅಧ್ಯಕ್ಷತೆ ವಹಿಸಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!