ಶಿವಮೊಗ್ಗ, ಅ.19:
ವಾಲ್ಮೀಕಿ ರಚಿತ ರಾಮಾಯಣ ಕೇವಲ ಒಂದು ಪುಸ್ತಕ ಅಲ್ಲ. ಬದಲಾಗಿ ಎಲ್ಲರ ಇಡೀ ಬದುಕಿನ ಸಾರ. ಭಾರತೀಯ ಸಂಸ್ಕೃತಿಯ ಪ್ರತೀಕ ಹಾಗೂ ಜೀವನ ಮಾರ್ಗದರ್ಶಿಕೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಎಸ್.ಈಶ್ವರಪ್ಪ ನುಡಿದರು.
ಜಿಲ್ಲಾಡಳಿತ, ಜಿ.ಪಂ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ,ಮಹಾನಗರಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಇಂದು ಕುವೆಂಪು ರಂಗಮಂದಿರದಲ್ಲಿ ಏರ್ಪಡಿಸಲಾಗಿದ್ದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕಾದ ಮೌಲ್ಯಭರಿತ ಸಂಹಿತೆ ರಾಮಾಯಣ. ಹಾಗೂ ನಮ್ಮ ಸಂಸ್ಕೃತಿಯಲ್ಲಿ ಏಕಪತ್ನಿತ್ವ ಪ್ರತಿಪಾದಿಸಿದ ಸಂಹಿತೆ. ಸೀತೆಯ ಮೂಲಕ ಪಾವಿತ್ರ್ಯತೆ, ಲಕ್ಷ್ಮಣ, ಭರತರ ಮೂಲಕ ಭ್ರಾತ್ವತ್ವ, ತಂದೆ-ತಾಯಿ ಗೌರವ ಸೇರಿದಂತೆ ಮಾದರಿ, ಆದರ್ಶ ಜೀವನ ನಡೆಸಲು ದಾರಿ ತೋರುವ ದೀಪಿಕೆ ಇದಾಗಿದ್ದು, ಇಡೀ ವಿಶ್ವವೇ ರಾಮಾಯಣವನ್ನು ಓದುತ್ತಿದೆ.
ರಾಮ ಜನ್ಮಭೂಮಿ ಅಯೋಧ್ಯೆ ಎಂಬುದರಲ್ಲಿ ಅತೀ ಸಾಮಾನ್ಯರಿಂದ ಹಿಡಿದು ವಿದೇಶಿಗರಿಗೂ ಗೊಂದಲವಿಲ್ಲ. ಆದರೆ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಕೆಲವರು ನಮ್ಮ ದೇಶದವರು ಈ ಬಗ್ಗೆ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದ ಅವರು, ಅಯೋಧ್ಯೆ ರಾಮಜನ್ಮ ಭೂಮಿ ಎಂಬ ಬಗ್ಗೆ ರಾಮಾಯಣ ಮಹಾಕಾವ್ಯದಲ್ಲೂ ಉಲ್ಲೇಖವಿದೆ ವೆಂದರು.
ಹಿಂದುಳಿದ ಸಮಾಜದಲ್ಲಿ ಹುಟ್ಟಿದ ವಾಲ್ಮೀಕಿಯವರ ಔನ್ನತ್ಯಕ್ಕೆ ಸರಿಸಾಟಿ ಯಾರಿಲ್ಲ. ಅವರು ತಮ್ಮ ಉನ್ನತ ಜ್ಞಾನದಿಂದ ಮೇಲ್ದರ್ಜೆಗೇರಿದ್ದು, ರಾಮಾಯಣ ಎಲ್ಲರ ಜೀವನದ ದಾರಿದೀಪ ಮತ್ತು ಉತ್ತಮ ಮಾರ್ಗದರ್ಶಿಕೆ. ವಾಲ್ಮೀಕಿಯವರ ರಕ್ತ ನಮ್ಮೆಲ್ಲರ ಮೈಯಲ್ಲಿ ಹರಿಯುತ್ತಿದ್ದು, ಅವರು ತೋರಿದ ಹಾದಿಯಲ್ಲಿ ನಡೆದರೆ ನಾವು ಅವರಿಗೆ ನೀಡುವ ದೊಡ್ಡ ಗೌರವ.
ಕುವೆಂಪು ವಿವಿ ಕನ್ನಡ ಭಾರತಿಯ ಪ್ರಾಧ್ಯಾಪಕ ಡಾ.ಶಿವಾನಂದ ಕೆಳಗಿನಮನಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ಶಿಕ್ಷಣ ತಜ್ಞ, ಕವಿ, ತತ್ವಜ್ಞಾನಿ, ಸಮಾಜ ಶಾಸ್ತ್ರಜ್ಞ, ಮಹಾನ್ ಮಾನವತಾವಾದಿ ಮಹರ್ಷಿ ವಾಲ್ಮೀಕಿ ಸಂಸ್ಕೃತ ಸಾಹಿತ್ಯದ ಪ್ರಥಮ ಕವಿ. ಹಾಗೂ ಎಲ್ಲ ಶಾಸ್ತ್ರಗಳು, ಕಾವ್ಯಗಳಿಗೆ ಸ್ಪೂರ್ತಿಯ ಸೆಲೆ. ಸಂಶೋಧಕರಿಗೆ ಮುಖ್ಯ ನೆಲೆ ಒದಗಿಸಿದವರು. ವೇದಗಳ ಅಂತರಾಳದ ತತ್ವ ಹೀರಿಕೊಂಡು , ಅನುಭಾವದಿಂದ ರಚಿಸಿರುವ ರಾಮಾಯಣ ಮನುಷ್ಯ ಸಕಲ ರಾಗಗಳ, ದುರಿತಗಳಿಗೆ ಪರಿಹಾರ ಒದಗಿಸುವ ಕೈಪಿಡಿ. ಇಡೀ ಮನುಕುಲದ ಸೌಖ್ಯ, ರಕ್ಷಣೆ, ಬೆಳವಣಿಗೆ ಬಗ್ಗೆ ಹೇಳುವ ಮಾರ್ಗದರ್ಶಿಕೆ.
ಬಿಯಾಸ್ ನದಿ ತಟದಲ್ಲಿ ವಾಸಿಸುತ್ತಿದ್ದ ರತ್ಮಾಕರ ಎಂಬ ವಲ್ಯ ಅಂದರೆ ಕಳ್ಳ ತನ್ನ ಧ್ಯಾನ, ತಪಸ್ಸಿನಿಂದ ಜ್ಞಾನೋದಯ ಹೊಂದಿದ ಉಪಕಥೆ ಗಳಿ ಇದ್ದು ಮಿಲನ ಕ್ರೌಂಚಪಕ್ಷಿ ವಧೆಯಿಂದ ಪ್ರೇರಿತರಾಗಿ ಹೆಣ್ಣು ಒಂದು ಸಂಸಾರಕ್ಕೆ ಎಷ್ಟು ಮುಖ್ಯ ಎಂದು ತಿಳಿಸಲು ಗೃಹಸ್ಥಾಶ್ರಮ ಧರ್ಮ ವನ್ನು ಇಡೀ ರಾಮಾಯಣದಲ್ಲಿ ಸಾರಿದ್ದಾರೆ.
ಸಾಮಾನ್ಯನ ಮತ್ತು ರಾಜನ ಸಂಸಾರದಲ್ಲಿ ಅಂತಹ ವ್ಯತ್ಯಾಸವಿಲ್ಲ ಎಂದು ತಿಳಿಸಿದ್ದಾರೆ.
ರಾಮ ಎಂದರೆ ಆನಂದ, ಸಮೃದ್ದಿ. ರಾಮ ಪ್ರಜಾಪ್ರಭುತ್ವದ ಪ್ರತಿನಿಧಿ. ಆದರ್ಶ ಪುರುಷ. ರಾಜಕೀಯ ಸೂಕ್ಷ್ಮಗ್ರಾಹಿ. ರಾಮಾಯಣದಲ್ಲಿ ಏಕಪತ್ನಿ ತತ್ವ ಸಾರುವ ಮೂಲಕ ಇದು ಸಮಾಜದ ಸ್ವಾಸ್ಥ್ಯಕ್ಕೆ ಎಷ್ಟು ಮುಖ್ಯ ಎಂಬುದನ್ನು ತಿಳಿಸಿದ್ದಾರೆ ವಾಲ್ಮೀಕಿ. ಇಂದು ಜಾಗತಿಕ ಮಟ್ಟದಲ್ಲಿ ಇದರ ಸ್ವೀಕೃತಿ ಆಗಿದ್ದು ಪರಿಪಾಲಿಸಲಾಗುತ್ತಿದೆ. ಇಂತಹ ಮಹಾನ್ ಚೇತನರ ಜಯಂತಿ ಕೇವಲ ಒಂದು ದಿನಕ್ಕೆ ಸೀಮಿತ ಆಗಬಾರದುವೆಂದ ಅವರು ಭಾರತೀಯ ಸಂಸ್ಕೃತಿಯ ಅಡಿಪಾಯ ಆಗಿರುವ ವಾಲ್ಮೀಕಿ ಏಕೆ ಜನಪ್ರಿಯ ನಾಯಕನಾಗಲಿಲ್ಲ. ಅವರ ಅಧ್ಯಯನ ಕೇಂದ್ರಗಳು, ಭವನ, ಪೀಠಗಳಿಲ್ಲ ಎಂಬ ತೊಡಕಿನ ಪ್ರಶ್ನೆಗಳಿವೆ ಎಂದರು.
ವಿಧಾನ ಪರಿಷತ್ ಶಾಸಕ ಆಯನೂರು ಮಂಜುನಾಥ್ ಮಾತನಾಡಿ, ಕೇವಲ ರಾಮನ ಹೆಸರು ಮಾತ್ರವಲ್ಲ ಅವರ ಗುಣಗಳನ್ನು ಆರಾಧಿಸಬೇಕು. ಅವರ ಆದರ್ಶಗಳನ್ನು ಮೈಗೂಡಿಸಿಕೊಳ್ಳುವ ಪ್ರಯತ್ನವಾದಲ್ಲಿ ಜಯಂತಿ ಸಾರ್ಥಕ. ಕೆಳವರ್ಗದವರೇ ಮಹರ್ಷಿಗಳಾಗಿರುವುದು. ಸಾಧನೆ ಯಾರ ಸ್ವತ್ತು ಅಲ್ಲ. ಇಂತಹ ಸಾಧನೆಗೆ ವಾಲ್ಮೀಕಿ ಪ್ರೆರಣೆ ಎಂದ ಅವರು ಬ್ಯಾಕ್ಲಾಗ್ ಹುದ್ದೆಗಳನ್ನು ಭರ್ತಿ ಮಾಡಬೇಕೆಂದು ಸಚಿವರಿಗೆ ಮನವಿ ಮಾಡಿದ ಅವರು, ನಗರದ ಶಾಲೆ-ಕಾಲೇಜುಗಳಲ್ಲಿ ಗಾಂಜಾ ಅಮಲು ಹೆಚ್ಚಿದ್ದು ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸಿ ಕ್ರಮ ವಹಿಸಬೇಕು ಎಂದರು.
ಇದೇ ಸಂದರ್ಭದಲ್ಲಿ ಎಸ್
ಎಸ್ಎಲ್ ಸಿ ಹಾಗೂ ಪಿಯುಸಿ ಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ನೀಡಲಾಯಿತು. ಹಾಗು ಅಂತರಜಾತಿ ವಿವಾಹಿತ ಫಲಾನುಭವಿಗಳಿಗೆ ಸೌಲಭ್ಯ ವಿತರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಶಾಸಕ ಆರ್.ಪ್ರಸನ್ನಕುಮಾರ್, ಸೂಡಾ ಅಧ್ಯಕ್ಷ ಜ್ಯೋತಿಪ್ರಕಾಶ್, ದತ್ತಾತ್ರಿ, ಭದ್ರಾ ಕಾಡಾ ಅಧ್ಯಕೆ ಪವಿತ್ರಾ ರಾಮಯ್ಯ, ಪಾಲಿಕೆ ಸದಸ್ಯರಾದ ಶಿವಾಜಿ, ವಿಶ್ವಾಸ್ ,ವಾಲ್ಮೀಕಿ ಸಮಾಜದ ಮುಖಂಡರಾದ ಲಕ್ಷ್ಮಣಪ್ಪ, ರೂಪಾ ಲಕ್ಷ್ಮಣ, ನಾಗೇಶ್, ಸೀತಾರಾಂ, ನಾಗರಾಜ್, ವನಜಾಕ್ಷಿ, ಮೋಹನ, ಕ.ಮ.ವಾ.ಅ.ನಿಗಮದ ನಿರ್ದೇಶಕ ನಾಗರಾಜ್.ಬಿ.ಎಸ್, ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್, ಜಿ.ಪಂ. ಸಿಇಓ ಎಂ.ಎಲ್.ವೈಶಾಲಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಂ.ಲಕ್ಷ್ಮೀಪ್ರಸಾದ್, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಅಜ್ಜಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಉಮೇಶ್. ಹೆಚ್ ಉಪಸ್ಥಿತರಿದ್ದರು.