ಭದ್ರಾವತಿ,ಅ. 19: ಅವಾಚ್ಯ ಶಬ್ಧಗಳಿಂದ ನಿಂದನೆ ಮಾಡಿದ ಆರೋಪದ ಮೇರೆಗೆ ತಾಲೂಕಿನ ಹೊಳೆಹೊನ್ನೂರು ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ಗಿರಿಧರ್ ಅವರನ್ನು ಜಿಲ್ಲಾ ರಕ್ಷಣಾಧಿಕಾರಿ ಲಕ್ಷ್ಮಿಪ್ರಸಾದ್ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಹೊಳೆಹೊನ್ನೂರು ಪೊಲೀಸ್ ಠಾಣೆಯ ಗಿರಿಧರ್ ಅಮಾನತಾದ ಹೆಡ್ ಕಾನ್ಸ್ಟೇಬಲ್ ಆಗಿದ್ದಾರೆ. ಇತ್ತೀವೆಗಷ್ಟೇ ವಿನೋಬನಗರ ಠಾಣೆಯಿಂದ ಹೊಳೆಹೊನ್ನೂರಿಗೆ ವರ್ಗವಾಗಿದ್ದರು.
ಅಲ್ಲಿ ಗಿರಿಧರ್ 112 ವಾಹನದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ತಾಲೂಕಿನ ಯಡೇಹಳ್ಳಿ ಗ್ರಾಮಕ್ಕೆ ಕರ್ತವ್ಯಕ್ಕೆ ಹೋದಾಗ ವೀರಶೈವ ಸಮಾಜದವರನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದರು ಎಂದು ಆರೋಪಿಸಲಾಗಿತ್ತು.
ಈ ಕುರಿತು ಗ್ರಾಮಸ್ಥರು ಡಿವೈಎಸ್ಪಿ ಹಾಗೂ ಎಸ್ಪಿಗೆ ದೂರು ನೀಡಿದ್ದರು. ದೂರನ್ನು ಪರಿಶೀಲಿಸಿದ ಎಸ್ಪಿ ಲಕ್ಷ್ಮಿಪ್ರಸಾದ್ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಗಿರಿಧರ್ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.