ಚಿತ್ರದುರ್ಗ: ಅಡುಗೆ ಅನಿಲ ಸೋರಿಕೆಯಿಂದ ಸಂಭವಿಸಿದ ಆಕಸ್ಮಿಕ ಅಗ್ನಿ ಅವಘಡದಲ್ಲಿ ವ್ಯಕ್ತಿಯೊಬ್ಬರು ಸಜೀವ ದಹನವಾದ ಘಟನೆ ಹೊಳಲ್ಕೆರೆ ತಾಲ್ಲೂಕಿನ ತೇಕಲವಟ್ಟಿ ಗ್ರಾಮದಲ್ಲಿ ವರದಿಯಾಗಿದೆ.
ಪ್ರಕಾಶ್ (54) ಮೃತ ವ್ಯಕ್ತಿ. ಇವರ ಪತ್ನಿ ಸರೋಜಮ್ಮ (45) ಗಂಭೀರವಾಗಿ ಗಾಯಗೊಂಡಿದ್ದು, ದಾವಣಗೆರೆಯ ಎಸ್.ಎಸ್.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಂಗಳವಾರ ತಡರಾತ್ರಿ ಮನೆಗೆ ಬೆಂಕಿ ಬಿದ್ದಿದೆ. ಕಿರುಚಾಟ ಕಂಡು ನೆರೆಹೊರೆಯವರು ಧಾವಿಸಿ ಬೆಂಕಿ ನಂದಿಸಲು ಪ್ರಯತ್ನಿಸಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಸರೋಜಮ್ಮ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಪ್ರಕಾಶ್ ಅವರು ಮಲಗಿದ ಸ್ಥಿತಿಯಲ್ಲಿಯೇ ದಹನವಾಗಿದ್ದಾರೆ. ಮೊದಲ ಮಹಡಿಯಲ್ಲಿ ಮಲಗಿದ್ದ ಪುತ್ರ ಶಿವರಾಜ್ ಅಪಾಯದಿಂದ ಪಾರಾಗಿದ್ದಾರೆ.