ಶಿವಮೊಗ್ಗ:-
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಜನಪರ ಒಲವಿನ, ರೈತಪರ ಕಾಳಜಿಯ ಜನ ನಾಯಕರಾಗಿದ್ದು, ತಮ್ಮ ಆಡಳಿತದಲ್ಲಿ ಬಿಜೆಪಿಯ ತತ್ವ, ಸಿದ್ಧಾಂತಗಳಿಗೆ ಎಲ್ಲಿಯೂ ಚ್ಯುತಿ ಬರದಂತೆ ಸೇವೆ ಸಲ್ಲಿಸಿದ್ದು, ಅವರೊಬ್ಬ ಮಾಸ್ ಲೀಡರ್ ಎಂದು ವಿಧಾನ ಪರಿಷತ್ ಸದಸ್ಯ ಎಸ್. ರುದ್ರೇಗೌಡರು ತಿಳಿಸಿದ್ದಾರೆ.
ಆದರೆ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಎಂಬ ವಿಚಾರ ಚರ್ಚೆಯಲ್ಲಿದೆ. ಆದರೆ ಇದು ಬರೀ ವದಂತಿ ಮಾತ್ರ ಎಂದಿರುವ ರುದ್ರೇಗೌಡ ಅವರು, ಬಿಎಸ್ವೈ ಬದಲಾವಣೆ ಪ್ರಸ್ತಾಪವೇ ಪಕ್ಷದ ಹೈ ಕಮಾಂಡ್ ಮುಂದೆ ಇಲ್ಲವೇ ಇಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.
ಇನ್ನೆರಡು ವರ್ಷ ಬಿಎಸ್ವೈ ಅವರೇ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಲಿದ್ದಾರೆ. ಈ ಬಗ್ಗೆ ಯಾವುದೇ ಸಂಶಯವು ಬೇಡ ಎಂದು ತಿಳಿಸಿರುವ ಅವರು, ಮುಖ್ಯಮಂತ್ರಿ ಸ್ಥಾನದಿಂದ ಬಿಎಸ್ವೈ ಬದಲಾವಣೆ ಎಂಬ ವದಂತಿ ಬಗ್ಗೆ ಪಕ್ಷದ ಹೈ ಕಮಾಂಡ್ ಸೂಕ್ತ ಸ್ಪಷ್ಟನೆ ನೀಡುವ ಮೂಲಕ ಎಲ್ಲಾ ಗೊಂದಲಗಳಿಗೂ ತೆರೆ ಎಳೆಯಲು ಮನವಿ ಮಾಡಿದ್ದಾರೆ.
ಬಿಎಸ್ವೈ ಮುಖ್ಯಮಂತ್ರಿ ಆದ ನಂತರ ಕರ್ನಾಟಕ ರಾಜ್ಯದ ಅಭಿವೃದ್ಧಿಯ ಚಿತ್ರಣವೇ ಬದಲಾಗಿದೆ. ಹಾಗೆಯೇ ಎಲ್ಲಾ ವರ್ಗದವರ ಹಿತ ಚಿಂತನೆಗಾಗಿ ಅವರು ಹಲವು ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿ ದ್ದಾರೆ. ಅವು ಯಶಸ್ವಿಯೂ ಆಗುತ್ತಿದೆ ಎಂದು ರುದ್ರೇಗೌಡರು ತಿಳಿಸಿದ್ದಾರೆ.
ಬಿಎಸ್ವೈ ಅವರನ್ನು ಸಿಎಂ ಸ್ಥಾನದಿಂದ ಬದಲಿಸುವ ಕುರಿತು ಈಗಾಗಲೇ ರಾಜ್ಯದ ಬಹುತೇಕ ಸ್ವಾಮೀಜಿಗಳು ಆತಂಕ ವ್ಯಕ್ತ ಪಡಿಸಿದ್ದಾರೆ. ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅವರು ಪಕ್ಷಭೇದ ಮರೆತು ಬಿಎಸ್ವೈ ಬದಲಿಸಿದರೆ ಕರ್ನಾಟಕದಲ್ಲಿ ಬಿಜೆಪಿಯ ಸರ್ವನಾಶ ಆದೀತು ಎಂದು ಎಚ್ಚರಿಸಿದ್ದಾರೆ. ಅದೇ ರೀತಿ ಮಾಜಿ ಸಚಿವ ಮತ್ತು ಕಾಂಗ್ರೆಸ್ ಮುಖಂಡ ಎಂ.ಬಿ. ಪಾಟೀಲ್ ಸಹ ಬಿಎಸ್ವೈ ಪರ ಬ್ಯಾಟ್ ಬೀಸಿದ್ದಾರೆ.
ಬಿಎಸ್ವೈ ಪರವಾಗಿ ಬಹುತೇಕ ಶಾಸಕರಿದ್ದಾರೆ. ಒಂದು ವೇಳೆ ಬಿಎಸ್ವೈ ಬದಲಿಸುವ ಹುನ್ನಾರ ನಡೆದರೆ ಈ ಎಲ್ಲಾ ಶಾಸಕರು ಸಿಡಿದೇಳುವುದು ಖಚಿತ ಎಂಬುದು ಬಿಜೆಪಿ ಹೈಕಮಾಂಡ್ಗೂ ಅರಿವಿಗಿದೆ. ಹಾಗಾಗಿ ಸುಳ್ಳು ವದಂತಿಗಳ ಬಗ್ಗೆ ಪಕ್ಷದ ಹೈ ಕಮಾಂಡ್ ಹಾಗೂ ರಾಜ್ಯದ ಬಿಜೆಪಿ ಅಧ್ಯಕ್ಷರು ಸ್ಪಷ್ಟನೆ ನೀಡುವುದು ಸೂಕ್ತ ಎಂದಿದ್ದಾರೆ.
ರುದ್ರೇಗೌಡರ ಹೇಳಿಕೆಗೆ ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್, ವೀರಶೈವ ಸಮಾಜದ ಅಧ್ಯಕ್ಷ ಎನ್.ಜೆ. ರಾಜಶೇಖರ್, ಸೂಡಾ ಅಧ್ಯಕ್ಷ ಎಸ್.ಎಸ್. ಜ್ಯೋತಿ ಪ್ರಕಾಶ್, ಪ್ರಮುಖರಾದ ಬಳ್ಳೆಕೆರೆ ಸಂತೋಷ್ ಹಾಗೂ ಜಿಲ್ಲೆಯ ಎಲ್ಲಾ ಶಾಸಕರು ಧ್ವನಿ ಗೂಡಿಸಿದ್ದಾರೆ.