ಡಾ. ಡಿ.ಸಿ. ರಾಜಪ್ಪ, ಐಪಿಎಸ್ಡಿ.ಐ.ಜಿ.ಪಿ (ನಿವೃತ್ತ), ಬೆಂಗಳೂರು.  

ನಾ ಕಂಡ ಅಪರೂಪದ ರಾಜಕಾರಣಿ ಅವರು. ‘ಅಪರೂಪ’ ಅನ್ನೋದನ್ನು ನಾನು ಕೇವಲ ಮಾತಿಗಾಗಿ ಅಥವಾ ಜನ್ಮದಿನದ ನಿಮಿತ್ತ ಅವರ ಗುಣಗಾನಕ್ಕಾಗಿ ಹೇಳುತ್ತಿರುವುದಲ್ಲ. ಅವರ ಆ ‘ರೂಪ’, ನನ್ನೊಳಗೆ ಇದ್ದ ಒಬ್ಬ ರಾಜಕಾರಣಿಯ ಕುರಿತಾದ ‘ಅಪ’ಕಲ್ಪನೆಗಳನ್ನೆಲ್ಲ ದೂರಗೊಳಿಸಿ, ರಾಜಕಾರಣಿಯ ಜೀವನದ ಬಗ್ಗೆ ಅಚ್ಚರಿಯನ್ನು ಮೂಡಿಸಿದ ಪ್ರತಿರೂಪವಾಗಿ ನನ್ನನ್ನು ಆವರಿಸಿರುವುದರಿಂದ ಅವರನ್ನು ಅಪರೂಪದ ರಾಜಕಾರಣಿ ಎಂದೆ. 

ನನಗೆ ಎಂಪಿ ಪ್ರಕಾಶರ ಪರಿಚಯವಾದದ್ದು, ನನ್ನ ಆತ್ಮೀಯ ಗೆಳೆಯರಾದ ಲಂಕೇಶ್ ಪತ್ರಿಕೆಯ ಕಟ್ಟೇಪುರಾಣ ಖ್ಯಾತಿಯ ಬಿ.ಚಂದ್ರೇಗೌಡರ ಮೂಲಕ. ಅದಕ್ಕು ಮೊದಲು ನಾನು ಶಿವಮೊಗ್ಗದಲ್ಲಿ ಅಡಿಷನಲ್ಎಸ್ಪಿಯಾಗಿದ್ದಾಗಲೇ, ಎಂಪಿಪಿಯವರ ಪರಿಚಯವಾಗಿತ್ತಾದರು, ಅದು ಒಬ್ಬ ಪೊಲೀಸ್ ಅಧಿಕಾರಿ ಹಾಗೂ ಮಂತ್ರಿ ನಡುವಿನ ಪರಿಚಯದಂತಿತ್ತಷ್ಟೆ. ಆದರೆ ನಾನು ಬೆಂಗಳೂರಿನಲ್ಲಿ ಸ್ಟೇಟ್ ಕ್ರೈಮ್ ರೆಕಾರ್ಡ್ ಬ್ಯೂರೋದಲ್ಲಿ ಎಸ್ಪಿಯಾಗಿದ್ದಾಗ, ಒಮ್ಮೆ ಚಂದ್ರೇಗೌಡರು ನನ್ನನ್ನು ರಂಗಭಾರತಿತಂಡದವರು ಹೂವಿನಹಡಗಲಿಯಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮಕ್ಕೆ ಕರೆದೊಯ್ದಿದ್ದರು. ಅಲ್ಲಿನ ಐಬಿಯಲ್ಲಿ ನನ್ನನ್ನು ಎಂಪಿ ಪ್ರಕಾಶರಿಗೆ ಚಂದ್ರೇಗೌಡರು ಪರಿಚಯ ಮಾಡಿಕೊಟ್ಟರು. ವೃತ್ತಿಯಲ್ಲಿ ಪೊಲೀಸ್ ಅಧಿಕಾರಿಯಾಗಿದ್ದರೂ, ಪ್ರವೃತ್ತಿಯಿಂದ ಸಾಹಿತ್ಯ-ಕಾವ್ಯದ ಒಡನಾಟ ಹೊಂದಿದ್ದ ನನ್ನ ಬಗ್ಗೆ ಒಂದೆರಡು ಮಾತುಗಳನ್ನೇಳಿ, ನನ್ನ ಪಿಎಚ್ಡಿ ಪ್ರಬಂಧದ ಭಾಗವಾಗಿ ನಾನು ಸಂಶೋಧನೆ ನಡೆಸಿ ರಚಿಸಿದ್ದ ‘ಮೈಸೂರು ರಾಜ್ಯದಲ್ಲಿ ವಾಣಿಜ್ಯ ಮತ್ತು ಕರಕುಶಲ ಕಲೆಗಳು’ ಕೃತಿಯ ಬಗ್ಗೆಯೂ ಮಾತಾಡಿದರು. ಸಾಮಾನ್ಯವಾಗಿ ನನ್ನ ಜೊತೆ ನನ್ನ ಕೃತಿಗಳೂ ಸಂಗಾತಿಗಳಂತೆಯೇ ತಿರುಗಾಡುತ್ತಿರುತ್ತವೆ. ಎಂಪಿ ಪ್ರಕಾಶರು ನನ್ನ ಸಂಶೋಧನಾ ವಿಚಾರದ ಬಗ್ಗೆ ಕುತೂಹಲ ತೋರಿದ್ದರಿಂದ ಕೃತಿಯನ್ನು ಅವರ ಕೈಗಿತ್ತೆ. ಅದನ್ನಿಡಿದ ಅವರು, ಹೆಚ್ಚೆಂದರೆ ಒಂದೈದಾರು ನಿಮಿಷ ಪುಟಗಳನ್ನು ತಿರುವಿಹಾಕಿ ಕರ್ನಾಟಕದ ಕರಕುಶಲ ಪರಂಪರೆ, ಜಾನಪದ ಹರವು, ರಂಗಭೂಮಿ, ಗ್ರಾಮೀಣ ದೇಸೀ ಆರ್ಥಿಕ ಸಂರಚನೆ ವಿಚಾರಗಳ ಬಗ್ಗೆ ನಿರರ್ಗಳವಾಗಿ ಮಾತನಾಡಲು ಶುರು ಮಾಡಿದರು. ನನಗೆ ಅಚ್ಚರಿಯಾದದ್ದೇ ಆಗ. ಒಬ್ಬ ರಾಜಕಾರಣಿಯೆಂದರೆ ಕೆಸರೆರಚಾಟ, ಕಾಲಳೆದಾಟ, ತಂತ್ರ-ಕುತಂತ್ರಗಳ ಚದುರಂಗದಾಟದಲ್ಲಷ್ಟೇ ಪ್ರವೀಣರು ಎಂದುಕೊಂಡಿದ್ದ ನನಗೆ ಎಂಪಿ ಪ್ರಕಾಶರ ಸಾಹಿತ್ಯ, ತಿಳಿವಳಿಕೆ, ಸಮಯಪ್ರಜ್ಞೆ, ಎಲ್ಲಕ್ಕಿಂತ ಮುಖ್ಯವಾಗಿ ಅವರ ಸರಳತೆಗಳು ದಂಗುಬಡಿಸಿದವು. 
ಅದೇವೇಳೆಗೆ, ಪೊಲೀಸರೆಂದರೆ ಕೇವಲ ಸೆಲ್ಯೂಟು, ಯೂನಿಫಾರ್ಮು, ತನಿಖೆ, ಕೋರ್ಟುಕಚೇರಿ ಅಂತಷ್ಟೇ ಅಂದುಕೊಂಡಿದ್ದ ಅವರಿಗೂ ನನ್ನ ಅಕ್ಷರಕೃಷಿ ಅಚ್ಚರಿ ಮೂಡಿಸಿತ್ತೆನ್ನುವ ವಿಚಾರ ಆನಂತರದಲ್ಲಿ ನನಗೆ ಗೊತ್ತಾಯ್ತು. ಸಮಾನ ಆಸಕ್ತಿ, ಸಮಾನ ಅಭಿರುಚಿಗಳು ಗಡಿ, ಬೇಲಿಗಳಿಗೆ ಬೆದರಿ ಕೂರುವುದಿಲ್ಲ. ಅದರಲ್ಲೂ ಸೃಜನಶೀಲ ಅಭಿರುಚಿಗಳಿರುವವರು ಎಲ್ಲಾ ಏರುಪೇರುಗಳನ್ನು ಬದಿಗಿರಿಸಿ ಬೆರೆತುಬಿಡುತ್ತಾರೆ. ಎಂಪಿ ಪ್ರಕಾಶರು ಮತ್ತು ನನ್ನ ನಡುವೆ ಆದದ್ದು ಕೂಡಾ ಅದೇ. ಅವರು ಈ ನಾಡಿನ ಉಪಮುಖ್ಯಮಂತ್ರಿ, ಮತ್ತು ನಾನು ಅವರಿಗೆ ಸೆಲ್ಯೂಟ್ ಹೊಡೆಯಬೇಕಿರುವ ಒಬ್ಬ ಪೊಲೀಸ್ ಅಧಿಕಾರಿ ಎಂಬ ಗೆರೆಗಳೆಲ್ಲ ಕ್ಷಣಮಾತ್ರದಲ್ಲಿ ಅಳಿಸಿಹೋಗಿ, ಗಾಢ ಆತ್ಮೀಯತೆ ನಮ್ಮಿಬ್ಬರನ್ನು ಬೆಸೆಯಿತು. ಅಷ್ಟರಲ್ಲಾಗಲೆ, ಅವರದೇ ಬಳ್ಳಾರಿ ಜಿಲ್ಲೆಯಲ್ಲಿ ಘಟಿಸುತ್ತಿದ್ದ ರಾಜಕೀಯ ಪ್ರೇರಿತ ಗಣಿ ಮಾಫಿಯಾದ ಕಾನೂನು ಉಲ್ಲಂಘನೆಗಳ ಬಗ್ಗೆ ಅವರಿಗೆ ಅಪಾರ ಖೇದವಿತ್ತು. ಕೂಡಲೇ ಅವರು ನನಗೆ ಒಂದು ಮಾತು ಕೇಳಿದರು, ಸಮಾಜವನ್ನು ತಿದ್ದಲು ಅಧಿಕಾರ, ಶಕ್ತಿ ಮತ್ತು ರೋಷಗಳು ಮಾತ್ರ ಸಾಲದು, ಸಂವೇದನೆಯೂ ಬೇಕು. ನಿಮ್ಮಂತಹ ಸಂವೇದನಾಶೀಲ ಅಧಿಕಾರಿ ನಮ್ಮ ಜಿಲ್ಲೆಗೆ ಬಂದರೆ ಒಳ್ಳೆಯದು ಅನ್ನಿಸುತ್ತೆ. ನೀವು ಅಡಿಷನಲ್ಎಸ್ಪಿಯಾಗಿ ಬಳ್ಳಾರಿಗೆ ಬರುತ್ತೀರಾ?. ಎಂದು ಕೇಳಿದರು.ನನಗೆ ಹೇಗೆ ಪ್ರತಿಕ್ರಿಯಿಸಬೇಕೊ ಅರ್ಥವಾಗಲಿಲ್ಲ.    ಬಳ್ಳಾರಿಯಲ್ಲಾಗುತ್ತಿದ್ದ ರಾಜಕೀಯ ಮತ್ತು ಗಣಿ ಮಾಫಿಯಾದ ಪಲ್ಲಟಗಳ ಬಗ್ಗೆ ನನಗೆ ಸ್ಪಷ್ಟ ಅರಿವಿತ್ತು. ಒಬ್ಬ ಪೊಲೀಸ್ ಅಧಿಕಾರಿಯಾಗಿ ಅವುಗಳ ವಿರುದ್ಧ ನಿಲ್ಲುವುದು ನನಗೆ ಕಷ್ಟದ ಕೆಲಸವಾಗಿರಲಿಲ್ಲ. ಆದರೆ ಇಂತಹ ಒಬ್ಬ ಹಿರಿಯ ರಾಜಕಾರಣಿಯಿಂದ, ಹಾಲಿ ಉಪಮುಖ್ಯಮಂತ್ರಿಯಿಂದ ಈ ಪರಿ ಅಪಾರ ನಿರೀಕ್ಷೆಯನ್ನೊತ್ತು ನುಗ್ಗಬೇಕೆಂದಾಗ ಕ್ಷಣಕಾಲ ಯೋಚಿಸುವಂತಾಯ್ತು ಅಷ್ಟೆ. ನನ್ನ ಮೌನಮುರಿದು ಸಮ್ಮತಿ ಸೂಚಿಸಿದೆ. ಮುಂದಿನ ಕೆಲದಿನಗಳಲ್ಲೆ ನಾನು ಬಳ್ಳಾರಿಯ ಹೆಚ್ಚುವರಿ ಎಸ್ಪಿಯಾಗಿ ಅಧಿಕಾರ ವಹಿಸಿಕೊಂಡೆ.
ಅದು ಗಣಿ ಮಾಫಿಯಾ ಉತ್ತುಂಗಕ್ಕೇರುತ್ತಿದ್ದ ಕಾಲ. ಅದಿರು ಹೊತ್ತೊಯ್ಯುತ್ತಿದ್ದ, ಲಾರಿಗಳು ಎಬ್ಬಿಸುತ್ತಿದ್ದ ಕೆಂಧೂಳು, ಕೆಂಗಲ್ ಹನುಮಂತಯ್ಯನವರು ಕಟ್ಟಿಸಿಹೋಗಿದ್ದ ವಿಧಾನಸೌಧದ ಪ್ರತಿ ಮಹಡಿಯಲ್ಲು ಪಸರಿಸಿಕೊಂಡಿತ್ತು. ಅಂತಹ ಸಮಯದಲ್ಲಿ ನಾನು, ಬಳ್ಳಾರಿಯ ಎಸ್ಪಿಯಾಗಿ ಪ್ರಭಾವಿ ಕುಳಗಳಿಗೆ ಖಡಕ್ ಬಿಸಿ ಮುಟ್ಟಿಸಲು ಸಾಧ್ಯವಾದದ್ದು ಎಂ.ಪಿ. ಪ್ರಕಾಶ್ರವರು ನನ್ನ ಬೆನ್ನಿಗೆ ಬಲವಾಗಿ ನಿಂತಿದ್ದರಿಂದ. ಅಕ್ರಮ ಗಣಿಗಾರಿಕೆದಾರರಿಂದ ನನಗೆ ಸಾಕಷ್ಟು ಥ್ರೆಟ್ಗಳು ಬಂದವು. ಆದರೆ ಅಷ್ಟರಲ್ಲಾಗಲೆ, ಹೊಸ ಸರ್ಕಾರದಲ್ಲಿ ಗೃಹಮಂತ್ರಿಯಾಗಿ ಅಧಿಕಾರವಹಿಸಿಕೊಂಡಿದ್ದ ಪ್ರಕಾಶ್ರವರು ತುಂಬಿದ ಧೈರ್ಯ ಮತ್ತು ಆತ್ಮಸ್ಥೈರ್ಯದಿಂದ ನಾನು ಅವುಗಳನ್ನೆಲ್ಲ ಎದುರಿಸಿ ಸೇವೆ ಸಲ್ಲಿಸಲು ಸಾಧ್ಯವಾಯ್ತು. 
ಸುಮಾರು ಎರಡೂವರೆ ವರ್ಷಗಳ ಕಾಲ ನಾನು ಅಲ್ಲಿ ಕೆಲಸ ಮಾಡಿದೆ. ಈ ಅವಧಿಯಲ್ಲಿ ಅವರೊಟ್ಟಿಗೆ ಎರಡು ಹಂಪಿ ಉತ್ಸವಗಳನ್ನು ಆಯೋಜಿಸುವ ಅವಕಾಶ ಸಿಕ್ಕಿತು. ದೇಸಿ ಸಂಸ್ಕೃತಿ, ಗ್ರಾಮೀಣ ಪರಂಪರೆ, ಜಾನಪದ ಕಲೆಗಳ ಬಗ್ಗೆ ಅವರಿಗಿದ್ದ ಕಾಳಜಿ ಅಪಾರವಾದುದು. ಮೈಸೂರಿನಲ್ಲಿ ನಡೆಯುತ್ತಿದ್ದ ದಸರಾ ಉತ್ಸವದಷ್ಟೆ ಸಂಭ್ರಮದಿಂದ, ಕನ್ನಡ ಸಂಸ್ಕೃತಿಯ ಹಂಪಿ ಉತ್ಸವವೂ ನಡೆಯಬೇಕೆಂಬ ಅವರ ಆಸಕ್ತಿಯಿಂದಾಗಿಯೇ ಆ ಉತ್ಸವಗಳು ಯಶಸ್ವಿಯಾದವು. ಮೈಸೂರಿನಿಂದ ಕುದುರೆ, ಜಂಬೂಸವಾರಿಯ ಆನೆಗಳನ್ನು ತರಿಸಿ ಹಂಪಿಯ ಗತವೈಭವಕ್ಕೆ ಮರುಜೀವತಂದುಕೊಟ್ಟದ್ದು ಅವರೆ. ಪೊಲೀಸ್ ಇಲಾಖೆಯೊಳಗೆ ಇರುವ ಸಮವಸ್ತ್ರದೊಳಗಿನ ಕವಿಮನಸ್ಸುಗಳನ್ನು ಹುಡುಕಿ ನಾನು ಆಯೋಜಿಸುತ್ತಾ ಬಂದಿದ್ದ ಪೊಲೀಸ್ ಕವಿಗೋಷ್ಠಿಯ ಎರಡನೇ ರಾಜ್ಯಮಟ್ಟದ ಸಮ್ಮೇಳನವನ್ನು 2007ರಲ್ಲಿ ಬಳ್ಳಾರಿಯಲ್ಲಿ ನಡೆಸಲು ನನಗೆ ಸಂಪೂರ್ಣ ಸಹಕಾರ ಕೊಟ್ಟವರು ಕೂಡಾ ಅದೇ ಎಂ.ಪಿ.ಪ್ರಕಾಶರು. ಅದೇ ವೇದಿಕೆಯಲ್ಲಿ ‘ಸಮವಸ್ತ್ರದೊಳಗೊಂದು ಸುತ್ತು’ ಕವನ ಸಂಕಲನದ ಎರಡನೇ ಆವೃತ್ತಿ ಬಿಡುಗಡೆಯಾಯ್ತು. ನನ್ನ ಪಿ.ಎಚ್.ಡಿ ಸಂಶೋಧನಾ ಗ್ರಂಥದ ಎರಡನೇ ಮುದ್ರಣ ಬಿಡುಗಡೆಯಾದಾಗ ಎಂಪಿ ಪ್ರಕಾಶ್ರವರು ಅದಕ್ಕೆ ಸಂದೇಶ ಬರೆದುಕೊಟ್ಟದ್ದು ನನ್ನ ಪಾಲಿನ ಅವಿಸ್ಮರಣೀಯ ಕ್ಷಣಗಳಲ್ಲಿ ಒಂದು.
ರಂಗಭೂಮಿ, ಕೇವಲ ಮನರಂಜನೆಯ ಸರಕು ಮಾತ್ರವಲ್ಲ. ಅದು ಬದುಕಿನ ಸಂವೇದನೆಯನ್ನು ಮನನ ಮಾಡಿಸುತ್ತೆ. ಸ್ವತಃ ಒಬ್ಬ ಹವ್ಯಾಸಿ ರಂಗ ಕಲಾವಿದರಾಗಿ, ಮೇಕಪ್ಪು ಬಳಿದು ನಾಟಕಗಳಲ್ಲಿ ಪಾತ್ರ ಮಾಡುತ್ತಿದ್ದ ಎಂ.ಪಿ.ಪ್ರಕಾಶ್ ಒಬ್ಬ ಅದ್ಭುತ ಓದುಗರೂ ಆಗಿದ್ದರು. ನಾನು ಭೇಟಿ ಮಾಡಿದ ಬಹಳಷ್ಟು ಸಮಯಗಳಲ್ಲಿ ಅವರ ಕೈಯಲ್ಲಿ ಒಂದಲ್ಲ, ಒಂದು ಪುಸ್ತಕ ಇರುತ್ತಿತ್ತು. ಅವರ ಆ ಸರಳತೆ ಮತ್ತು ಸಂವೇದನಾಶೀಲ ವ್ಯಕ್ತಿತ್ವ ರೂಪುಗೊಂಡದ್ದು ಆ ಓದಿನಿಂದಲೇ ಅನ್ನಬಹುದೇನೊ. ಅವರು ಗೃಹಮಂತ್ರಿಯಾಗಿದ್ದರೂ, ಪ್ರತಿ ಪೊಲೀಸ್ ಅಧಿಕಾರಿಯನ್ನೂ ಆತ್ಮೀಯತೆಯಿಂದ ಅವರ ಹೆಸರಿಡಿದು ವಿಶ್ವಾಸದಿಂದ ಮಾತನಾಡಿಸುತ್ತಿದ್ದರು. ನನ್ನನ್ನು ಅವರು ಯಾವತ್ತೂ ‘ರಾಜಪ್ಪ’ ಎಂದು ಕರೆಯಲಿಲ್ಲ, ಸದಾ ‘ರಾಜಣ್ಣ’ ಎಂತಲೇ ಕರೆಯುತ್ತಿದ್ದರು. ಬೇರೆಯವರನ್ನು ಸಹಾ ಹೀಗೇ ಅವರು ಮಾತನಾಡಿಸುತ್ತಿದ್ದುದು. ಊಟ ಮಾಡುವಾಗ ನಾನೇನಾದರು ಹೋದರೆ, ಬಾ ರಾಜಣ್ಣ, ಕಲೆತು ಊಟ ಮಾಡೋಣ ಅನ್ನುತ್ತಿದ್ದರು. ಆ ಭಾಷೆ, ಆ ಸಮಾನತೆಯ ಪ್ರಜ್ಞೆ, ಆ ಸರಳತೆಗಳು ನನಗೆ ತುಂಬಾ ಇಷ್ಟವಾಗುತ್ತಿದ್ದವು.
ಇದಕ್ಕೊಂದು ನಿದರ್ಶನವನ್ನು ನಾನು ನೆನಪಿಸಿಕೊಳ್ಳಲೇಬೇಕು. 2006ರಲ್ಲಿ ಅವರು ಗೃಹಮಂತ್ರಿಯಾಗಿದ್ದಾಗ ಅವರು ಹೂವಿನಹಡಗಲಿಗೆ ಬಂದಿದ್ದರು. ಸುಮಾರು ಐದಾರು ದಿನ ಅಲ್ಲಿ ತಂಗುವ ಯೋಜನೆಯಿತ್ತು. ನಮ್ಮ ಪೊಲೀಸ್ ಇಲಾಖೆಯಲ್ಲಿ ಮುಖ್ಯಮಂತ್ರಿಗಳಿಗೆ ಮತ್ತು ಗೃಹಮಂತ್ರಿಗೆ ಪ್ರತಿದಿನ ಬೆಳಿಗ್ಗೆ ಗಾರ್ಡ್ ಆಫ್ ಆನರ್ (ಪೊಲೀಸ್ ವಂದನೆ) ನೀಡುವ ಸಂಪ್ರದಾಯವಿದೆ. ಅದೇ ಪ್ರಕಾರ, ಅವರು ಬಂದ ಮೊದಲ ದಿನ ನಮ್ಮ ಪೊಲೀಸ್ ತಂಡ ಗಾರ್ಡ್ ಆಫ್ ಆನರ್ ನೀಡಿತು. ಅವತ್ತು ನನ್ನನ್ನು ಕರೆದ ಎಂಪಿ ಪ್ರಕಾಶ್ರವರು ಇನ್ಮುಂದೆ ನನಗೆ ಪ್ರತಿದಿನ ಗಾರ್ಡ್ ಆಫ್ ಆನರ್ ನೀಡೋದು ಬೇಡ. ಇದರಿಂದ ಏನು ಪ್ರಯೋಜನವಿದೆ. ವೃಥಾ ನಿಮ್ಮ ಪೊಲೀಸರ ಸಮಯ ಮತ್ತು ಶ್ರಮ ವ್ಯರ್ಥ. ನನಗೆ ಇನ್ಮುಂದೆ ಗಾರ್ಡ್ ಆಫ್ ಆನರ್ ಬೇಡ ಅಂದರು. ಅಧಿಕಾರದ ಸೌಲತ್ತುಗಳನ್ನು ಎರಡೂ ಕೈಗಳಿಂದ ಬಾಚಿಕೊಳ್ಳುವವರ ನಡುವೆ ಎಂ.ಪಿ.ಪ್ರಕಾಶ್ರವರು ‘ಅಪರೂಪ’ವಾಗಿ ಕಾಣುವುದೇ ಇಂತಹ ಕಾರಣಕ್ಕೆ.
ಇನ್ನು, ಬಳ್ಳಾರಿಯಲ್ಲಿ ಹೊಸ ಎಸ್ಪಿ ಕಚೇರಿ ನಿರ್ಮಾಣವಾದುದರ ಹಿಂದೆಯೂ ಅವರ ಅಪಾರ ಶ್ರಮವಿದೆ. ನಾನು ಅಲ್ಲಿಗೆ ಹೋದಾಗ, ತುಂಬಾ ಹಳೆಯ ಶಿಥಿಲಾವಸ್ಥೆಯ ಕಟ್ಟಡದಲ್ಲೇ ಎಸ್ಪಿ ಕಚೇರಿ ಸಾಗುತ್ತಿತ್ತು. ಹೊಸ ಕಟ್ಟಡಕ್ಕೆ ಸ್ವಂತ ಜಾಗವೂ ಪೊಲೀಸ್ ಇಲಾಖೆಯ ಬಳಿ ಇರಲಿಲ್ಲ. ಆದರೆ ಪಕ್ಕದಲ್ಲೇ ಕಾರಾಗೃಹ ಇಲಾಖೆಗೆ ಸೇರಿದ ಸುಮಾರು ಎರಡು ಎಕರೆ ಜಮೀನು ಖಾಲಿಯಿತ್ತು. ನನ್ನ ಮನವಿಯನ್ನು ಕೇಳಿಸಿಕೊಂಡ ಎಂ.ಪಿ.ಪ್ರಕಾಶ್ರವರು, ಅಂದಿನ ಕಾರಾಗೃಹ ಇಲಾಖೆಯ ಡಿ.ಜಿ.ಎಸ್ ಟಿ ರಮೇಶ್ ಅವರ ಜೊತೆ ಮಾತನಾಡಿ, ಪೊಲೀಸ್ ಇಲಾಖೆಗೆ ವರ್ಗಾಯಿಸಿ, ಅಲ್ಲಿ ಸುಮಾರು ಮೂರುವರೆ  ಕೋಟಿ ರೂಪಾಯಿ ಅನುದಾನದಲ್ಲಿ ಹೊಸ ಎಸ್ಪಿ ಕಚೇರಿ ಕಟ್ಟಿಸಿದರು. ಅವರ ಶ್ರಮ ಮತ್ತು ಮುತುವರ್ಜಿಯ ಪ್ರತೀಕ, ಆ ಕಟ್ಟಡ.
ಅಂತಹ ಸಹೃದಯ, ಸ್ಪಂದನಾಶೀಲ ಮತ್ತೊಬ್ಬ ಗೃಹಮಂತ್ರಿಯನ್ನು ನಾನು ನೋಡಿಲ್ಲ ಅಂತಲೇ ಹೇಳಬಹುದು. ಗೃಹಮಂತ್ರಿಯಾಗಿದ್ದರು ಎಂಬ ಕಾರಣಕ್ಕಲ್ಲ, ಅವರಿಗೆ ಮೊದಲಿನಿಂದಲೂ ಸಮಾಜ ಕಾಯುವ ಪೊಲೀಸ್ ಇಲಾಖೆಯ ಮೇಲೆ ಅಪಾರ ಗೌರವ. ‘ನಮ್ಮ ತಂದೆಯವರಿದ್ದ ಕಾಲದಿಂದಲೂ ಪೊಲೀಸ್ ಇಲಾಖೆಯ ಬಗ್ಗೆ ನಾವು ಅಭಿಮಾನ ಇಟ್ಟುಕೊಂಡಿದ್ದೇವೆ. ಅವರಿದ್ದಷ್ಟು ದಿನ ಪ್ರತಿ ಆಯುಧ ಪೂಜೆಗೆ ಸ್ಥಳೀಯ ಪೊಲೀಸ್ ಠಾಣೆಗೆ ಹೋಗಿ ಶುಭ ಕೋರಿ ಸಹಕಾರ ನೀಡುತ್ತಿದ್ದರು. ಆ ಸಂಪ್ರದಾಯವನ್ನು ನಾನೂ ಮೀರುವುದಿಲ್ಲ’ ಎನ್ನುತ್ತಿದ್ದರು. ಅವರು ಗೃಹಮಂತ್ರಿಯಾಗಿದ್ದಾಗ, ಒತ್ತಡದ ನಡುವೆ ತಮ್ಮ ಕ್ಷೇತ್ರದ ಪೊಲೀಸ್ ಠಾಣೆಗೆ ಭೇಟಿ ನೀಡಲು ಸಾಧ್ಯವಾಗದೇ ಇದ್ದಾಗ, ಠಾಣಾಧಿಕಾರಿಯನ್ನೇ ತಮ್ಮ ಮನೆಗೆ ಕರೆಸಿಕೊಂಡು ಶುಭ ಹಾರೈಕೆ ತಲುಪಿಸಿದ್ದು, ಅವರು ನಮ್ಮ ಇಲಾಖೆ ಮೇಲಿಟ್ಟಿದ್ದ ಗೌರವಕ್ಕೆ ಸಾಕ್ಷಿ.
ಇಂತವರು ಮುಂದಿನ ಪೀಳಿಗೆಗೆ ಮಾದರಿಯಾಗಬೇಕು. ರಾಜಕಾರಣಿಯೆಂದರೆ ಕೇವಲ ತಂತ್ರಗಾರಿಕೆಗಳ ಯಂತ್ರವಲ್ಲ, ಆತನೂ ಸಮಾಜದ ಒಂದು ಪ್ರತಿಬಿಂಬ ಎಂಬುದನ್ನು ಬದುಕಿ ತೋರಿದವರು ಅವರು. ಕಲೆ, ಸಾಹಿತ್ಯ, ರಂಗಭೂಮಿ, ಓದು, ಬರಹ ಹೀಗೆ ಸೃಜನಾತ್ಮಕವಾಗಿ ಬದುಕಿದ್ದ ಆ ಹಿರಿಯ ಜೀವ ಈಗ ನೆನಪಷ್ಟೆ. ಆದರೆ ಅವರ ಜೊತೆಗಿನ ಒಡನಾಟದ ಕ್ಷಣಗಳು ನಮ್ಮಂತವರ ಎದೆಯಲ್ಲಿ ನಿರಂತರವಾಗಿರುತ್ತವೆ. ಹೀಗೆ ಸಮಯಸಿಕ್ಕಾಗ, ಭಾವಲಹರಿಯಾಗಿ ಹೊರ ಹರಿದು, ನೆನಪಿನ ತೊರೆಯಾಗುತ್ತವೆ.

By admin

ನಿಮ್ಮದೊಂದು ಉತ್ತರ

error: Content is protected !!