ಶಿವಮೊಗ್ಗ : ಕೊರೊನ ಮಹಾಮಾರಿಯನ್ನು ತಡೆಯಲು ಪಾಲಿಕೆ ವ್ಯಾಪ್ತಿಯಲ್ಲಿ ಪ್ರತಿವಾರ್ಡಿನಲ್ಲಿ ತಂಡಗಳನ್ನು ರಚಿಸಬೇಕು ಎಂದು ವಿಧಾನಪರಿಷತ್ ಸದಸ್ಯ ಆಯನೂರು ಮಂಜುನಾಥ್ ಸಲಹೆ ನೀಡಿದರು.
ಅವರು ಇಂದು ಪಾಲಿಕೆ ಸಭಾಂಗಣದಲ್ಲಿ ನಡೆದ ಕೋವಿಡ್ ನಿಯಂತ್ರಣ ಕ್ರಮಗಳ ಕುರಿತು ಪರಿಶೀಲನಾ ಸಭೆಯಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.
ಕೊರೋನಾ ೨ನೇ ಅಲೆ ಶಿವಮೊಗ್ಗದಲ್ಲಿ ಹೆಚ್ಚಾಗುತ್ತಿದೆ. ಈ ಹಿನ್ನಲೆಯಲ್ಲಿ ಪಾಲಿಕೆ ಸದಸ್ಯರು ತಮ್ಮ ತಮ್ಮ ವಾರ್ಡ್‌ಗಳಲ್ಲಿ ತಂಡಗಳನ್ನು ರಚಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು. ಎಲ್ಲಾ ೩೫ ವಾರ್ಡ್‌ಗಳಲ್ಲಿಯೂ ಆಯಾ ವಾರ್ಡಿನ ಪಾಲಿಕೆ ಸದಸ್ಯರು ಕೋವಿಡ್ ಮುಕ್ತ ವಾರ್ಡ್ ಆಗಿ ಮಾಡಲು ಶ್ರಮಿಸಬೇಕು. ಸೋಂಕು ತಗುಲಿದವರನ್ನು ಗುರುತಿಸಿ ಅವರನ್ನು ಆರೈಕೆ ಕೇಂದ್ರಕ್ಕೆ ಸೇರಿಸಲು ಅಗತ್ಯ ಕ್ರಮ ತಕ್ಷಣವೇ ತೆಗೆದುಕೊಳ್ಳಬೇಕು. ಇದಕ್ಕಾಗಿ ಆರೋಗ್ಯ ಸಿಬ್ಬಂದಿಗಳನ್ನು ಕಾಯಬಾರದು ಮತ್ತು ಬಹಳ ಮುಖ್ಯವಾಗಿ ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರು ಹೊರಹೋಗದಂತೆ ನೋಡಿಕೊಳ್ಳಬೇಕು. ಜನರ ಜೀವ ಜೀವನ ಕಾಪಾಡುವ ಕೆಲಸವನ್ನು ಪಾಲಿಕೆ ಸದಸ್ಯರೆ ನೋಡಿಕೊಳ್ಳಬೇಕು ಎಂದರು.
ಆಯಾ ವಾರ್ಡಿನಲ್ಲಿರುವ ದಾನಿಗಳನ್ನು ಗುರುತಿಸಿ ಅವರಿಂದ ನೆರವು ಪಡೆದು ಬಡ ಸೋಂಕಿತರಿಗೆ ಊಟ, ಉಪಚಾರ, ಔಷಧಿ, ಮಾಸ್ಕ್‌ಗಳನ್ನು ನೀಡಬೇಕು. ಸಂಚಾರ ನಿಯಮಗಳನ್ನು ನೋಡಿಕೊಳ್ಳಬೇಕು. ಪ್ರತಿ ವಾರ್ಡಿನಲ್ಲೂ ಒಂದು ಆರೈಕೆ ಕೇಂದ್ರ ಇರಬೇಕು ಎಂದರು.
ವಿಧಾನ ಪರಿಷತ್ ಸದಸ್ಯ ಎಸ್.ರುದ್ರೇಗೌಡ್ರು ಮಾತನಾಡಿ, ಪಾಲಿಕೆಯ ಸದಸ್ಯರ ಜವಾಬ್ದಾರಿ ತುಂಬಾಯಿದೆ. ಕೊರೋನಾ ಸೋಂಕಿತರು ಹೆಚ್ಚಾಗಿ ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಂದರ್ಭದಲ್ಲಿ ಇವರು ಮನೆಯಿಂದ ಹೊರಬರುತ್ತಿದ್ದಾರೆ ಎಂಬ ಮಾಹಿತಿಯಿದ್ದು, ಈ ಬಗ್ಗೆ ಎಚ್ಚರಿಕೆ ವಹಿಸಬೇಕು. ಆದಷ್ಟು ಆಸ್ಪತ್ರೆಯಲ್ಲಿ ಇರುವಂತೆ ನೋಡಿಕೊಳ್ಳಬೇಕು ಮತ್ತು ಸೋಂಕಿತರಿಗೆ ಸಂಘ ಸಂಸ್ಥೆಗಳ ಜೊತೆ ಸೇರಿಕೊಂಡು ಅಗತ್ಯ ನೆರವು ನೀಡಬೇಕು ಎಂದರು.
ಪಾಲಿಕೆ ಸದಸ್ಯರುಗಳು ಆರೋಗ್ಯ ಇಲಾಖೆಯ ಜೊತೆ ಸದಾ ಸಂಪರ್ಕವನ್ನಿಟ್ಟುಕೊಳ್ಳಬೇಕು. ಆಗಾಗ ಸಮಾಲೋಚನೆಗಳನ್ನು ನಡೆಸಬೇಕು. ಮಾಹಿತಿಗಳನ್ನು ಸಂಗ್ರಹಿಸಬೇಕು. ರಸ್ತೆಯಲ್ಲಿ ವಿನಾ ಕಾರಣ ಸಂಚರಿಸುತ್ತಿರುವವರ ಬಗ್ಗೆ ಪೊಲೀಸ್ ಇಲಾಖೆಯ ಸಹಕಾರದೊಂದಿಗೆ ನಿಯಂತ್ರಿಸಬೇಕು ಎಂದರು.
ಆಡಳಿತ ಪಕ್ಷದ ನಾಯಕ ಚನ್ನಬಸಪ್ಪ ಮಾತನಾಡಿ, ಇಂದಿರಾ ಕ್ಯಾಂಟೀನ್‌ನಲ್ಲಿ ಪಾಲಿಕೆ ವತಿಯಿಂದ ಉಚಿತ ಆಹಾರ ನೀಡುತ್ತಿದ್ದು, ಅಲ್ಲಿ ಎಲ್ಲಾ ಮೂಲಭೂತ ಸೌಲಭ್ಯ ಕಲ್ಪಿಸಬೇಕಾಗಿದೆ ಮತ್ತು ಆಹಾರದ ಗುಣಮಟ್ಟದ ಬಗ್ಗೆ ಪರಿಶೀಲನೆ ನಡೆಸಬೇಕಾಗಿದೆ. ಈಗಿರುವ ಸಿಬ್ಬಂದಿಗಳನ್ನು ಎಲ್ಲಾ ವಾರ್ಡ್‌ಗಳಿಗೂ ಜೋಡಿಸಿಕೊಂಡು ಕೆಲಸ ಮಾಡಬೇಕಾಗಿದೆ. ವೆಂಟಿಲೇಟರ್ ಮತ್ತು ಆಕ್ಸಿಜನ್ ಕಿಟ್‌ಗಳನ್ನು ಕೂಡ ಪಾಲಿಕೆಯ ಕಾಯ್ದಿರಿಸಿದ ಅನುದಾನದಲ್ಲಿ ಅರ್ಹರಿಗೆ ನೀಡಬಹುದಾಗಿದೆ.
ದಾನಿಗಳಿಂದ ನೆರವನ್ನು ಪಡೆದು ಕಳೆದ ಬಾರಿಯಂತೆ ಪಾಲಿಕೆಯಲ್ಲಿ ಕೇಂದ್ರ ತೆರೆದು ಸಂಗ್ರಹಿಸಿ ಅರ್ಹರಿಗೆ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂದರು.
ಸದಸ್ಯ ನಾಗರಜ್ ಕಂಕಾರಿ ಮಾತನಾಡಿ, ಐಸೋಲೇಷನ್ ಗೊಂದಲವಿದ್ದು, ಸಾರ್ವಜನಿಕರು ಕೆಲವರು ಮನೆಯಲ್ಲೇ ಐಸೋಲೇಷನ್‌ನಲ್ಲಿದ್ದು, ಇನ್ನು ಕೆಲವರಿಗೆ ನಿರಾಕರಣೆ ಮಾಡುತ್ತಿರುವುದರಿಂದ ಸಾರ್ವಜನಿಕರು ದೂರವಾಣಿಮೂಲಕ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಇದನ್ನು ಮೊದಲು ಸರಿಪಡಿಸಿ ಸಂಜೆ ಹೊತ್ತು ಪೊಲೀಸರು ಕಾಣದೆ ಇರುವುದರಿಂದ ಸಾರ್ವಜನಿಕರ ಓಡಾಟ ಜಾಸ್ತಿಯಾಗಿದ್ದು, ಇದು ಕೂಡ ಸೋಂಕು ಹೆಚ್ಚಾಗಲು ಕಾರಣವಾಗಿದೆ. ಇದನ್ನು ರಕ್ಷಣಾಧಿಕಾರಿಗಳ ಗಮನಕ್ಕೆ ತರಬೇಕು. ಮನೆ ಕೆಲಸ ಮಾಡುವರರು ಮತ್ತು ಬೀಡಿ ಕಟ್ಟುವವರು, ಟೈಲರಿಂಗ್ ಮಾಡುವವರಿಗೆ ಹಾಗೂ ಹಮಾಲರನ್ನು ಗುರುತಿಸಿ ಕಿಟ್ ಕೊಡುವ ವ್ಯವಸ್ಥೆ ಆಗಬೇಕು ಎಂದರು.
ಶಿವಮೊಗ್ಗ ಮಹಾನಗರ ಪಾಲಿಕೆ ಪ್ರಕಟಣೆ
- ಕೊರೋನಾ ಮಹಾಮಾರಿ ರಾಜ್ಯಾದ್ಯಂತ ವ್ಯಾಪಿಸುತ್ತಿದೆ. ಕೋವಿಡ್ ಮಾರ್ಗಸೂಚಿ ತಪ್ಪದೇ ಪಾಲಿಸಿ, ಆರೋಗ್ಯದಿಂದಿರಿ. ರಾಜ್ಯ ಸರ್ಕಾರದಿಂದ ಮೇ. 10 ರಿಂದ ಮೇ.24 ರ ಬೆಳಿಗ್ಗೆ 6 ರವರೆಗೆ ಲಾಕ್ ಡೌನ್ ವಿಧಿಸಲಾಗಿರುತ್ತದೆ.
- ಯಾವುದೇ ಮದುವೆಗೆ ಗರಿಷ್ಟ 40 ಜನರಿಗೆ ಮಾತ್ರ ಅವಕಾಶ. ಪಾಸ್ ಕಡ್ಡಾಯ.
- ನಿಧನ-ಶವಸಂಸ್ಕಾರ ಐವರಿಗೆ ಮಾತ್ರ ಅವಕಾಶ.
- ಪ್ರತಿದಿನ ಬೆಳಿಗ್ಗೆ 6 ರಿಂದ 10 ಗಂಟೆಯವರೆಗೆ, ಮನೆಗೆ ಬೇಕಾದ ಅವಶ್ಯಕ ಸಾಮಾಗ್ರಿಗಳು, ಆಹಾರ, ದಿನಸಿ, ಹಣ್ಣು, ತರಕಾರಿ, ಮೀನು, ಮಾಂಸ ಹಾಗೂ ಮದ್ಯ , ಡೈರಿ ಮತ್ತು ಹಾಲಿನ ಬೂತ್ ಗಳು ಹೋಟೆಲ್ ಗಳಲ್ಲಿ ಪಾರ್ಸೆಲ್ ವ್ಯವಸ್ಥೆ ಕಾರ್ಯ ನಿರ್ವಹಿಸಲಿವೆ.
- ಶಿವಮೊಗ್ಗ ನಗರದ ಆರು ಭಾಗದಲ್ಲಿ ಮಾತ್ರ ತರಕಾರಿ ಮಾರಾಟಕ್ಕೆ ಅವಕಾಶ ನೀಡಲಾಗಿದೆ.
- ಬ್ಯಾಂಕ್, ಎಟಿಎಂ ತೆರೆದಿರುತ್ತದೆ.
- ಅಗತ್ಯ ವೈದ್ಯಕೀಯ ಸೇವೆಗಳು ದಿನದ 24 ಗಂಟೆಗಳು ಕಾರ್ಯನಿರ್ವಹಿಸಲಿವೆ.
- ಕೋವಿಡ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿ.
- ನೀವು ಆರೋಗ್ಯವಾಗಿರಿ – ಸಮಾಜವನ್ನು ಆರೋಗ್ಯವಾಗಿಡಿ.
- ನಿಯಮ ಪಾಲನೆ ಮಾಡಿ – ದಂಡ ಪಾವತಿಯಿಂದ ದೂರವಿರಿ.
ವಾರ್ಡಿನಲ್ಲಿರುವ ಸಮುದಾಯಭವನಗಳಲ್ಲಿ ಸಾರ್ವಜನಿಕ ಮತ್ತು ಸಂಘ ಸಂಸ್ಥೆಗಳ ನೆರವಿನೊಂದಿಗೆ ಐಸೋಲೇಷನ್ ವಾರ್ಡ್‌ಗಳನ್ನು ತೆರೆಯಬೇಕು ಎಂದರು.
ಸಚಿವ ಕೆ.ಎಸ್.ಈಶ್ವರಪ್ಪನವರು ಮಾತನಾಡಿ, ಸದಸ್ಯರು ಕೋವಿಡ್ ನಿಯಂತ್ರಿಸುವಲ್ಲಿ ಪಕ್ಷ ಭೇದ ಮರೆತು ಅನೇಕ ಉತ್ತಮ ಸಲಹೆಗಳನ್ನು ನೀಡಿದ್ದೀರಿ. ಸಂಘ ಸಂಸ್ಥೆಗಳ ನೆರವನ್ನು ಪಡೆದು ಪ್ರತಿ ಸದಸ್ಯರು ತಮ್ಮ ತಮ್ಮ ವಾರ್ಡ್‌ನಲ್ಲಿ ಕೋವಿಡ್ ನಿಯಂತ್ರಣಕ್ಕೆ ಹೆಚ್ಚಿನ ಗಮನ ಕೊಡಬೇಕು. ಕಳೆದ ಬಾರಿ ಫುಡ್‌ಕಿಟ್ ಪ್ರತಿವಾರ್ಡಿಗೆ ೧ ಸಾವಿರ ನೀಡಿದ್ದೆವು. ಅದು ಸಾಲದು ಎಂದು ಎಲ್ಲರು ದೂರು ನೀಡಿದ್ದರು. ಈ ಬಾರಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಪಡಿತರದಲ್ಲಿ ಅಕ್ಕಿಯನ್ನು ನೀಡುತ್ತಿರುವುದರಿಂದ ಈ ಬಾರಿ ಫುಡ್‌ಕಿಟ್‌ನಲ್ಲಿ ಅಕ್ಕಿ ಮತ್ತು ಗೋಧಿಬಿಟ್ಟು ಉಳಿದ ಅಗತ್ಯ ವಸ್ತುಗಳನ್ನು ನೀಡುವುದರ ಬಗ್ಗೆ ತೀರ್ಮಾನ ತೆಗೆದುಕೊಳ್ಳಲು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಆಯುಕ್ತರು ಮಾತನಾಡಿ, ಪಾಲಿಕೆಯಲ್ಲಿ ಹಣದ ಕೊರತೆಯಿದೆ. ಕಳೆದ ಬಾರಿ ಕಿಟ್ ನೀಡಲು ಒಂದು ಕೋಟಿ ನಲವತ್ತು ಲಕ್ಷ ರೂ.ಖರ್ಚಾಗಿತ್ತು. ಜೂನ್ ಒಳಗೆ ಈ ಬಾರಿ ೩೦ ಕೋಟಿ ರೂ. ಆಸ್ತಿ ತೆರಿಗೆ ಸಂಗ್ರಹದ ಗುರಿಯಿತ್ತು. ಆದರೆ ಕೋವಿಡ್‌ನಿಂದಾಗಿ ಈ ವರೆಗೆ ಕೇವಲ ೧.೬೦ ಕೋಟಿ ರೂ. ಸಂಗ್ರಹವಾಗಿದೆ. ಅದು ನೌಕರರ ಸಂಬಳಕ್ಕೆ ಮತ್ತಿತರ ಖರ್ಚುಗಳಿಗೆ ವಿನಿಯೋಗವಾಗಿದೆ ಎಂದರು.
ಸದಸ್ಯ ಯೋಗೀಶ್ ಮಾತನಾಡಿ, ಯಾವುದೇ ಯೋಜನೆ ಕಾರ್ಯಗತಗೊಳಿಸಲು ಪಾಲಿಕೆಯಲ್ಲಿ ಹಣವಿಲ್ಲ. ಕೇವಲ ೮೪ ಲಕ್ಷ ರೂ.ಯಿದೆ. ನೀವು ಎಲ್ಲಿಂದ ಹಣ ಜೋಡಿಸುತ್ತೀರಿ ಎಂದು ಪ್ರಶ್ನೆ ಮಾಡಿದರು.
ಈ ಸಂದರ್ಭದಲ್ಲಿ ಉಪಮೇಯರ್ ಶಂಕರ್‌ಗನ್ನಿ ಹಾಗೂ ಯೋಗೀಶ್ ನಡುವೆ ಮಾತಿನ ಚಕಮಕಿ ನಡೆಯಿತು. ಸಚಿವರು ಸರ್ಕಾರದಿಂದ ೨.೧೦ ಕೋಟಿ ರೂ. ಅನುದಾನ ಕೊಡಿಸುತ್ತೇನೆ ಕಳೆದ ಬಾರಿಕ್ಕಿಂತ ಒಂದು ವರೆ ಪಟ್ಟು ಹೆಚ್ಚು ಫುಡ್‌ಕಿಟ್‌ಗಳನ್ನು ಸದಸ್ಯರ ಬೇಡಿಕೆ ಮೇರೆಗೆ ಸಮಿತಿ ತೀರ್ಮಾನಿಸಿದ ವಸ್ತುಗಳನ್ನು ಹಾಕಿ ಅಕ್ಕಿ ಮತ್ತು ಗೋಧಿಯನ್ನು ಬಿಟ್ಟು ಉಳಿದ ಪದಾರ್ಥಗಳನ್ನು ನಿಡೋಣ. ಫುಡ್‌ಕಿಟ್ ಚರ್ಚೆಗೆ ತೆರೆ ಎಳೆದರು.
ವಿಪಕ್ಷ ನಾಯಕಿ ಯಮುನಾ ರಂಗೇಗೌಡ ಮಾತನಾಡಿ, ಸ್ಯಾನಿಟೈಸೇಷನ್ ಎಲ್ಲಾ ವಾರ್ಡ್‌ಗಳಲ್ಲಿ ಸರಿಯಾಗಿ ನಡೆದಿಲ್ಲ. ಸ್ವಚ್ಚತೆಗೆ ಪ್ರಾಮುಖ್ಯತೆ ನೀಡಬೇಕಾಗುತ್ತದೆ. ರಾಜೀವ್‌ಗಾಂಧಿ ಬಡಾವಣೆಯಲ್ಲಿರುವ ಚಿತಾಗಾರದ ಬಳಿ ಹೆಚ್ಚಿನ ಸಂಖ್ಯೆಯಲ್ಲಿ ಆಂಬುಲೆನ್ಸ್ ನಿಲ್ಲುತ್ತಿದ್ದು,ಕೂಲಿಕಾರ್ಮಿಕರೆ ಹೆಚ್ಚು ವಾಸಿಸುವ ಬಡಾವಣೆಯ ಜನರು. ಸೋಂಕು ಹರಡುವ ಭೀತಿಯಿಂದ ಆತಂಕದ ಸ್ಥಿತಿಯಲ್ಲಿದ್ದು, ಶವ ಸುಡಲು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ ಮತ್ತು ಚಿತಾಗಾರವನ್ನು ಸ್ಥಳಾಂತರ ಮಾಡಿ ಎಂದು ಒತ್ತಾಯಿಸುತ್ತಿದ್ದಾರೆ. ಈ ಬಗ್ಗೆ ಸುರಕ್ಷಾ ಕ್ರಮಗಳನ್ನು ಕೈಗೊಳ್ಳಿ ಮತ್ತು ಚಿತಾಗಾರದ ಸುತ್ತಲೂ ಮತ್ತು ಓಡಾಡುವ ಜಾಗದಲ್ಲಿ ಪದೇ ಪದೇ ಸ್ಯಾನಿಟೈಸೇಷನ್ ಮಾಡಿ ಬಿಪಿಎಲ್ ಕಾರ್ಡ್ ಹೊಂದಿದ ಬಡವರಿಗೆ ಪಾಲಿಕೆ ವತಿಯಿಂದ ಉಚಿತವಾಗಿ ಸಿಟಿ ಸ್ಕ್ಯಾನ್‌ನ್ನು ಮಾಡಿಸಿ ಸದಸ್ಯರು ನೀಡುವ ಸಲಹೆಯನ್ನು ಕಾರ್ಯರೂಪಗೊಳಿಸಬೇಕು ಬರೆ ಚರ್ಚೆಮಾಡಿದರೆ ಸಾಲದು ಎಂದರು.
ಮಧ್ಯಾಹ್ನ ನಂತರವೂ ಸಭೆಯು ಮುಂದುವರೆದಿತ್ತು. ಸಭೆಯಲ್ಲಿ ಮೇಯರ್ ಸುನಿತಾ ಅಣ್ಣಪ್ಪ, ವಿಧಾನ ಪರಿಷತ್ ಸದಸ್ಯ ಆರ್.ಪ್ರಸನ್ನ ಕುಮಾರ್, ಅಪರ ಜಿಲ್ಲಾಧಿಕಾರಿ ಜಿ.ಅನುರಾಧ, ಪಾಲಿಕೆ ಸದಸ್ಯರು, ಅಧಿಕಾರಿಗಳು ಭಾಗವಹಿಸಿದ್ದರು.