ಶಿವಮೊಗ್ಗ : ಪ್ರತಿಪಕ್ಷಗಳ ನಾಯಕರ ಪತ್ರಿಕಾಗೋಷ್ಠಿ, ಪ್ರತಿಭಟನೆಗಳಿಂದ ಕೊರೋನಾ ನಿಯಂತ್ರಣವಾಗುತ್ತದೆಯೇ ಎಂದು ಪ್ರಶ್ನಿಸಿರುವ ಸಂಸದ ಬಿ.ವೈ. ರಾಘವೇಂದ್ರ ರಚನಾತ್ಮಕ ಸಲಹೆಗಳನ್ನು ನೀಡಿದರೆ ಅವನ್ನು ಸ್ವೀಕಾರ ಮಾಡಲಾಗುತ್ತದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕೊರೋನಾ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಜಿಲ್ಲಾಡಳಿತ, ಜಿಲ್ಲಾ ಉಸ್ತುವಾರಿ ಸಚಿವರು, ಸ್ವಯಂ ಸೇವಾ ಸಂಸ್ಥೆಗಳು ಹಗಲಿರುಳು ಶ್ರಮಿಸುತ್ತಿವೆ. ಅದನ್ನು ಗಮನಿಸಿಯೂ ವಿರೋಧ ಪಕ್ಷದ ನಾಯಕರು ಕೇವಲ ಟೀಕೆಗಾಗಿಯೇ ಟೀಕೆ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕೋವಿಡ್ ಲಸಿಕೆ ಬಂದಿಲ್ಲ ಎಂಬ ಕಾರಣಕ್ಕೆ ತೀರ್ಥಹಳ್ಳಿಯಲ್ಲಿ ಸರ್ಕಾರಿ ಆಸ್ಪತ್ರೆಯ ಬಾಗಿಲು ಹಾಕುವಂತಹ ಯತ್ನ ವಿರೋಧ ಪಕ್ಷದವರು ಮಾಡಿದ್ದಾರೆ. ಶಿವಮೊಗ್ಗದಲ್ಲಿ ಪ್ರತಿಭಟನೆ, ಪತ್ರಿಕಾಗೋಷ್ಠಿಗೆ ಮಾತ್ರ ಸೀಮಿತವಾಗಿ ಟೀಕೆ ಮಾಡಲಾಗುತ್ತಿದೆ. ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲಾ ಕೇಂದ್ರದಲ್ಲಿದ್ದುಕೊಂಡೇ ಶ್ರಮ ಹಾಕುತ್ತಿದ್ದರೂ ಕೂಡ ಅವರ ಬಗ್ಗೆ ಕ್ಷುಲ್ಲಕ ಟೀಕೆ ಮಾಡುತ್ತಿರುವುದು ಸರಿಯಲ್ಲ ಎಂದರು.
ಲಸಿಕೆ ಕೊರತೆ ಇದೆ ನಿಜ. ಆದರೆ ಬೇಡಿಕೆ ಇರುವಷ್ಟು ಲಸಿಕೆ ಒಮ್ಮೆಲೆ ಉತ್ಪಾದನೆ ಸಾಧ್ಯವಿಲ್ಲ. ಆದ್ಯತೆ ಮೇಲೆ ಲಸಿಕೆ ಬರುತ್ತಿದೆ. ಬಂದಂತೆ ನೀಡಲಾಗುತ್ತಿದೆ. ರೆಮ್‍ಡಿಸಿವಿಯರ್ ಕಳೆದ ವರ್ಷ ಉತ್ಪಾದನೆ ಕಡಿಮೆ ಇತ್ತು. ಈ ವರ್ಷ ಈ ಅವಧಿಗೆ 1 ಕೋಟಿ ಡೋಸ್ ಸಿದ್ಧವಿದೆ. ಬೇಡಿಕೆ ಇರುವಷ್ಟು ಮಾತ್ರ ಇದನ್ನು ಉತ್ಪಾದನೆ ಮಾಡಬೇಕಿದೆ. 3 ತಿಂಗಳ ಬಳಿಕ ಇದನ್ನು ಇಡಲು ಬರುವುದಿಲ್ಲ ಎಂದು ಹೇಳಿದರು.
ಬ್ಲಾಕ್ ಫಂಗಸ್‍ಗೂ ಔಷಧ ಉತ್ಪಾದನೆ ಹೆಚ್ಚು ಮಾಡಲಾಗಿದೆ. 1050 ಎಲ್‍ಎಸ್(ವಾಲ್ಸ್) ಔಷಧ ರಾಜ್ಯಕ್ಕೆ ಬಂದಿದೆ. ರಾಜ್ಯದಲ್ಲಿ ಆಕ್ಸಿಜನ್ ಬೆಡ್ ಕೂಡ ಹೆಚ್ಚಳ ಮಾಡಲಾಗಿದೆ. ಇತರೆ ಸೌಲಭ್ಯಗಳನ್ನು ಹೆಚ್ಚಳ ಮಾಡಲಾಗಿದೆ ಎಂದರು.ಜಿಲ್ಲಾ ಕೋವಿಡ್ ಆಸ್ಪತ್ರೆಗೆ ಪ್ರತಿ ದಿನ 2 ಟ್ಯಾಂಕರ್ ಆಕ್ಸಿಜನ್ ಬರುತ್ತಿದೆ. ತಾಲೂಕು ಆಸ್ಪತ್ರೆಗಳಲ್ಲಿಯೂ ಕೋವಿಡ್ ಕೇರ್ ಸೆಂಟರ್ ಮಾಡಲಾಗಿದೆ. ಶಿಕಾರಿಪುರ, ಶಿರಾಳಕೊಪ್ಪದಲ್ಲಿಯೂ ಕೂಡ ಆಕ್ಸಿಜನ್ ಬೆಡ್ ಮಾಡಲಾಗಿದೆ. ಇನ್ನೂ ವ್ಯವಸ್ಥೆ ಹೆಚ್ಚಳ ಮಾಡುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಲಾಗುತ್ತಿದೆ. ಆದರೂ ಈ ಸಂದರ್ಭದಲ್ಲಿ ವಿರೋಧ ಪಕ್ಷಗಳು ಅನವಶ್ಯಕ ಗೊಂದಲ ಸೃಷ್ಟಿಸುತ್ತಿವೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮೇಯರ್ ಸುನೀತ ಅಣ್ಣಪ್ಪ, ಸೂಡಾ ಅಧ್ಯಕ್ಷ ಎಸ್. ಎಸ್. ಜ್ಯೋತಿ ಪ್ರಕಾಶ್, ಕೆಎಸ್‍ಐಡಿಸಿ ಉಪಾಧ್ಯಕ್ಷ ಎಸ್. ದತ್ತಾತ್ರಿ, ನಗರ ಬಿಜೆಪಿ ಅಧ್ಯಕ್ಷ ಜಗದೀಶ್, ಡಿ.ಎಸ್. ಅರುಣ್ ಇದ್ದರು.