ಬೆಂಗಳೂರು: ರಾಜ್ಯದ 8 ನಗರಗಳಲ್ಲಿ ಮೇ.20ರವರೆಗೆ ಕೊರೊನಾ ಕರ್ಪ್ಯೂ ಹೇರಲಾಗಿದ್ದರು ಸಹ ಕೊರೊನಾ ಸೋಂಕಿನ ಸಂಖ್ಯೆ ಮಾತ್ರ ದಿನೇ ದಿನೇ ಏರಿಕೆಯಾಗುತ್ತಿದೆ. ಇದರಿಂದಾಗಿ ಕೊರೊನಾ ನಿಯಂತ್ರಣಕ್ಕಾಗಿ ಭಾನುವಾರ ಮುಖ್ಯಮಂತ್ರಿ ಸರ್ವ ಪಕ್ಷಗಳ ಸಭೆ ನಡೆಸಲಿದ್ದು, ಮಂಗಳವಾರ ಸಚಿವರು, ಅಧಿಕಾರಿಗಳು ಹಾಗೂ ತಜ್ಞರ ಸಭೆ ನಡೆಸಲಿದ್ದಾರೆ.
ರಾಜ್ಯದಲ್ಲಿ ಮತ್ತೆ ಲಾಕ್ ಡೌನ್ ಮಾಡುವುದು ಸೇರಿದಂತೆ ಟಫ್ ರೂಲ್ಸ್ ಜಾರಿಗೆ ಕ್ರಮ ಕೈಗೊಳ್ಳಲಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಮತ್ತೆ ಲಾಕ್ ಡೌನ್ ಜಾರಿಯಾಗಲಿದೆ ಎನ್ನಲಾಗುತ್ತಿದೆ.
ಈ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು, ರಾಜ್ಯದಲ್ಲಿ ದಿನೇ ದಿನೇ ಹೆಚ್ಚಳವಾಗುತ್ತಿರುವಂತ ಕೊರೋನಾ ನಿಯಂತ್ರಣಕ್ಕಾಗಿ ಈಗ ಕಟ್ಟು ನಿಟ್ಟಿನ ನಿಯಮಗಳ ಜಾರಿ ತುರ್ತು ಸಂದರ್ಭವಿದೆ. ಈಗಾಗಲೇ ಹಲವು ತಜ್ಞರೊಂದಿಗೆ ಚರ್ಚಿಸಲಾಗಿದೆ. ಕೊರೋನಾ ನಿಯಂತ್ರಣ ಕ್ರಮ ಕುರಿತಂತೆ ಸದ್ಯದಲ್ಲೇ ಮಹತ್ವದ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದರು.
ಇನ್ನೂ ಭಾನುವಾರ ವಿಪಕ್ಷಗಳ ನಾಯಕರು ಸೇರಿದಂತೆ ಸರ್ವ ಪಕ್ಷ ಸಭೆಯನ್ನು ಕರೆಯಲಾಗಿದೆ. ಈ ಸಭೆಯಲ್ಲಿಯೂ ರಾಜ್ಯದಲ್ಲಿನ ಕೊರೋನಾ ನಿಯಂತ್ರಣಕ್ಕಾಗಿ ಕೈಗೊಳ್ಳ ಬಹುದಾದಂತ ಕ್ರಮಗಳ ಕುರಿತಂತೆ ಸಲಹೆಯನ್ನು ಪಡೆಯಲಾಗುತ್ತದೆ. ಇದಾದ ಬಳಿಕ ಮಂಗಳವಾರ ಸಚಿವರು, ಅಧಿಕಾರಿಗಳು, ತಜ್ಞರ ಸಭೆಯನ್ನು ಕರೆದಿದ್ದು, ಅಲ್ಲಿಯೂ ಸರ್ವ ಪಕ್ಷ ಸಭೆಯಲ್ಲಿ ನಾಯಕರು ನೀಡಿದಂತ ಸಲಹೆ ಕುರಿತಂತೆ ಚರ್ಚಿಸಿ, ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದಿದ್ದಾರೆ.