ಹುಡುಕಾಟ ವರದಿ: ಸ್ವಾಮಿ
ಶಿವಮೊಗ್ಗ, ಜು.೦3:
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ತವರು ಜಿಲ್ಲೆಯಾದ ಶಿವಮೊಗ್ಗ ಜಿಲ್ಲೆಯ ಕಾರ್ಯಕ್ರಮಗಳ ವೈಖರಿ, ಅಧಿಕಾರಿಗಳು ಸಾರ್ವಜನಿಕರೊಂದಿಗೆ ಹೊಂದಿರುವ ಬಾಂಧವ್ಯ, ಜನಪ್ರತಿನಿಧಿಗಳ ಸೇವಾ ತತ್ಪರತೆಯ ಸಮಗ್ರ ಮಾಹಿತಿಗಳನ್ನು ನಿರಂತರವಾಗಿ ಪಡೆದು ಕ್ರಮಕೈಗೊಳ್ಳಲು ಮುಖ್ಯಮಂತ್ರಿಗಳು ಗುಪ್ತಗಾಮಿನಿ ಕಣ್ಗಾವಲಿಗೆ ಸೂಚನೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಶಿವಮೊಗ್ಗ ಜಿಲ್ಲೆಯ ಎಲ್ಲಾ ಇಲಾಖೆಗಳ ಸರ್ಕಾರಿ ಅಧಿಕಾರಿಗಳು ತೋರುವ ಕಾರ್ಯ ನಿಷ್ಠೆ, ಕಛೇರಿಯ ನಿರ್ವಹಣೆ, ಸರ್ಕಾರದ ಸೌಲಭ್ಯಗಳನ್ನು ಸಮರ್ಪಕವಾಗಿ ತಲುಪಿಸುವ ವಿಧಿ-ವಿಧಾನ ಬಗ್ಗೆ ಕಳೆದ ೧೦ ದಿನಗಳಿಂದ ವಾರಕ್ಕೆ ಕನಿಷ್ಠ ಎರಡು ಭಾರಿ ವರದಿ ನೀಡಲು ಗುಪ್ತ ಮೂಲಗಳಿಗೆ ಮಾಹಿತಿ ನೀಡಿದ್ದಾರೆಂದು ಬಲ್ಲ ಮೂಲಗಳು ತಿಳಿಸಿವೆ.
ಅಧಿಕಾರಿಗಳು ನಿತ್ಯ ಕಛೇರಿಗೆ ಬರುತ್ತಿದ್ದಾರಾ..? ಅಥವಾ ಮನೆಯಲ್ಲೇ ಎಲ್ಲಾ ಬೇಳೆ ಕಾಳು ಬೇಯಿಸುತ್ತಿದ್ದರಾ.. ಎಂಬ ವರದಿಯ ಜೊತೆಗೆ ಇಲಾಖೆಗಳ ಕನಿಷ್ಠ ಆರು ತಿಂಗಳ ಕಾರ್ಯ ಹಾಗೂ ಸಾರ್ವಜನಿಕರೊಂದಿಗೆ ಅಲ್ಲಿನ ಸ್ಪಂದನೆಯ ಬಗ್ಗೆ ಮಾಹಿತಿಯನ್ನು ಪಡೆಯುತ್ತಿದ್ದಾರೆಂದು ರಾಜಧಾನಿಯಂಗಳದ ಮೂಲಗಳು ಖಚಿತ ಪಡಿಸಿವೆ. ಇದೇ ಹೊತ್ತಿನಲ್ಲಿ ಶಿವಮೊಗ್ಗದ ವಿಧಾನಸಭೆ ಹಾಗೂ ವಿಧಾನ ಪರಿಷತ್ ಸದಸ್ಯರು ಕೊರೊನಾದ ಅವಧಿಯಲ್ಲಿ ಕೈಗೊಂಡಿರುವ ಕಾರ್ಯಕ್ರಮಗಳ ಸಮಗ್ರ ಮಾಹಿತಿಯನ್ನು ಕ್ರೂಢೀಕರಿಸಿ ನೀಡುವಂತೆ ಸೂಚಿಸಿದ್ದರೆನ್ನಲಾಗಿದೆ. ಹಾಗೆಯೇ ಈ ಜನಪ್ರತಿನಿಧಿಗಳಿಗೆ ಬಂದಂತಹ ಅನುದಾನದ ಸದ್ಬಳಕೆ ಹಾಗೂ ದುರ್ಬಳಕೆ ಬಗ್ಗೆ ಮಾಹಿತಿಯ ಜೊತೆಗೆ ಅನುದಾನ ಬಳಸಿಕೊಳ್ಳದ ಮಾಹಿತಿಯನ್ನು ಸಹ ಶಿವಮೊಗ್ಗ ಜಿಲ್ಲೆಯ ವಿಷಯದಲ್ಲಿ ಅತ್ಯಂತ ಪ್ರಮುಖವಾಗಿ ಪರಿಗಣಿಸಲು ನಿರ್ಧರಿಸರೆನ್ನಲಾಗಿದೆ.
ಶಾಸಕರುಗಳು ಕೊರೊನಾ ಅವಧಿಯಲ್ಲಿನ ಸಭೆ ಸಮಾರಂಭಗಳ ಮಾಹಿತಿ, ಅಧಿಕಾರಿಗಳೊಂದಿಗೆ ಕೈಗೊಂಡ ಕಾರ್ಯಕ್ರಮಗಳು, ಸಾರ್ವಜನಿಕವಾಗಿ ಸರ್ಕಾರಿ ಸೇವಾ ಸೌಲಭ್ಯಗಳ ಜೊತೆ ಮಾಹಿತಿಯನ್ನು ಪಡೆಯುವ ಉದ್ದೇಶವನ್ನು ಮುಖ್ಯಮಂತ್ರಿಗಳು ಹೊಂದಿದ್ದು, ಒಟ್ಟಾರೆ ಶಿವಮೊಗ್ಗ ಜಿಲ್ಲೆಯ ಅಭಿವೃದ್ದಿಗೆ ಹಾಗೂ ಇನ್ನಷ್ಟು ಒಳ್ಳೆಯ ಕಾರ್ಯಗಳ ಬಗ್ಗೆ ಕ್ರಮಕೈಗೊಳ್ಳಲು ನಿರ್ಧರಿಸರೆನ್ನಲಾಗಿದೆ.
ಎಲ್ಲಾ ಇಲಾಖೆಗಳ ಪ್ರತ್ಯೇಕ ಪರಿಶೀಲನೆ ನಂತರ ಅಗತ್ಯವಿರುವವರನ್ನು ಹೊರತುಪಡಿಸಿ ಅನಗತ್ಯವಾದ ಅಧಿಕಾರಿಗಳನ್ನು ಬೇರೆಡೆ ವರ್ಗಾಯಿಸುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಂಡಿದ್ದಾರೆನ್ನಲಾಗಿದ್ದು, ವಾರಕ್ಕೆ ಕನಿಷ್ಠ ಒಮ್ಮೆಯಾದರೂ ಈ ಮಾಹಿತಿಯನ್ನು ಸಲ್ಲಿಸುವ ಕಾರ್ಯದ ಹೊಣೆಯನ್ನು ರಾಜ್ಯ ಗುಪ್ತ ಇಲಾಖೆಗೆ ವಹಿಸಲಾಗಿದೆ ಎನ್ನಲಾಗಿದೆ.
(ಸಮಗ್ರ ಮಾಹಿತಿ ಇಂದಿನ ನಿಮ್ಮ ತುಂಗಾ ತರಂಗದಲ್ಲಿ)

By admin

ನಿಮ್ಮದೊಂದು ಉತ್ತರ

You missed

error: Content is protected !!