ಶಿವಮೊಗ್ಗ: ಕಾಂಗ್ರೆಸ್ ನಾಯಕರೇ ಇನ್ನಾದರೂ ಓಟಿನ ಆಸೆಗಾಗಿ ಓಲೈಕೆ ರಾಜಕಾರಣ ಮಾಡುವುದನ್ನು ಬಿಡಿ. ಇಲ್ಲದಿದ್ದರೆ ಹಿಂದೂಗಳು ದಂಗೆಯೇಳುವ ಕಾಲ ದೂರವಿಲ್ಲ ಎಂದು ರಾಷ್ಟ್ರಭಕ್ತರ ಬಳಗದ ಸಂಚಾಲಕ ಕೆ.ಎಸ್. ಈಶ್ವರಪ್ಪ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುವುದರ ಜೊತೆಗೆ ಎಚ್ಚರಿಕೆ ನೀಡಿದ್ದಾರೆ.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ವಕ್ಫ್ ಪ್ರಕರಣಗಳು ಹೆಚ್ಚಾಗುತ್ತಲೇ ಹೋಗುತ್ತಿವೆ. ಮುಸಲ್ಮಾನರು ಮಾಡುವ ಅಚಾತುರ್ಯಗಳನ್ನೆಲ್ಲಾ ಗಮನಿಸಿದರೂ ಕೂಡ ಕಾಂಗ್ರೆಸ್ ಸರ್ಕಾರ ಸುಮ್ಮನಿದೆ. ರೈತರ ಭೂಮಿ, ದೇವಸ್ಥಾನ, ಮಠಗಳು ಅಷ್ಟೇಕೆ ಶಾಲಾ, ಕಾಲೇಜುಗಳು, ಪುರಾತತ್ವ ಇಲಾಖೆಯ ಪ್ರದೇಶಗಳನ್ನೂ ಕೂಡ ವಕ್ಫ್ ಆಸ್ತಿ ಎಂದು ಬದಲಾಯಿಸಲಾಗಿದೆ. ವಿಶ್ವೇಶ್ವರಯ್ಯನವರು ಹುಟ್ಟಿದ ಗ್ರಾಮವನ್ನೂ ಕೂಡ ಇವರು ಬಿಟ್ಟಿಲ್ಲ ಎಂದರು.
ಮತ್ತೊಂದು ಕಡೆ ಇನ್ನೊಬ್ಬ ಮುಸ್ಲಿಂ ನಾಯಕ ಅಂಬೇಡ್ಕರ್ ಅವರ ಹೆಸರನ್ನು ಬಳಸಿಕೊಂಡಿದ್ದಾನೆ. ಅಂಬೇಡ್ಕರ್ ಅವರು ಇಸ್ಲಾಂ ಧರ್ಮ ಸೇರಲು ಸಿದ್ಧತೆ ಮಾಡಿಕೊಂಡಿದ್ದರು ಎಂದು ಹೇಳುವ ಮೂಲಕ ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದ್ದಾರೆ. ಹೀಗೆ ಅವಮಾನ ಮಾಡಿದ್ದರೂ ಕಾಂಗ್ರೆಸ್ ನ ಒಬ್ಬ ನಾಯಕನೂ ಕೂಡ ಏಕೆಂದು ಪ್ರಶ್ನೆ ಮಾಡಲಿಲ್ಲ. ಇಸ್ಲಾಮೀಕರಣಕ್ಕೆ ಕಾಂಗ್ರೆಸ್ ಸರ್ಕಾರ ನಿರಂತರವಾಗಿ ಬೆಂಬಲ ನೀಡುತ್ತಾ ಬಂದಿದೆ ಎಂದು ಆರೋಪಿಸಿದರು.
ಇದೀಗ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಕೂಡ ಸರ್ಕಾರಿ ಗುತ್ತಿಗೆಗಳಲ್ಲಿ ಮುಸ್ಲಿಮರಿಗೆ ಶೇ. ೪ರಷ್ಟು ಮೀಸಲಾತಿ ಘೋಷಣೆ ಮಾಡಲು ಹೊರಟಿದ್ದಾರೆ. ಕೇಳಿದರೆ ಹಾರಿಕೆ ಉತ್ತರ ಕೊಡುತ್ತಿದ್ದಾರೆ. ಇವರೇನು ಹಿಂದೂಸ್ಥಾನವನ್ನು ಪಾಕಿಸ್ತಾನ ಮಾಡಲು ಹೊರಟಿದ್ದಾರಾ? ಶೇ. ೪ ರಷ್ಟು ಮೀಸಲಾತಿ ಬೇಕೆ? ಇದು ಓಲೈಕೆ ರಾಜಕಾರಣವಲ್ಲವೇ ಎಂದು ಪ್ರಶ್ನೆ ಮಾಡಿದರು.
ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ನಿರಂತರವಾಗಿ ದಾಳಿ ನಡೆಯುತ್ತಲೇ ಇದೆ. ಅತ್ಯಾಚಾರದಂತಹ ಘಟನೆಗಳು ಕೂಡ ನಡೆದಿವೆ. ಬಾಂಗ್ಲಾದೇಶದ ಪ್ರಧಾನಿಗೆ ಭಾರತ ರಕ್ಷಣೆ ಕೊಟ್ಟಿರುವುದು ಸೌಹಾರ್ದದ ಸಂಕೇತವಲ್ಲವೇ? ಪಾಕಿಸ್ತಾನದಲ್ಲಿ ಹಿಂದೂಗಳ ಮೇಲೆ ನಿರಂತರವಾದ ಹಿಂಸೆ ನಡೆಯುತ್ತಿದೆ. ಈಗ ಭಾರತ ಅದರ ಪಟ್ಟಿಗೆ ಸೇರಿದೆ. ಅದರಲ್ಲೂ ಕರ್ನಾಟಕದಲ್ಲಿ ಮುಸ್ಲಿಂ ಯುವ ಪ್ರಾರಂಭವಾಗಿದೆ. ಇದಕ್ಕೆ ಕಾಂಗ್ರೆಸ್ ಸರ್ಕಾರ ನೇರ ಕಾರಣ ಎಂದು ಆರೋಪಿಸಿದರು.
ಇದು ಹೀಗೇ ಮುಂದುವರೆದರೆ ಸಾಧು ಸಂತರ ನೇತೃತ್ವದಲ್ಲಿ ದಂಗೆ ಏಳುವ ಕಾಲ ದೂರವಿಲ್ಲ. ಕಾಂಗ್ರೆಸಿಗರನ್ನು ಹುಡುಕಿ ಹುಡುಕಿ ಹೊಡೆದು ಕೊಲ್ಲುವಂತಹ ದಿನಗಳು ಬಂದರೂ ಅಶ್ಚರ್ಯವಿಲ್ಲ. ಆದ್ದರಿಂದ ಕಾಂಗ್ರೆಸ್ ಮಿತ್ರರೇ ಓಟಿನ ಆಸೆಗಾಗಿ ರಾಜ್ಯವನ್ನು ಇಸ್ಲಾಮೀಕರಣ ಮಾಡಬೇಡಿ ಎಂದು ಸಲಹೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಮಹಾಲಿಂಗಶಾಸ್ತ್ರಿ, ಶ್ರೀಕಾಂತ್, ಶಿವಾಜಿ. ಬಾಲು, ಶಂಕರನಾಯ್ಕ್, ಮೋಹನ್, ರಾಜಯ್ಯ, ಕಾಚನಕಟ್ಟೆ ಸತ್ಯನಾರಾಯಣ ಇದ್ದರು.