ಶಿವಮೊಗ್ಗ,ಸೆ.24: ಕುವೆಂಪು ರಸ್ತೆಯಲ್ಲಿರುವ ಆರ್ಯವೈಶ್ಯ ಶ್ರೀರಾಮ ಸಹಕಾರ ಸಂಘದ ಶತಮಾನೋತ್ಸವ ಕಾರ್ಯಕ್ರಮಗಳನ್ನು ಸೆ.27 ರಿಂದ ಸೆ.29ರವರೆಗೆ ಅಲ್ಲಮ ಪ್ರಭು ಮೈದಾನ (ಫ್ರೀಡಂ ಪಾರ್ಕ್)ದಲ್ಲಿ ಆಯೋಜಿಸಲಾಗಿದೆ ಎಂದು ಶತಮಾನೋತ್ಸವ ಸಮಿತಿ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ತಿಳಿಸಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, 1924ರಲ್ಲಿ ಸಮಾಜ ಹಿರಿಯರು ಸಂಘವನ್ನು ಹುಟ್ಟು ಹಾಕಿದರು. ಸಂಘ ಆರಂಭವಾದ ವರ್ಷದಲ್ಲಿ 59 ಸದಸ್ಯರಿದ್ದರು. ಇಂದು 3000ಕ್ಕಿಂತ ಅಧಿಕ ಷೇರುದಾರರನ್ನು ಹೊಂದಿದೆ. ಸಂಘವು ಈಗಾಗಲೇ ರಜತ ಮಹೋತ್ಸವ, ಸುವರ್ಣ ಮಹೋತ್ಸವ, ವಜ್ರ ಮಹೋತ್ಸವ ಹಾಗೂ ಅಮೃತ ಮಹೋತ್ಸವನ್ನು ಯಶಸ್ವಿಯಾಗಿ ಆಚರಿಸಿ, ಇದೀಗ ಶತಮಾನೋತ್ಸವದ ಆಚರಣೆಗೆ ಸಜ್ಜುಗೊಂಡಿದೆ ಎಂದರು.

ಆರ್ಯವೈಶ್ಯ ಸಹಕಾರ ಸಂಘಗಳು ಹಾಗೂ ನಗರದ ವಿವಿಧ ಸಹಕಾರ ಸಂಘಗಳ ರಾಜ್ಯಮಟ್ಟದ ಸಮಾವೇಶ, ಸಂಸ್ಥಾಪಕರದ ಸ್ಮರಣೆ, ಭವ್ಯ ಜಾಥಾ, ಹಿರಿಯ ಸಹಕಾರಿಗಳಿಗೆ ಸನ್ಮಾನ, ಸಾಂಸ್ಕøತಿಕ ವೈವಿಧ್ಯ, ವಿಜಯ್ ಪ್ರಕಾಶ್‍ರವರಿಂದ ಸಂಗೀತ ಸಂಜೆ ವಿಶೇಷವಾಗಿ ಶೆಟ್ಟರ ಸಂತೆ ಹಾಗೂ ಪ್ರಸಿದ್ಧ ಗಾಯಕ ಕಾರ್ಯಕ್ರಮಗಳನ್ನು ಈ ಶತಮಾನೋತ್ಸವದ ಭಾಗವಾಗಿ ಆಯೋಜಿಸಲಾಗಿದೆ ಎಂದರು.

ಸೆ.28ರಂದು ಬೆಳಿಗ್ಗೆ 9ಗಂಟೆಗೆ ಅಲ್ಲಮ ಪ್ರಭು ಮೈದಾನದಲ್ಲಿ ಆರಂಭಗೊಳ್ಳಲಿರುವ ಈ ಶತಮಾನೋತ್ಸವ ಸಮಾರಂಭದ ಸಾನ್ನಿಧ್ಯವನ್ನು ಬೆಂಗಳೂರು ವಾಸವಿ ವಿದ್ಯಾ ಪೀಠದ ಶ್ರೀ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ವಹಿಸಿಕೊಳ್ಳಲಿದ್ದು, ಶತಮಾನೋತ್ಸವವನ್ನು ಮೈಸೂರು ರಾಜವಂಶಸ್ಥರು, ಮೈಸೂರು-ಕೊಡಗು ಕ್ಷೇತ್ರದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್‍ರವರು ಉದ್ಘಾಟಿಸಲಿದ್ದಾರೆ. ಶತಮಾನೋತ್ಸವ ಸಮಿತಿಯ ಗೌರವ ಅಧ್ಯಕ್ಷ, ವಿಧಾನ ಪರಿಷತ್ ಮಾಜಿ ಸಭಾಪತಿ ಡಿ.ಹೆಚ್.ಶಂಕರಮೂರ್ತಿ ಉಪಸ್ಥಿತರಿರುವರು ಎಂದರು.

ರಾಜ್ಯ ಸಮಾವೇಶ: ಉದ್ಘಾಟನೆಯ ನಂತರ ಬೆಳಿಗ್ಗೆ 11ಗಂಟೆಗೆ ನಡೆಯುವ ರಾಜ್ಯ ಆರ್ಯವೈಶ್ಯ ಸಹಕಾರ ಸಂಘಗಳು ಪತ್ತಿನ ಸಹಕಾರ ಹಾಗೂ ಶಿವಮೊಗ್ಗ ನಗರದ ಸಂಘಗಳ ರಾಜ್ಯ ಸಮಾವೇಶವನ್ನು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಚಾಲನೆ ನೀಡಲಿದ್ದಾರೆ.

ರಾಜ್ಯ ಆರ್ಯವೈಶ್ಯ ಕೋ-ಆಪ್ ಬ್ಯಾಂಕ್ ಅಂಡ್ ಸೊಸೈಟೀಸ್ ಫೆಡರೇಷನ್‍ನ ಅಧ್ಯಕ್ಷ ಆರ್.ಜಿ.ಶ್ರೀನಿವಾಸಮೂರ್ತಿ ಉಪಸ್ಥಿತರಿರಲಿದ್ದಾರೆ. ಇದೇ ಸಂದರ್ಭದಲ್ಲಿ ವಿಚಾರ ಸಂಕಿರಣ ನಡೆಯಲಿದ್ದು, ಬೆಳಿಗ್ಗೆ 11ರಿಂದ 12.15ರ ಮೊದಲ ಅವಧಿಯಲ್ಲಿ ಸಹಕಾರ ರಂಗ ಸವಾಲುಗಳು ಮತ್ತು ಅವಕಾಶಗಳು ಕುರಿತು ಕರ್ನಾಟಕ ಇನ್ಸಿಟ್ಯೂಟ್ ಆಫ್ ಕೋ- ಆಪರೇಟೀವ್ ಮ್ಯಾನೇಜ್‍ಮೆಂಟ್‍ನ ಪ್ರಾಚಾರ್ಯರಾದ ಡಾ. ಎಂ. ವಿಶ್ವೇಶ್ವರಯ್ಯ, ಕರ್ನಾಟಕ ಸೌಹಾರ್ದ ಫೆಡರೇಷನ್ ಕೋ-ಆಪರೇಟೀವ್ ಲಿ..ನ ನಿವೃತ್ತ ವ್ಯವಸ್ಥಾಪಕ ಅನೂಪ್ ಜಿ. ದೇಶಪಾಂಡೆ ಮಾತನಾಡಲಿದ್ದಾರೆ. ಐಸಿಯ ನಿವೃತ್ತ ಉಪ ನಿರ್ದೇಶಕ ಜಿ.ಕೆ.ರಾಮಪ್ಪ ಕಾರ್ಯಕ್ರಮವನ್ನು ನಿರ್ವಹಿಸಲಿದ್ದಾರೆ. 12.30 ರಿಂದ 2.00 ಗಂಟೆವರೆಗಿನ ಎರಡನೇ ಅವಧಿಯಲ್ಲಿ ಸಿಐಡಿಯ ಡಿವೈಎಸ್‍ಪಿ ಕೆ. ಎನ್. ಯಶವಂತ ಕುಮಾರ್‍ರವರು ಆರ್ಥಿಕ ಸೈಬರ್ ಕ್ರೈಮ್ ಕುರಿತು ಮಾತನಾಡಲಿದ್ದಾರೆ ಎಂದರು.

ಸಾಂಸ್ಕೃತಿಕ ಸಂಜೆ-ಗೌರವಾರ್ಪಣೆ: ಸಂಜೆ 5.30ಕ್ಕೆ ಆರ್ಯವೈಶ್ಯ ಶ್ರೀರಾಮ ಸಹಕಾರ ಸಂಘದ ಷೇರುದಾರರಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಇದೇ ಸಂದರ್ಭದಲ್ಲಿ ಸಂಘಕ್ಕೆ ಸೇವೆ ಸಲ್ಲಿಸಿದ ಈ ಹಿಂದಿನ ಆಡಳಿತ ಮಂಡಳಿ ಸದಸ್ಯರು ಹಾಗೂ ಸಿಬ್ಬಂದಿ ವರ್ಗದವರಿಗೆ ಗೌರವ ಸಮರ್ಪಿಸಲಾಗುವುದು ಎಂದರು.

ಮೆರವಣಿಗೆ: ಶತಮಾನೋತ್ಸವದ ಅಂಗವಾಗಿ ಸೆ.29ರ ಬೆಳಿಗ್ಗೆ 8ಗಂಟೆಗೆ ಕುವೆಂಪು ರಸ್ತೆಯ ವಾಸವಿ ವೃತ್ತದಿಂದ ಅಲ್ಲಮ ಪ್ರಭು ಮೈದಾನ (ಫ್ರೀಡಂ ಪಾರ್ಕ್) ವರೆಗೆ ಭವ್ಯ ಮೆರವಣಿಗೆ ನಡೆಯಲಿದ್ದು, ಮೆರವಣಿಗೆಗೆ ಕರ್ನಾಟಕ ಆರ್ಯವೈಶ್ಯ ಮಹಾಸಭಾದ ಅಧ್ಯಕ್ಷ ಆರ್.ಪಿ. ರವಿಶಂಕರ್ ಚಾಲನೆ ನೀಡಲಿದ್ದಾರೆ. 10.30ಕ್ಕೆ ಸಂಘದ ಸಂಸ್ಥಾಪಕ ಕುಟುಂಬ ವರ್ಗದವರಿಗೆ ನೀಡಲಾಗುವ ಗೌರವಾರ್ಪಣೆ- ಸಂಸ್ಥಾಪಕರ ಸ್ಮರಣೆ ವೇದಿಕೆ ಕಾರ್ಯಕ್ರಮವನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಸಹಕಾರ ಸಚಿವ ಕೆ.ಎನ್.ರಾಜಣ್ಣ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ, ಸಂಸದ ಬಿ.ವೈ.ರಾಘವೇಂದ್ರ, ಶಾಸಕರಾದ ಎಸ್.ಎನ್. ಚನ್ನಬಸಪ್ಪ, ಶಾರದಾ ಪೂರಾನಾಯ್ಕ, ಡಾ|| ಧನಂಜಯ ಸರ್ಜಿ, ಬಲ್ಕಿಷ್ ಬಾನು, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥಗೌಡ, ಸಹಕಾರ ಸಂಘಗಳ ಉಪ ನಿಬಂಧಕ ಚಂದ್ರಶೇಖರ ನಾಗಭೂಷಣ ಕಲ್ಮನೆ, ಸಹಕಾರ ಸಂಘಗಳ ಸಹಾಯಕ ನಿಬಂಧಕ ಟಿ.ವಿ. ಶ್ರೀನಿವಾಸ್, ಕರ್ನಾಟಕ ಆರ್ಯವೈಶ್ಯ ಮಹಾಸಭಾದ ಅಧ್ಯಕ್ಷ ಆರ್.ಪಿ.ರವಿಶಂಕರ್ ಇನ್ನಿತರರು ಭಾಗವಹಿಸಲಿದ್ದಾರೆ ಎಂದರು.

ಶೆಟ್ಟರ ಸಂತೆ: ಶತಮಾನೋತ್ಸವದ ಭಾಗವಾಗಿ ಸೆ.27, 28 ಮತ್ತು 29ರಂದು ಅಲ್ಲಮ ಪ್ರಭು ಮೈದಾನ ಆವರಣದಲ್ಲಿ ಶೆಟ್ಟರ ಸಂತೆ ಶೀರ್ಷಿಕೆ ಅಡಿಯಲ್ಲಿ ನೂರಕ್ಕೂ ಹೆಚ್ಚು ಸ್ಟಾಲ್‍ಗಳನ್ನು ತೆರೆಯಲಾಗಿದ್ದು, ವೈವಿಧ್ಯಮಯ ತಿನಿಸುಗಳು, ಅಲಂಕಾರಿಕ ಸಾಮಗ್ರಿಗಳು, ಗೃಹೋಪಯೋಗಿ ವಸ್ತುಗಳು, ಚಿತ್ತಾಕರ್ಷಕ ವಸ್ತ್ರ ವೈವಿಧ್ಯಗಳು. ಎಲ್ಲವೂ ಕೂಡಾ ಒಂದೇ ಸೂರಿನಡಿಯಲ್ಲಿ ಲಭ್ಯವಾಗಲಿವೆ ಎಂದು ಸಂಘದ ಅಧ್ಯಕ್ಷ ಡಿ.ಎಂ. ಅರವಿಂದ್ ತಿಳಿಸಿದರು.

ಸಂಗೀತ ಸಂಜೆ: 29ರ ಭಾನುವಾರ ಸಂಜೆ 5.30ಕ್ಕೆ ನಾಡಿನ ಹೆಸರಾಂತ ಗಾಯಕ ವಿಜಯ ಪ್ರಕಾಶ್ ಮತ್ತು ತಂಡದವರಿಂದ ಸಂಗೀತ ಸಂಜೆ ನಡೆಯಲಿದ್ದು ಸಾರ್ವಜನಿಕರು ಸಹ ಈ ಮೂರು ದಿನ ಕಾರ್ಯಕ್ರಮದಲ್ಲಿ ಭಾಗವಹಿಸಬಹುದಾಗಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ನಟರಾಜ್ ಕೆ.ಜಿ., ವಿ.ಚೇತನ್, ನಾಗಭೂಷಣ್, ಸಚ್ಚಿನ್, ಗೀತಾ, ಜಿ.ವಿ.ಶ್ರೀಧರಮೂರ್ತಿ, ಹೆಚ್.ಎಸ್.ಮಂಜುನಾಥ್, ಬೆಳಗೂರು ಮಂಜುನಾಥ್, ಸುಪ್ರೀಯಾ ಚೇತನ್, ಎಸ್.ಎನ್. ಶ್ರೀನಾಗ್, ವಿಕ್ರಮ್, ಗಿರೀಶ್, ಸುರೇಶ್ ಸೇರಿದಂತೆ ಹಲವರಿದ್ದರು.

By admin

ನಿಮ್ಮದೊಂದು ಉತ್ತರ

You missed

error: Content is protected !!