ಸಾಗರ : ಮುಳುಗಡೆ ಸಂತ್ರಸ್ತರ ತ್ಯಾಗಕ್ಕೆ ಪ್ರತಿಫಲ ಸಿಗಲಿದ್ದು, ಹಿನ್ನೀರಿನ ಜನರ ಬಹುಕಾಲದ ಕನಸು ಇನ್ನೆರಡು ಮೂರು ತಿಂಗಳಿನಲ್ಲಿ ನನಸಾಗಲಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದರು.


ತಾಲ್ಲೂಕಿನ ಅಂಬಾರಗೋಡ್ಲು-ಕಳಸವಳ್ಳಿ ಸೇತುವೆ ನಿರ್ಮಾಣ ಸ್ಥಳಕ್ಕೆ ಮಂಗಳವಾರ ಭೇಟಿ ಕಾಮಗಾರಿ ಪರಿಶೀಲನೆ ನಡೆಸಿ ಅಧಿಕಾರಿಗಳ ಜೊತೆ ಚರ್ಚಿಸಿದ ಅವರು, ಮಲೆನಾಡಿಗರ ಶತಮಾನದ ಕನಸು ನನಸಾಗುವ ಕಾಲಘಟ್ಟ ಸನ್ನಿಹಿತವಾಗಿದೆ. ತುಮರಿ ಸೇತುವೆ ಐತಿಹಾಸಿಕ ಮೈಲಿಗಲ್ಲಾಗಲಿದೆ ಎಂದು ಹೇಳಿದರು.


ಶರಾವತಿ ಹಿನ್ನೀರಿನ ಅಂಬಾರಗೋಡ್ಲು-ಕಳಸವಳ್ಳಿ ನಡುವೆ ಸುಮಾರು ೪೨೩.೧೫ ಕೋಟಿ ರೂ. ವೆಚ್ಚದಲ್ಲಿ ೨.೨೫ ಕಿ.ಮೀ. ಸೇತುವೆ ನಿರ್ಮಾಣವಾಗುತ್ತಿದ್ದು, ಕಾಮಗಾರಿ ಅತಿಶೀಘ್ರವಾಗಿ ನಡೆಯುತ್ತಿದೆ. ಕೇಬಲ್ ಆಧಾರಿತ ಸೇತುವೆ ಇದಾಗಿದ್ದು, ವಿಶೇಷ ವಿನ್ಯಾಸ ಹೊಂದಿದ್ದು, ಪ್ರವಾಸಿಗರನ್ನು ಆಕರ್ಷಿಸುವ ಎಲ್ಲಾ ಸಾಧ್ಯತೆ ಇದೆ. ಕಾಮಗಾರಿಯನ್ನು ತ್ವರಿತವಾಗಿ ಮುಗಿಸಿ ಸಾರ್ವಜನಿಕ ಸಂಚಾರಕ್ಕೆ ಅವಕಾಶ ಕಲ್ಪಿಸಿಕೊಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.


ನಾಡಿಗೆ ಬೆಳಕು ನೀಡಲು ತಮ್ಮ ಸರ್ವಸ್ವವನ್ನು ಕಳೆದುಕೊಂಡ ಹಿನ್ನೀರಿನ ಜನರ ಬದುಕು ಹಸನಾಗಬೇಕು. ನಾಡಿಗೆ ಬೆಳಕು ನೀಡಲು ತ್ಯಾಗ ಮಾಡಿದವರ ಹಿತಕಾಯಲು ನಾವು ಬದ್ದರಾಗಿದ್ದೇವೆ. ಪ್ರವಾಸೋದ್ಯಮ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸುವ ಜೊತೆಗೆ ಸಿಗಂದೂರು

ಚೌಡೇಶ್ವರಿ ದೇವಿಯ ದರ್ಶನಕ್ಕೆ ರಾಜ್ಯ ಮತ್ತು ಹೊರರಾಜ್ಯದಿಂದ ಬರುವ ಭಕ್ತಾದಿಗಳಿಗೆ ಅನುಕೂಲವಾಗಲಿದೆ. ತುರ್ತು ಸಂದರ್ಭದಲ್ಲಿ ಸಾಗರ ಕೇಂದ್ರಕ್ಕೆ ಹೋಗಲು ಸೇತುವೆ ಸ್ಥಳೀಯರಿಗೆ ಹೆಚ್ಚು ಅನುಕೂಲವಾಗಲಿದೆ. ಸೇತುವೆ ನಿರ್ಮಾಣದಿಂದ ನನಗೆ ಸಾರ್ಥಕತೆಯ ಭಾವನೆ ಮೂಡಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು, ಬಿಜೆಪಿ ಸ್ಥಳೀಯ ಪ್ರಮುಖರು ಹಾಜರಿದ್ದರು

By admin

ನಿಮ್ಮದೊಂದು ಉತ್ತರ

error: Content is protected !!