ಸಾಗರ : ಸ್ಥಳೀಯ ಸಂಸ್ಥೆಗಳ ಕಾಯ್ದೆಗನುಣವಾಗಿ ನಿಗಧಿಯಾದ ದಿನಾಂಕದಂದೆ ಸಾಗರ ನಗರಸಭೆ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸುವಂತೆ ಒತ್ತಾಯಿಸಿ ಶುಕ್ರವಾರ ಬಿಜೆಪಿ ವತಿಯಿಂದ ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಚನ್ನಬಸಪ್ಪ, ಸ್ಥಳೀಯ ಸಂಸ್ಥೆಗಳ ಮೇಲೆ ಸರ್ಕಾರ ಗದಾಪ್ರಹಾರ ಮಾಡುತ್ತಿದೆ. ಎಲ್ಲೆಲ್ಲಿ ಬಿಜೆಪಿ ಬಹುಮತ ಇದೆಯೋ ಅಂತಹ ಕಡೆಗಳಲ್ಲಿ ಅಧಿಕಾರ ನಡೆಸದಂತೆ ಷಡ್ಯಂತ್ರ ರೂಪಿಸುತ್ತಿದೆ. ಸಾಗರ ನಗರಸಭೆಯಲ್ಲಿ ಬಿಜೆಪಿ ಅತಿಹೆಚ್ಚು ಸದಸ್ಯರನ್ನು ಹೊಂದಿದ್ದು ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಿಗಧಿಯಾಗಿತ್ತು. ಸ್ಥಳೀಯ ಶಾಸಕರು ಚುನಾವಣೆ ನಡೆಯದಂತೆ
ಉದ್ದೇಶಪೂರ್ವಕವಾಗಿ ತಮ್ಮ ಸದಸ್ಯರ ಮೂಲಕ ತಡೆಯಾಜ್ಞೆ ತರಿಸಿ ಸ್ಥಳೀಯ ಸಂಸ್ಥೆ ಆಡಳಿತಕ್ಕೆ ಅಡಚಣೆ ಉಂಟು ಮಾಡಿದ್ದಾರೆ. ಅಧಿಕಾರಿಗಳು ಇದಕ್ಕೆ ಆಸ್ಪದ ಕೊಡದೆ ತಕ್ಷಣ ಚುನಾವಣೆ ನಡೆಸಿ ಪ್ರಜಾಪ್ರಭುತ್ವದ ಮೌಲ್ಯ ಎತ್ತಿ ಹಿಡಿಯಬೇಕು. ಪ್ರಕರಣ ನ್ಯಾಯಾಲಯದಲ್ಲಿದೆ ಎಂದು ಅಧಿಕಾರಿಗಳು ಕೈಕಟ್ಟಿ ಕುಳಿತುಕೊಳ್ಳಬಾರದು ಎಂದರು.
ಮಾಜಿ ಸಚಿವ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಹರತಾಳು ಹಾಲಪ್ಪ ಮಾತನಾಡಿ, ಆ. ೨೬ಕ್ಕೆ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಿಗಧಿಯಾಗಿತ್ತು. ಚುನಾವಣೆಗೆ ಸಿದ್ದತೆ ನಡೆಯುತ್ತಿರುವಾಗ ಕಾಂಗ್ರೇಸ್ ತಡೆಯಾಜ್ಞೆ ತರುವ ಮೂಲಕ ಪ್ರಜಾಪ್ರಭುತ್ವ ವಿರೋಧಿಧೋರಣೆ ತೆಳೆದಿದೆ. ಚುನಾವಣಾ ವೇಳಾಪಟ್ಟಿ ಪ್ರಕಟವಾದ ಮೇಲೆ ತಡೆಯಾಜ್ಞೆ ತರಲು ಬರುವುದಿಲ್ಲ. ಇದನ್ನು ಅಧಿಕಾರಿಗಳು ಗಮನ ಹರಿಸಬೇಕು. ಬಿಜೆಪಿ ಅಧಿಕಾರಕ್ಕೆ ಬರಬಾರದು ಎನ್ನುವ ಏಕೈಕ ಉದ್ದೇಶದಿಂದ ಕಾಂಗ್ರೇಸ್ ಈ ಹುನ್ನಾರ ನಡೆಸುತ್ತಿದೆ.
ಒಬ್ಬ ಸದಸ್ಯೆ ತಾನು ಅಧ್ಯಕ್ಷನಾಗುತ್ತೇನೆ ಬೆಂಬಲಿಸಿ ಎಂದು ಎಲ್ಲ ಸದಸ್ಯರ ಹತ್ತಿರ ಮನವಿ ಮಾಡಿದ್ದರೇ, ಇನ್ನೊಬ್ಬ ಸದಸ್ಯೆ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ. ಇದು ಕಾಂಗ್ರೇಸ್ನ ದುರುದ್ದೇಶಪೂರಿತ ನಡೆಗೆ ಸಾಕ್ಷಿಯಾಗಿದೆ. ಇದ್ಯಾವುದಕ್ಕೂ ಜಿಲ್ಲಾಧಿಕಾರಿಗಳು, ಉಪವಿಭಾಗಾಧಿಕಾರಿಗಳು ಕಿವಿಗೊಡದೆ ನಿಗಧಿತ ದಿನಾಂಕಕ್ಕೆ ಚುನಾವಣೆ ನಡೆಸಬೇಕು. ಬಿಜೆಪಿ ಸಹ ಈ ಕುರಿತು ಕಾನೂನು ಹೋರಾಟ ರೂಪಿಸುವ ಬಗ್ಗೆ ಚಿಂತನೆ ನಡೆಸುತ್ತದೆ ಎಂದು ಹೇಳಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್ ಮಾತನಾಡಿ, ಕಾಂಗ್ರೇಸ್ ಪಕ್ಷ ಅಧಿಕಾರ ವಿಕೇಂದ್ರೀಕರಣದ ವಿರೋಧಿಯಾಗಿದೆ. ಬಿಜೆಪಿ ಅಧಿಕಾರ ನಡೆಸುತ್ತದೆ ಎನ್ನುವ ಏಕೈಕ ಉದ್ದೇಶದಿಂದ ನ್ಯಾಯಾಲಯದಿಂದ ತಡೆಯಾಜ್ಞೆ ತರಿಸಲಾಗಿದೆ. ಕಾಂಗ್ರೇಸ್ಸಿಗರು ಹತಾಶರಾಗಿ ಇಂತಹ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.
ಈ ಸಂದರ್ಭದಲ್ಲಿ ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ದೇವೇಂದ್ರಪ್ಪ, ನಗರ ಮಂಡಲ ಅಧ್ಯಕ್ಷ ಗಣೇಶಪ್ರಸಾದ್, ನಗರಸಭೆ ಸದಸ್ಯರಾದ ಮಧುರಾ ಶಿವಾನಂದ್, ಶ್ರೀನಿವಾಸ್ ಮೇಸ್ತ್ರಿ, ವಿ. ಮಹೇಶ್, ಬಿ.ಎಚ್.ಲಿಂಗರಾಜ್, ಸವಿತಾ ವಾಸು, ಮೈತ್ರಿ ಪಾಟೀಲ್, ಭಾವನಾ ಸಂತೋಷ್, ಪ್ರೇಮ ಕಿರಣ್ ಸಿಂಗ್, ಕುಸುಮ ಸುಬ್ಬಣ್ಣ, ಸರೋಜಮ್ಮ, ತುಕಾರಾಮ್, ಶ್ರೀರಾಮ್, ಸರೋಜ ಭಂಡಾರಿ, ಸುಧಾ ಉದಯ್, ಅರವಿಂದ ರಾಯ್ಕರ್, ಪ್ರಮುಖರಾದ ವಾಸಂತಿ ರಮೇಶ್, ಮಂಜುನಾಥ್ ಪಿ. ಸತೀಶ್ ಕೆ., ನಾಗರಾಜ ವಾಟೆಮಕ್ಕಿ ಇನ್ನಿತರರು ಹಾಜರಿದ್ದರು