ಶಿವಮೊಗ್ಗ,ಆ.೮: ರಾಷ್ಟ್ರೀಯ ಶಿಕ್ಷಣ, ಸಮಿತಿ ಕುವೆಂಪು ವಿಶ್ವವಿದ್ಯಾನಿಲಯ, ಕರ್ನಾಟಕ ಗಾಂಧಿ ಸ್ಮಾರಕ ನಿಧಿ, ಎನ್‌ಎಸ್‌ಎಸ್, ಆಚರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜು ಇವರ ಸಂಯುಕ್ತಾಶ್ರಯದಲ್ಲಿ ಎನ್‌ಇಎಸ್ ಕಾಲೇಜಿನ ಚಂದನ ಸಭಾಂಗಣದಲ್ಲಿ ರಾಜ್ಯ ಮಟ್ಟದ ಗಾಂಧಿ ತತ್ವ ಪ್ರಣೀತ ಯುವಜನ ಶಿಬಿರವನ್ನು ಆ.೯ರಿಂದ ಆ.೧೫ರವರೆಗೆ ಆಯೋಜಿಸಲಾಗಿದೆ ಎಂದು
ಪ್ರಾಂಶುಪಾಲೆ ಪ್ರೊ.ಮಮತಾ ಪಿ.ಆರ್. ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಗಾಂಧೀಜಿಯವರ ಆದರ್ಶ ಮತ್ತು ತತ್ವಗಳನ್ನು ಯುವಜನತೆಗೆ ತಿಳಿಸುವ ನಿಟ್ಟಿನಲ್ಲಿ ಈ ಶಿಬಿರವನ್ನು ಆಯೋಜಿಸಲಾಗಿದೆ. ಶಿಬಿರದ ಮೂಲಕ ಗಾಂಧಿ ತತ್ವಗಳ ಅರಿವನ್ನು ವಿಸ್ತರಿಸಲಾಗುವುದು ಎಂದರು.
ಆ.೯ರ ಸಂಜೆ ೫.೩೦ಕ್ಕೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಮಂಜುನಾಥ್ ನಾಯಕ್ ಶಿಬಿರ ಉದ್ಘಾಟಿಸುವರು. ಕರ್ನಾಟಕ ಗಾಂಧಿ ಸ್ಮಾರಕ ನಿಧಿಯ ಅಧ್ಯಕ್ಷ ನಾಡೋಜ ಡಾ.ವೊಡೇ ಪಿ.ಕೃಷ್ಣ ಅಧ್ಯಕ್ಷತೆ ವಹಿಸಲಿದ್ದು, ರಾಷ್ಟ್ರೀಯ ಸೇವಾ ಯೋಜನೆಯ ರಾಜ್ಯ ಅಧಿಕಾರಿ ಡಾ.ಪ್ರತಾಪ ಲಿಂಗಯ್ಯ, ಎನ್.ಇ.ಎಸ್.ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಟಿ.ಎಸ್.ನಾರಾಯಣರಾವ್, ಕುವೆಂಪು ವಿವಿ, ಎನ್‌ಎಸ್‌ಎಸ್ ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ. ಶುಭಮರವಂತೆ ಎಟಿಎನ್‌ಸಿಸಿ ಕಾಲೇಜಿನ ಸಂಚಾಲಕ ಪ್ರೊ.ಕೆ.ಎಂ.ನಾಗರಾಜ್ ಮುಂತಾದವರು ಉಪಸ್ಥಿತರಿರುವರು ಎಂದರು.
ಅ.೧೦ರಂದು ಬೆಳಿಗ್ಗೆ ೧೧.೩೦ಕ್ಕೆ ಆಧುನಿಕ ತಂತ್ರಜ್ಞಾನದ ಸಾಧಕ ಬಾಧಕಗಳ ಕುರಿತು ವೈ.ಎನ್.ಮಧು, ಗಾಂಧೀಜಿ, ರಾಜರಾಮ್ ಮೋಹನ್‌ರಾಯ್ ಹಾಗೂ ಅಂಬೇಡ್ಕರ್ ಕುರಿತು ಮಾಜಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಮಾತನಾಡುವರು. ಅ.೧೧ರಂದು ಪರಿಸರ ಪ್ರಜ್ಞೆ ಮತ್ತು ಸರಳ ಜೀವನ ಕುರಿತು ಮಮತಾ ರೈ ಮಾತನಾಡಿದರೆ, ರಾಷ್ಟ್ರೀಯ ಸೇವಾ ಯೋಜನೆ ಮತ್ತು ಯುವಜನತೆ ಕುರಿತು ಪ್ರೊ. ಜೆ.ಎಲ್. ಪದ್ಮನಾಭ್ ಮಾತನಾಡುವರು ಎಂದರು.
ಅ.೧೨ರಂದು ಗಾಂಧಿ ನಮಗೆ ಏಕೆ ಬೇಕು? ಎಂಬ ವಿಷಯದ ಬಗ್ಗೆ ಸಾಹಿತಿ ಲಕ್ಷ್ಮೀಶ ತೋಳ್ಪಾಡಿ ಹಾಗೂ ಗಾಂಧಿ ಇಂದಿನ ಯುವ ಪೀಳಿಗೆಗೆ ಪ್ರಸ್ತುತವೇ ವಿಷಯ ಕುರಿತು ಎಸ್.ಪಿ.ವಾಸುದೇವ ಮಾತನಾಡುವರು. ಅ.೧೩ರಂದು ಸ್ವರಾಜ್ಯ ಕಲ್ಪನೆ ಮತ್ತು ಪ್ರಯೋಗಗಳ ಕುರಿತು ಸುಮನಸ ಕೌಲಗಿ ಮಾತನಾಡಿದರೆ, ಸ್ವ ಅನ್ವೇಷಣೆ ವ್ಯಕ್ತಿತ್ವ ವಿಕಸನ ಮತ್ತು ಗಾಂಧೀ ಕುರಿತು ಡಾ. ಚಿಂದಾನಂದ ಎನ್.ಕೆ. ಮಾತನಾಡುವರು ಎಂದರು.
ಅ.೧೪ರಂದು ಅಸ್ಪೃಶ್ಯತೆ ಕುರಿತು ಗಾಂಧಿ ಹಾಗೂ ಅಂಬೇಡ್ಕರ್ ಸಂವಾದದ ಬಗ್ಗೆ ಪ್ರಾಧ್ಯಾಪಕ ಪ್ರೊ. ನಿತ್ಯಾನಂದ ಬಿ.ಶೆಟ್ಟಿ ಮಾತನಾಡುವರು. ಇಂದು ಗಾಂಧೀಜಿ ಪ್ರಸ್ತುತಗೊಳಿಸುವುದು ಹೇಗೆ ? ಕುರಿತು ಪ್ರೊ.ರಾಮಚಂದ್ರದತ್ತ ಮಾತನಾಡುವರು. ಅ.೧೫ರಂದು ಬೆಳಿಗ್ಗೆ ೧೧ಕ್ಕೆ ಸಮಾರೋಪ ಸಮಾರಂಭ ಆಯೋಜಿಸಲಾಗಿದ್ದು, ಶಾಸಕರಾದ ಎಸ್.ಎನ್. ಚನ್ನಬಸಪ್ಪ, ಡಿ.ಎಸ್.ಅರುಣ್, ಕವಯಿತ್ರಿ ಸವಿತಾ ನಾಗಭೂಷಣ್ ಮುಂತಾದವರು ಭಾಗವಹಿಸುವರು ಎಂದರು.
ಡಾ.ಶುಭಮರವಂತೆ ಮಾತನಾಡಿ, ಇತ್ತೀಚನ ವರ್ಷಗಳಲ್ಲಿ ಗಾಂಧೀಜಿಯವರ ಕುರಿತಂತೆ ಅಸಮಧಾನದ ಹೊಗೆ ಮತ್ತು ಹಿನ್ನಡೆಯಾಗುತ್ತಿದೆ. ಪಠ್ಯಗಳಲ್ಲಿ ಅವರ ವಿಷಯವನ್ನೇ ತೆಗೆಯುವ ಹುನ್ನಾರ ಕೂಡ ನಡೆಯುತ್ತಿದೆ. ಪ್ರಸ್ತುತ ಹಣದಾಹ, ಸ್ವಾರ್ಥ, ಹಿಂಸೆ, ಭ್ರಷ್ಟಚಾರಗಳೇ ತುಂಬಿ ಹೋಗಿದೆ. ಯುವಕರಿಗೆ ಗಾಂಧೀಜಿಯ ಆದರ್ಶವನ್ನು ತಲುಪಿಸಬೇಕಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರೊ. ಕೆ.ಎಂ.ನಾಗರಾಜ್ ಉಪ್ಥಿತರಿದ್ದರು.