ಶಿವಮೊಗ್ಗ: ರೈತ ಮತ್ತು ಕಾರ್ಮಿಕ ವಿರೋಧಿಯಾಗಿರುವ ಕಾಯ್ದೆಗಳನ್ನು ಕೇಂದ್ರ ಸರ್ಕಾರ ಹಿಂಪಡೆಯಬೇಕೆಂದು ಆಗ್ರಹಿಸಿ ಜ.26ರಂದು ಬೆಂಗಳೂರಿನಲ್ಲಿ ಬೃಹತ್ ಗಣರಾಜ್ಯೋತ್ಸವ ಪೆರೇಡ್ ನಡೆಸಲು ತೀರ್ಮಾನಿಸಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಗೌರವಾಧ್ಯಕ್ಷ ಹೆಚ್.ಆರ್. ಬಸವರಾಜಪ್ಪ ತಿಳಿಸಿದರು.
ಇಂದು ಸುದ್ಧಿಗೋಷ್ಠಿ ನಡೆಸಿದ ಅವರು, ದೇಶದ್ರೋಹಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯ ಗಡಿಯಲ್ಲಿ ರೈತರು ಕಳೆದ 58 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದು, 500ಕ್ಕೂ ರೈತ ಸಂಘಟನೆಗಳು ಚಾರಿತ್ರಿಕ ಹೋರಾಟವನ್ನು ನಡೆಸುತ್ತಿವೆ. ಈ ಹೋರಾಟವನ್ನು ಬೆಂಬಲಿಸಿ ಬೆಂಗಳೂರಿನಲ್ಲಿ ಪೆರೇಡ್ ನಡೆಸಲು ತೀರ್ಮಾನಿಸಲಾಗಿದೆ. ಈ ಹೋರಾಟವು ಎರಡನೇ ಸ್ವಾತಂತ್ರ್ಯ ಚಳವಳಿಯಾಗಿದ್ದು, ಭರತ ಖಂಡದಲ್ಲಿ ಸಾಕ್ಷಿಯಾಗಲಿದೆ. ಬೆಂಗಳೂರಿನಲ್ಲಿ ನಡೆಯಲಿರುವ ರೈತರ ಗಣರಾಜ್ಯೋತ್ಸವ ಪೆರೇಡ್‌ನಲ್ಲಿ ರಾಜ್ಯದ ಎಲ್ಲಾ ರೈತ ಸಂಘಗಳು, ದಲಿತ ಸಂಘರ್ಷ ಸಮಿತಿಗಳು, ಕರ್ನಾಟಕ ಜನಶಕ್ತಿ ವೇದಿಕೆ, ಪ್ರಗತಿಪರ ಸಂಘಟನೆಗಳು, ಬರಹಗಾರರು, ಸಾಹಿತಿಗಳು ಬೆಂಬಲಿಸಿ ಭಾಗವಹಿಸಲಿದ್ದಾರೆ ಎಂದರು.
ಸರ್ಕಾರಿ ಕಾರ್ಯಕ್ರಮ ಮುಗಿದ ನಂತರ ಬೆಂಗಳೂರಿನ ರಾಜಮಾರ್ಗಗಳಲ್ಲಿ ರೈತರು ಟ್ರ್ಯಾಕ್ಟರ್, ಎತ್ತಿನ ಗಾಡಿ ಮತ್ತು ವಾಹನಗಳ ಮೂಲಕ ಪೆರೇಡ್ ನಡೆಸಲಿದ್ದು, ವಾಹನಗಳ ಮೇಲೆ ರಾಷ್ಟ್ರ ಧ್ವಜ, ರೈತ ಸಂಘಟನೆಗಳ ಮತ್ತು ಪ್ರಗತಿಪರ ಸಂಘಟನೆಗಳ ಧ್ವಜಗಳೊಂದಿಗೆ ಮೆರವಣಿಗೆ ನಡೆಸಲಾಗುವುದು. ಸುಮಾರು 25-30 ಸಾವಿರ ಸಂಖ್ಯೆಯಲ್ಲಿ ಜನರು ಭಾಗವಹಿಸಲಿದ್ದು, ಶಿವಮೊಗ್ಗ ಜಿಲ್ಲೆಯಿಂದ ನೂರಾರು ವಾಹನಗಳಲ್ಲಿ 1000 ಜನರು ಚಳವಳಿಯಲ್ಲಿ ಭಾಗವಹಿಸಲಿದ್ದಾರೆ. ಕಾಯ್ದೆಗಳು ಸಂಪೂರ್ಣವಾಗಿ ರದ್ದಾಗುವವರೆಗೂ ಹೋರಾಟ ಮುಂದುವರೆಯಲಿದೆ ಎಂದು ಬಸವರಾಜಪ್ಪ ತಿಳಿಸಿದರು.
ಕರ್ನಾಟಕ ಜನಶಕ್ತಿಯ ರಾಜ್ಯ ಕಾರ್ಯದರ್ಶಿ ಕೆ.ಎಲ್.ಅಶೋಕ್ ಮಾತನಾಡಿ, ದೆಹಲಿಯ ಗಡಿಯಲ್ಲಿ ನಡೆಯುತ್ತಿರುವ ರೈತರ ಚಳವಳಿಯಲ್ಲಿ ಇಲ್ಲಿಯವರೆಗೆ 138 ರೈತರು ಹುತಾತ್ಮರಾಗಿದ್ದಾರೆ ಎಂದು ರೈತ ಸಂಘಟನೆಗಳ ವೇದಿಕೆಯಾಗಿರುವ ಸಂಯುಕ್ತ ಕಿಸಾನ್ ಮೋರ್ಚಾ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದೆ. ಇಷ್ಟು ರೈತರು ಹುತಾತ್ಮರಾಗಿದ್ದರೂ ಸಹ ಕೇಂದ್ರ ಸರ್ಕಾರ ದೇಶದ್ರೋಹಿ ಕಾಯ್ದೆಗಳನ್ನು ಹಿಂಪಡೆಯದೆ ಹಠಮಾರಿ ಧೋರನೆ ಅನುಸರಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜ.26ರಂದು ತುಮಕೂರು ರಸ್ತೆ, ನೈಸ್ ಜಂಕ್ಷನ್‌ನಿಂದ, ಕೆ.ಆರ್.ಪುರಂ, ಕೇಂಗೇರಿ ಹಾಗೂ ಸಂಗೊಳ್ಳಿ ರೈಲು ನಿಲ್ದಾಣದಿಂದ ಫ್ರೀಡಂ ಪಾರ್ಕ್‌ವರೆಗೂ ಜಾಥಾ ನಡೆಯಲಿದೆ ಎಂದು ತಿಳಿಸಿದರು.
ಚಿಂತಕ ಪ್ರೊ. ರಾಜೇಂದ್ರ ಚೆನ್ನಿ, ಮಾತನಾಡಿ, ನ್ಯಾಯ ಕೇಳಲು ನ್ಯಾಯಾಲಯಕ್ಕೆ ಹೋಗದಂತಹ ಕಾನೂನುಗಳನ್ನು ಕೇಂದ್ರ ಸರ್ಕರ ಜಾರಿಗೆ ತರುತ್ತಿದ್ದು, ಈ ಕಾನೂನುಗಳು ಶ್ರೀಮಂತರ ಮತ್ತು ಕಾರ್ಪೋರೇಟ್ ಕಂಪನಿಗಳಿಗೆ ಅನುಕೂಲ ಮಾಡಿಕೊಡುವಂತಿವೆ. ರೈತರು ನಡೆಸುತ್ತಿರುವ ಹೋರಾಟಕ್ಕೆ ಮನುಷ್ಯರಾದವರು ಬೆಂಬಲಿಸಬೇಕೆಂದು ಮನವಿ ಮಾಡಿಕೊಂಡರು.
ಸುದ್ಧಿಗೋಷ್ಠಿಯಲ್ಲಿ ಡಿ ಎಸ್‌ಎಸ್ ಜಿಲ್ಲಾ ಪ್ರಧಾನ ಸಂಚಾಲಕ ಟಿ.ಹೆಚ್.ಹಾಲೇಶಪ್ಪ, ಎಸ್.ಶಿವಮೂರ್ತಿ, ಪ್ರಗತಿಪರ ಹೋರಾಟಗಾರರಾದ ಟಿ. ಅನಿಲ್‌ಕುಮಾರ್, ಡಿ. ಮಂಜುನಾಥ್, ಡಿ.ಎಸ್. ಶಿವಕುಮಾರ್ ಉಪಸ್ಥಿತರಿದ್ದರು.

By admin

ನಿಮ್ಮದೊಂದು ಉತ್ತರ

You missed

error: Content is protected !!