ಶಿವಮೊಗ್ಗ ಜು.19
      ನೀರು ಸಂಗ್ರಹಿಸುವ ಪರಿಕರಗಳನ್ನು ಪ್ರತಿ ಶುಕ್ರವಾದಂದು ಖಾಲಿ ಮಾಡಿ, ಸ್ವಚ್ಚಗೊಳಿಸಿ, ಒಣಗಿಸಿ ಹೊಸದಾಗಿ ನೀರು ತುಂಬಿಸಬೇಕು ಮತ್ತು ಮಳೆ ನೀರು ಸಂಗ್ರಹವಾಗುವ ಘನತ್ಯಾಜ್ಯ ವಸ್ತುಗಳ ವಿಲೇವಾರಿ ಮಾಡುವ ಮೂಲಕ ಡೆಂಗಿ ನಿಯಂತ್ರಣದಲ್ಲಿ ಕೈಜೋಡಿಸಬೇಕೆಂದು ಜಿ.ಪಂ ಸಿಇಓ ಎನ್.ಹೇಮಂತ್ ಸಾರ್ವಜನಿಕರಲ್ಲಿ ಮನವಿ ಮಾಡಿದರು.


      ಡೆಂಗ್ಯು ಜ್ವರ ನಿಯಂತ್ರಣಕ್ಕಾಗಿ ಸರ್ಕಾರ ಪ್ರತಿ ಶುಕ್ರವಾರವನ್ನು ಡೆಂಗ್ಯು ಹರಡುವ ಈಡಿಸ್ ಲಾರ್ವಾ ಉತ್ಪತ್ತಿ ತಾಣಗಳನ್ನು ನಾಶ ಪಡಿಸುವ ಚಟುವಟಿಕೆಯ ದಿನವಾಗಿ ಅನುಷ್ಟಾನಗೊಳಿಸಲು ಸೂಚಿಸಿದ್ದು ಈ ಹಿನ್ನೆಲೆಯಲ್ಲಿ ಜು.19 ರ ಶುಕ್ರವಾರದಂದು ಜಿ.ಪಂ ಸಿಇಓ ರವರು ಆಜಾದ್ ನಗರ ಮತ್ತು ಸುತ್ತಮುತ್ತಲ ಪ್ರದೇಶಗಳ ಮನೆಗಳಿಗೆ ತೆರಳಿ ಸಾರ್ವಜನಿಕರಲ್ಲಿ ಈ ಕುರಿತು ಅರಿವು ಮೂಡಿಸಿದರು.


       ಮುಂದಿನ ದಿನಗಳಲ್ಲಿ ರೋಗ ಪ್ರಸರಣ ಇನ್ನೂ ಹೆಚ್ಚುವ ಸಾಧ್ಯತೆ ಇದೆ. ಆರೋಗ್ಯ ಇಲಾಖೆಯಿಂದ ಡೆಂಗ್ಯು ಜ್ವರ ನಿಯಂತ್ರಣ ಕ್ರಮಗಳನ್ನು ಅನುಸರಿಸಲಾಗುತ್ತಿದೆ. ಮನೆ ಮನೆಗೆ ಆಶಾ, ಅಂಗನವಾಡಿ, ಆರೋಗ್ಯ ಕಾಯಕರ್ತರು ತೆರಳಿ ಲಾರ್ವಾ ಸಮೀಕ್ಷೆ ಹಾಗೂ ಅರಿವು ಮೂಡಿಸುವ ಕಾರ್ಯ ಮಾಡುತ್ತಿದ್ದಾರೆ. ಇಲಾಖೆ ಜೊತೆ ಸಾರ್ವಜನಿಕರು ಪೂರ್ಣ ಸಹಕಾರ ನೀಡಿದರೆ ನಿಯಂತ್ರಣ ಪರಿಣಾಮಕಾರಿ ಆಗುತ್ತದೆ.


     ಆದ್ದರಿಂದ ಸಾರ್ವಜನಿಕರು ತಮ್ಮ ಮನೆಗಳು ಹಾಗೂ ಸಿಬ್ಬಂದಿ ವರ್ಗದವರು ಕಚೇರಿಗಳು, ಶಾಲಾ, ಕಾಲೇಜುಗಳಲ್ಲಿ ನೀರು ತುಂಬುವ ಪರಿಕರಗಳನ್ನು ಸ್ವಚ್ಚವಾಗಿ ತೊಳೆದು ಒಣಗಿಸಿ, ಪುನಃ ಭರ್ತಿ ಮಾಡಬೇಕು. ಅವಶ್ಯವಿರುವ ನೀರಿಗೆ ಮುಚ್ಚಬೇಕು. ಈಡಿಸ್ ಸೊಳ್ಳೆ ಶುದ್ದ ನೀರಿನಲ್ಲೇ ಉತ್ಪತ್ತಿಯಾಗುವ ಕಾರಣ ಈ ಎಲ್ಲ ಕ್ರಮಗಳನ್ನು ವಹಿಸಬೇಕು ಎಂದು ಸಾರ್ವಜನಿಕರಿಗೆ ತಿಳಿಸಿದರು.


     ಡಿಹೆಚ್‍ಓ ಡಾ.ನಟರಾಜ್ ಮಾತನಾಡಿ ಪ್ರತಿ ಶುಕ್ರವಾರ ಈಡಿಸ್ ಸೊಳ್ಳೆ ನಿರ್ಮೂಲನಾ ದಿನವನ್ನಾಗಿ ಆಚರಿಸುವ ಮೂಲಕ ಜನರಲ್ಲಿ ಇದೊಂದು ದೈನಂದಿನ ಅಭ್ಯಾಸದಂತಾಗಿ ವರ್ತನೆಯಲ್ಲಿ ಶಾಶ್ವತ ಬದಲಾವಣೆ ತರುವ ಉದ್ದೇಶ ಹೊಂದಲಾಗಿದೆ. ಪ್ರತಿಯೊಬ್ಬರೂ ಇಲಾಖೆಯೊಂದಿಗೆ ಸಹಕರಿಸಬೇಕು. ತಮ್ಮ ಮನೆ ಸುತ್ತಮುತ್ತ ನೀರು ಸಂಗ್ರಹವಾಗದಂತೆ ಎಚ್ಚರಿಕೆ ವಹಿಸಬೇಕು. ತೊಟ್ಟಿ, ಡ್ರಂ ಇತರೆ ಸಂಗ್ರಹ ಪರಿಕರಗಳನ್ನು ವಾರಕ್ಕೊಮ್ಮೆ ಖಾಲಿ ಮಾಡಿ ಉಜ್ಜಿ ತೊಳೆದು ಒಣಗಿಸಿ ಮತ್ತೆ ಭರ್ತಿ ಮಾಡಬೇಕು. ಟೈರು, ಎಳೆನೀರಿನ ಚಿಪ್ಪು, ಒಡೆದ ಬಾಟಲಿ ಇತ್ಯಾದಿಗಳಲ್ಲಿ ಮಳೆ ನೀರು ಸಂಗ್ರಹವಾಗದಂತೆ ವಿಲೇವಾರಿ ಮಾಡಬೇಕು. ಸೊಳ್ಳೆ ನಿರೋಧಕಗಳು ಮತ್ತು ಸೊಳ್ಳೆ ಪರದೆಯನ್ನು ಬಳಸಬೇಕು ಎಂದು ತಿಳಿಸಿದರು.


     ಇದೇ ವೇಳೆ ಆರೋಗ್ಯ ಇಲಾಖೆ ವೈದ್ಯರು, ಆಶಾ, ಅಂಗನವಾಡಿ ಮತ್ತು ಆರೋಗ್ಯ ಕಾರ್ಯಕರ್ತರು ಮನೆಗಳಿಗೆ ತೆರಳಿ ಲಾರ್ವಾ ಉತ್ಪತ್ತಿ ತಾಣಗಳನ್ನು ಗುರುತಿಸಿ, ನಾಶಪಡಿಸಿ, ಅರಿವು ಮೂಡಿಸಿದರು.    
     ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಗುಡುದಪ್ಪ ಕಸಬಿ, ಟಿಹೆಚ್‍ಓ ಡಾ.ಚಂದ್ರಶೇಖರ್, ಡಾ.ಶ್ರೀಧರ್, ಆಶಾ, ಅಂಗನವಾಡಿ, ಆರೋಗ್ಯ ಕಾರ್ಯಕರ್ತರು, ಸಿಬ್ಬಂದಿಗಳು ಹಾಜರಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!