**
ಶಿವಮೊಗ್ಗ, ಮಾರ್ಚ್ 10
ದಿವ್ಯಾಂಗರು ಮತ್ತು ಹಿರಿಯ ನಾಗರೀಕರು ಸ್ವಾಭಿಮಾನದಿಂದ ಬದುಕಲು ಅನುವಾಗುವಂತೆ ಕೇಂದ್ರ ಸರ್ಕಾರ ವಿವಿಧ ಯೋಜನೆಗಳ ಮೂಲಕ ಸೌಲಭ್ಯಗಳನ್ನು ನೀಡುತ್ತಿದೆ ಎಂದು ಸಂಸದರಾದ ಬಿ.ವೈ.ರಾಘವೇಂದ್ರ ತಿಳಿಸಿದರು.
ಕೇಂದ್ರ ಸರ್ಕಾರದ ಅಡಿಪ್ ಮತ್ತು ವಯೋಶ್ರೀ ಯೋಜನೆಯಡಿ ಜಿಲ್ಲೆಯ ವಿಕಲಚೇತನರಿಗೆ ಹಾಗೂ ಹಿರಿಯ ನಾಗರೀಕರಿಗೆ ಅವಶ್ಯಕ ಸಾಧನ ಸಲಕರಣೆಗಳನ್ನು ವಿತರಿಸಲು ಇಂದು ನಗರ ಸುವರ್ಣ ಸಾಂಸ್ಕøತಿಕ ಭವನದ ಆವರಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಈ ಜೀವನದ ಸವಾಲುಗಳನ್ನು ಎದುರಿಸಲು ದೇವರು ದಿವ್ಯಾಂಗರಿಗೆ ದುಪ್ಪಟ್ಟು ಶಕ್ತಿ ನೀಡಿರುತ್ತಾನೆ. ಜೊತೆಗೆ ಕೇಂದ್ರ ಸರ್ಕಾರ ಕೂಡ ಅವರು ಸ್ವಾಭಿಮಾನದಿಂದ ಬದುಕಲು ಅವಶ್ಯಕವಾದ ಸೌಲಭ್ಯಗಳನ್ನು ವಿತರಿಸುತ್ತಿದೆ ಎಂದರು.
ಅಲಿಂಕೋ ಸಂಸ್ಥೆಯವರು ಕೇಂದ್ರ ಸರ್ಕಾರದ ಅಡಿಪ್ ಯೋಜನೆಯಡಿ ಜಿಲ್ಲೆಯಲ್ಲಿ ಕೇವಲ ಒಂದು ವಾರದಲ್ಲಿ ತಾಲ್ಲೂಕುವಾರು ಸರ್ವೇ ಕಾರ್ಯ ನಡೆಸಿ ಫಲಾನುಭವಿಗಳ ಪಟ್ಟಿ ಸಿದ್ದಪಡಿಸಿರುವುದು ಅಭಿನಂದನೀಯ. ಇದರ ಹಿಂದೆ ಕೆಲಸ ಮಾಡಿದ ಎಲ್ಲರಿಗೂ ವಂದನೆಗಳು. ಸುಮಾರು 1020 ದಿವ್ಯಾಂಗರಿಗೆ ರೂ.80 ಲಕ್ಷ ಮೊತ್ತದ ಸಾಧನ ಸಲಕರಣೆಗಳನ್ನು ವಿತರಿಸಲಾಗುತ್ತಿದೆ.
ಟ್ರೈಸೈಕಲ್, ವೀಲ್‍ಚೇರ್, ವಾಕಿಂಗ್ ಸ್ಟಿಕ್, ಸಿಪಿ ಚೇರ್, ಸ್ಮಾರ್ಟ್ ಚೇರ್, ಬ್ರೇಸ್, ಇಯರಿಂಗ್ ಏಡ್ ಸೇರಿದಂತೆ ಸುಮಾರು 500 ಫಲಾನುಭವಿಗಳಿಗೆ ವಿವಿಧ ರೀತಿಯ ಸಾಧನ-ಸಲಕರಣೆಗಳನ್ನು ನೀಡಲಾಗುತ್ತಿದೆ. ಅಡಿಪ್ ಯೋಜನೆಯಡಿ ವಿಕಲಚೇತನರಿಗೆ 243 ಸಾಧನಗಳು ಮತ್ತು ರಾಷ್ಟ್ರೀಯ ವಯೋಶ್ರೀ ಯೋಜನೆಯಡಿ ಹಿರಿಯ ನಾಗರೀಕರಿಗೆ 198 ಸಾಧನಗಳು ಹಾಗೂ ಸಂಸದರ ಪ್ರದೇಶಾಭಿವೃದ್ದಿ ಅನುದಾನದಲ್ಲಿ 32 ಯಂತ್ರಚಾಲಿತ ದ್ವಿಚಕ್ರ ವಾಹನಗಳನ್ನು ಇಂದು ವಿತರಿಸಲಾಗುತ್ತಿದೆ.
ಬಡವರು, ರೈತರು, ದಿವ್ಯಾಂಗರು, ಹಿರಿಯರು, ಯುವಜನತೆ ಸೇರಿದಂತೆ ಎಲ್ಲರೂ ಸ್ವಾಭಿಮಾನದಿಂದ ಬದುಕಲು ಕೇಂದ್ರ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ವಿಕಲಚೇತನರಿಗೆ ಯುಡಿಐಡಿ ಕಾರ್ಡ್, ನಿರಾಮಯ ಆರೋಗ್ಯ ಯೋಜನೆ, ವಿಕಲಚೇತನ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ, ಸಾಮಾಜಿಕ ಭದ್ರತೆಯ ಭತ್ಯೆ, ವಿಕಲಚೇತನರಿಗೆ 5 ಲಕ್ಷದವರೆಗೆ ವೈದ್ಯಕೀಯ ವೆಚ್ಚ ಭರಿಸುವುದು ಸೇರಿದಂತೆ ಹಲವಾರು ಯೋಜನೆಗಳನ್ನು ನೀಡಿದೆ. ಹಾಗೂ ವಿಕಲಚೇತನರು ಮತ್ತು ಹಿರಿಯ ನಾಗರೀಕರ ಬದುಕನ್ನು ಸರಾಗಗೊಳಿಸಲು ನಾವು ನಿಮ್ಮ ಜೊತೆಗಿರುತ್ತೇವೆ ಎಂದು ಇದೇ ಸಂದರ್ಭದಲ್ಲಿ ಹೇಳಿದರು.
ವಿಧಾನ ಪರಿಷತ್ ಶಾಸಕರಾದ ರುದ್ರೇಗೌಡರು ಮಾತನಾಡಿ, ಇದೊಂದು ವಿಶೇಷ ಕಾರ್ಯಕ್ರಮವಾಗಿದ್ದು, ಕೇಂದ್ರ ಸರ್ಕಾರ 26 ರೀತಿಯ ದಿವ್ಯಾಂಗರನ್ನು ಗುರುತಿಸಿ ಅವರ ಜೀವನ ಸರಾಗಗೊಳಿಸಲು ಸಾಧನ ಸಲಕರಣೆಗಳನ್ನು ವಿತರಿಸುತ್ತಿದೆ. ದಿವ್ಯಾಂಗರಲ್ಲಿ ಅದ್ಭುತವಾದ ಶಕ್ತಿ ಇರುತ್ತದೆ. ಅದನ್ನು ಗುರುತಿಸಿ ಪ್ರೋತ್ಸಾಹಿಸಬೇಕು ಎಂದರು.
ಶಾಸಕರಾದ ಎಸ್.ಎನ್.ಚನ್ನಬಸಪ್ಪ ಮಾತನಾಡಿ, ಸಂಸದರ ಅನುದಾನದಲ್ಲಿ ಇಂದು ವಿಕಲಚೇತನರಿಗೆ ಟ್ರೈಸೈಕಲ್, ಹಾಗೂ ವಿವಿಧ ರೀತಿಯ ಸಾಧನ ಸಲಕರಣೆಗಳನ್ನು ವಿತರಿಸಲಾಗುತ್ತಿದೆ. ಸಂಸದರು ಸದಾ ಕಷ್ಟದಲ್ಲಿರುವವರ ನೋವಿಗೆ ಸ್ಪಂದಿಸುತ್ತಾ ಬಂದಿದ್ದಾರೆ. ಸರ್ಕಾರ ವಿವಿಧ ಯೋಜನೆಗಳ ಮೂಲಕ ವಿಕಲಚೇತನರು ಮತ್ತು ಹಿರಿಯ ನಾಗರೀಕರಿಗೆ ಸಹಕಾರಿಯಾಗಿದೆ ಎಂದರು.
ಅಲಿಂಕೊ ಸಂಸ್ಥೆಯ ಮುಖ್ಯಸ್ಥ ಶಿವಕುಮಾರ್ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಸುಮಾರು 500 ಆಯ್ದ ಫಲಾನುಭವಿಗಳಿಗೆ ವಿವಿಧ ಸಾಧನ ಸಲಕರಣೆಗಳನ್ನು ವಿತರಿಸಲಾಯಿತು. ಈ ವೇಳೆ ಪಾಲಿಕೆ ಮಾಜಿ ಸದಸ್ಯರು, ಜನಪ್ರತಿನಿಧಿಗಳು, ಅಂಗವಿಕಲರ ಕಲ್ಯಾಣಾಧಿಕಾರಿ ಚಂದ್ರಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪ ನಿರ್ದೇಶಕ ಬಿ.ಕೃಷ್ಣಪ್ಪ ಇತರರು ಹಾಜರಿದ್ದರು.