ಶಂಕರಘಟ್ಟ, ಮಾ. 04: ಕುವೆಂಪು ವಿಶ್ವವಿದ್ಯಾಲಯದ ಆಡಳಿತ ಕುಲಸಚಿವರಾಗಿ ನೇಮಕಗೊಂಡಿದ್ದ ಎ. ಎಲ್. ಮಂಜುನಾಥ್ ಅವರು ಸೋಮವಾರ ಅಧಿಕಾರ ಸ್ವೀಕರಿಸಿದ್ದಾರೆ.

ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ ಕುವೆಂಪು ವಿವಿ ಕುಲಸಚಿವರನ್ನು ವರ್ಗಾಯಿಸಿ ಹೊಸ ಕುಲಸಚಿವರನ್ನು ನಿಯುಕ್ತಿಗೊಳಿಸಿ ಫೆ. 28ರಂದು ಸರ್ಕಾರ ಆದೇಶ ಹೊರಡಿಸಿತ್ತು. ಸೋಮವಾರ ಬೆಳಿಗ್ಗೆ ಕೆಎಎಸ್ ಸೂಪರ್‌ ಟೈಮ್ ಶ್ರೇಣಿಯ ಅಧಿಕಾರಿ ಎ.‌ ಎಲ್. ಮಂಜುನಾಥ್ ಕರ್ತವ್ಯ ಆರಂಭಿಸಿದ್ದಾರೆ.

ಮಂಜುನಾಥ್ ಅವರು ಬೆಂಗಳೂರು ವಿಶ್ವವಿದ್ಯಾಲಯದಿಂದ‌ ಎಂ.ಕಾಂ ಪದವಿ ಪಡೆದಿದ್ದು, ಸುಮಾರು 21 ವರ್ಷಗಳಿಗೂ ಹೆಚ್ಚು ಅವಧಿ ಸೇವೆ ಸಲ್ಲಿಸಿದ್ದಾರೆ. ಮೆಟ್ರೋ, ನೈಸ್ ಯೋಜನೆ, ಕರ್ನಾಟಕ ರಾಜ್ಯ ಹೆದ್ದಾರಿ ಪ್ರಾಧಿಕಾರ, ಭೂಸ್ವಾಧೀನ ಪ್ರಾಧಿಕಾರದಲ್ಲಿ ಕಾರ್ಯನಿರ್ವಹಿಸಿರುವ ಇವರು, ತಹಸಿಲ್ದಾರ್ ಆಗಿ, ಹೆಚ್ಚುವರಿ ಆಯುಕ್ತರಾಗಿ, ವಿಶೇಷ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ.

ಈ ಸಂದರ್ಭದಲ್ಲಿ ವಿವಿಯ ಕುಲಪತಿ ಪ್ರೊ. ಎಸ್. ವಿ. ಕೃಷ್ಣಮೂರ್ತಿ, ಪರೀಕ್ಷಾಂಗ ಕುಲಸಚಿವ ಪ್ರೊ. ಎಸ್.‌ ಎಂ. ಗೋಪಿನಾಥ್, ಡಾ. ಕೆ. ಆರ್. ಮಂಜುನಾಥ್ ಸೇರಿದಂತೆ ವಿವಿಧ ಅಧಿಕಾರಿಗಳು ಹಾಜರಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!