ಸುಮಾರು 2000 ವರ್ಷಗಳ ಪ್ರಾಚೀನ ಗುರು ಪರಂಪರೆಯನ್ನು ಹೊಂದಿರುವ ಶ್ರೀಕ್ಷೇತ್ರವು ಮಯೂರ ಗಳ ತಾಣವಾಗಿದ್ದು, “ಮಯೂರ ವನ “ಎಂದು ಕರೆಯುವರು.ಪುರಾಣದಲ್ಲಿ ಉಲ್ಲೇಖವಿರುವಂತೆ ಶ್ರೀ ಆದಿಚುಂಚನಗಿರಿ ಪೀಠವು ಸ್ಥಾಪನೆಯಾದುದು ತ್ರೇತ್ರಾಯುಗದಲ್ಲಿ ಪರಮೇಶ್ವರನೇ ಈ ಪೀಠದ ಸ್ಥಾಪಕನು. ಇಲ್ಲಿ ಸಾಕ್ಷಾತ್ ಪರಶಿವನೇ ಶ್ರೀ ಗಂಗಾಧರೇಶ್ವರನಾಗಿ ನೆಲೆ ನಿಂತಿದ್ದಾನೆ. ನಾಥ ಸಂಪ್ರದಾಯದ ದ್ವಾದಶ ಪೀಟಗಳಲ್ಲಿ ಆದಿ ಪೀಠವೇ ಶ್ರೀ ಆದಿಚುಂಚನಗಿರಿ ಪೀಠ. ಈ ಮಠದ ಗುರುಪರಂಪರೆಯು ದೀರ್ಘವಾದುದು,ಇದುವರೆಗೂ 72 ಧರ್ಮಗುರುಗಳು ಮಠಾಧಿಪತಿಗಳಾಗಿದ್ದಾರೆ. 71ನೇ ಪೀಠಾಧ್ಯಕ್ಷರಾದ ಪದ್ಮಭೂಷಣ ಶ್ರೀ ಶ್ರೀ ಶ್ರೀ ಡಾ. ಬಾಲಗಂಗಾಧರನಾಥ

ಮಹಾಸ್ವಾಮಿಗಳವರು ಸಾಮಾಜಿಕ,ಶೈಕ್ಷಣಿಕ, ಧಾರ್ಮಿಕ, ಸಾಂಸ್ಕೃತಿಕ ಅಲ್ಲದೆ, ಮಕ್ಕಳ ವಸತಿ ಶಾಲೆ, ಅನಾಥಾಶ್ರಮ, ವೃದ್ಧಾಶ್ರಮ, ಮಹಿಳಾ ಸೇವಾಶ್ರಮಗಳನ್ನು ಸ್ಥಾಪಿಸಿ, ನಿರ್ಗತಿಕರ ಬಗ್ಗೆ ವಿಶೇಷ ಮಮತೆಯನ್ನು ತೋರಿದ್ದಾರೆ.
        ಪರಮಪೂಜ್ಯ ಜಗದ್ಗುರು ಶ್ರೀ ಶ್ರೀಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜೀಗಳವರ  ದಿವ್ಯ ಸಾನಿಧ್ಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.


      “ಶ್ರೀ ಕ್ಷೇತ್ರ ಆದಿಚುಂಚನಗಿರಿಯಲ್ಲಿ ಮಾರ್ಚ್ 18 ರಿಂದ ಮಾರ್ಚ್ 26 ರ   ವರೆಗೆ ಜಾತ್ರಾ ಮಹೋತ್ಸವ ಕಾರ್ಯಕ್ರಮಗಳ ವಿವರ”  
ಶ್ರೀಕ್ಷೇತ್ರ ಆದಿಚುಂನಗಿರಿ ಮಹಾಸಂಸ್ಥಾನದಲ್ಲಿ ಮಾರ್ಚ್,18 ರಿಂದ  ಮಾರ್ಚ್ 26ರ ವರೆಗೆ 9 ದಿನಗಳ ಕಾಲ ಜಾತ್ರಾ ಮಹೋತ್ಸವ ಪ್ರಾರಂಭವಾಗಲಿದ್ದು,ಈ ಕಾರ್ಯಕ್ರಮದಲ್ಲಿ ವಿವಿಧ ಪೂಜಾ ಕೈಂಕರ್ಯ ಸೇರಿದಂತೆ ಹಲವು ಧಾರ್ಮಿಕ ಮತ್ತು ಅಧ್ಯಾತ್ಮಿಕ ಕಾರ್ಯಕ್ರಮಗಳು ಜರುಗಲಿವೆ.    


      ಜಾತ್ರಾ ಮಹೋತ್ಸವ ಸುಸೂತ್ರವಾಗಿ ನಡೆಯಲಿ ಎಂಬ ಉದ್ದೇಶದಿಂದ ಮಾರ್ಚ್ 18ರ ಬೆಳಿಗ್ಗೆ ಮಠದ ಪೀಠಾಧ್ಯಕ್ಷರಾದ ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ ಅವರಿಂದ ನಾಂದಿ ಪೂಜೆ ಹಾಗೂ ಧರ್ಮ ಧ್ವಜಾರೋಹಣ ಮಾಡುವ ಮೂಲಕ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಲಾಗುವುದು. ಮಾರ್ಚ್ 19ರ ಬೆಳಿಗ್ಗೆ  10 ಗಂಟೆಗೆ ದೇಶಿ ಕ್ರೀಡೆಗಳು, ಲಗೋರಿ, ರಂಗೋಲಿ ಸ್ಪರ್ಧೆ ಹಾಗೂ ಮ್ಯಾರಥಾನ್ ಪಂದ್ಯಾವಳಿ ಉದ್ಘಾಟನೆ, ರಾತ್ರಿ 6 ಗಂಟೆಗೆ ಸರ್ವಾಲಂಕೃತ ಶ್ರೀ ಚಂದ್ರಮೌಳೇಶ್ವರ ಸ್ವಾಮಿ ಉತ್ಸವ, ಮಾರ್ಚ್ 20 ರಂದು ಬೆಳಿಗ್ಗೆ,10 ಗಂಟೆಗೆ ಕೃಷಿ ಉಪನ್ಯಾಸ ಮಾಲಿಕೆ, ರಾತ್ರಿ 7:00 ಗಂಟೆಗೆ ಮಲ್ಲೇಶ್ವರ ಸ್ವಾಮಿ ಉತ್ಸವ ನಡೆಯಲಿದೆ. ಮಾರ್ಚ್ 21 ರ ಬೆಳಿಗ್ಗೆ 9.30 ಗಂಟೆಗೆ  ಸರಳ ಸಾಮೂಹಿಕ ವಿವಾಹ,ಹಾಗೂ ಹಿರಿಯ ದಂಪತಿಗೆ ಸನ್ಮಾನ ಸಮಾರಂಭ,ಸಂಜೆ 7 ಗಂಟೆಗೆ ಶ್ರೀ ಸಿದ್ದೇಶ್ವರ ಸ್ವಾಮಿ ಉತ್ಸವ ನಡೆಯಲಿದೆ. ಮಾರ್ಚ್ 22 ರ ಬೆಳಿಗ್ಗೆ 7:30 ಕ್ಕೆ ಶ್ರೀ ಕಾಲಭೈರವೇಶ್ವರ ಸ್ವಾಮಿಗೆ ಸುವರ್ಣ ಕವಚ ಅಲಂಕಾರ ಹಾಗೂ ಶ್ರೀ

ಗಂಗಾದೇಶ್ವರಸ್ವಾಮಿಗೆ ರಜತ ನಾಗಾಭರಣ ಅಲಂಕಾರ ಪೂಜೆ, ಸಂಜೆ 7 ಗಂಟೆಗೆ ಕಾಲಭೈರವೇಶ್ವರ ಸ್ವಾಮಿಯ ಹೂವಿನ ಪಲ್ಲಕ್ಕಿ ಉತ್ಸವ ಹಾಗೂ ಪೀಠಾಧ್ಯಕ್ಷರಾದ ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಅವರ ಮುತ್ತಿನ ಪಾಲಕಿ ಉತ್ಸವ ನಡೆಯಲಿದೆ.
      ಮಾರ್ಚ್ 23 ರ ಬೆಳಿಗ್ಗೆ 10 ಕ್ಕೆ  ಬಿಜಿಎಸ್ ಡರ್ಟ್ ಟ್ರ್ಯಾಕ್ ಬೈಕ್ ರೇಸ್ ಮತ್ತು  ಉದ್ಘಾಟನೆ ನಡೆಯಲಿದೆ. ಸಂಜೆ 06 ಗಂಟೆಗೆ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರಿಂದ ಜ್ವಾಲಾ ಪೀಠಾರೋಹಣ, ಸಿದ್ದ ಸಿಂಹಾಸನ ಪೂಜೆ ನಡೆಯುತ್ತದೆ. ರಾತ್ರಿ 8:00 ಗಂಟೆಗೆ ಚಂದ್ರಮಂಡಲೋತ್ಸವ ಪೂಜೆ ನಡೆಯಲಿದೆ .
       ಮಾರ್ಚ್ 24 ರ ಸಂಜೆ :6:30  ಗಂಟೆಗೆ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರ ದಿವ್ಯ ಸಾನ್ನಿಧ್ಯದಲ್ಲಿ, ಸರ್ವಧರ್ಮ ಸಮ್ಮೇಳನ ನಡೆಯಲಿದೆ. ರಾತ್ರಿ 08 ಕ್ಕೆ ಕಾಲಭೈರವೇಶ್ವರ ಸ್ವಾಮಿಯ ತಿರುಗಣಿ ಉತ್ಸವ,ಪುಷ್ಕರಣಿಯಲ್ಲಿ ತೆಪ್ಪೋತ್ಸವ ನಂತರ ನಾಟಕ ಪ್ರದರ್ಶನ ಕಾರ್ಯಕ್ರಮಗಳು ನಡೆಯಲಿವೆ.


   ಮಾ 25 ರ ಮುಂಜಾನೆ ಬ್ರಾಹ್ಮಿ ಮುಹೂರ್ತದಲ್ಲಿ ಶ್ರೀ ಗಂಗಾಧರೇಶ್ವರ ಸ್ವಾಮಿಯ ಮಹಾರಥೋತ್ಸವ ಹಾಗೂ ಶ್ರೀ ಡಾ. ನಿರ್ಮಲಾನಂದನಾಥ ಸ್ವಾಮಿಯವರ ಅಡ್ಡಪಾಲಕಿ ಉತ್ಸವ ಬಹಳ ವಿಜ್ರಂಭಣೆಯಿಂದ ಜರುಗಲಿದೆ. ನಾಡಿನಾದ್ಯಂತ ಸಹಸ್ರಾರು ಭಕ್ತರು ಆಗಮಿಸಲಿದ್ದಾರೆ. ಸಂಜೆ 6:00 ಗಂಟೆಗೆ ನೂರಾರು ಗ್ರಾಮದೇವತೆಗಳ ಉತ್ಸವ ಮೂರ್ತಿಗಳೊಂದಿಗೆ ಗಿರಿ ಪ್ರದಕ್ಷಿಣೆ ನಡೆಯಲಿದೆ.ಬಳಿಕ ಸೋಮೇಶ್ವರ ಸ್ವಾಮಿಯ ಉತ್ಸವ ನಡೆಯಲಿದೆ.ಮಾರ್ಚ್ 26 ರ ಬೆಳಿಗ್ಗೆ 9 ಗಂಟೆಗೆ ಕ್ಷೇತ್ರದ ಬಿಂದು ಸರೋವರದಲ್ಲಿ ಅವಭೃತ ಸ್ನಾನ ಮಹಾಭಿಷೇಕ ಮತ್ತು ಸಭಾ ಕಾರ್ಯಕ್ರಮದ ಬಳಿಕ ಧರ್ಮಧ್ವಜಾವರೋಹಣದೊಂದಿಗೆ 9 ದಿನಗಳ ಜಾತ್ರಾ ಮಹೋತ್ಸವಕ್ಕೆ ತೆರೆಬೀಳಲಿದೆ.
    ನಾಡಿನ ಸಮಸ್ತ ಭಕ್ತಾದಿಗಳು, ಶ್ರೀಮಠದ ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀ ಕಾಲಭೈರವೇಶ್ವರ ಸ್ವಾಮಿ ಕೃಪೆಗೆ ಪಾತ್ರರಾಗಬೇಕಾಗಿ ಎಂದು ಶ್ರೀ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿಗಳಾದ ಪೂಜ್ಯ ಶ್ರೀ ಶ್ರೀ ಪ್ರಸನ್ನನಾಥಸ್ವಾಮೀಜಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

By admin

ನಿಮ್ಮದೊಂದು ಉತ್ತರ

error: Content is protected !!