ಶಿವಮೊಗ್ಗ: ಮಹಿಳಾ ಸಮನ್ವಯ ಕರ್ನಾಟಕ ದಕ್ಷಿಣ ಪ್ರಾಂತ ಶಿವಮೊಗ್ಗ ವಿಭಾಗ ಮತ್ತು ವಿಕಾಸ ಟ್ರಸ್ಟ್ ಇವರ ಸಂಯುಕ್ತ ಆಶ್ರಯದಲ್ಲಿ ನ.೨೬ರಂದು ಶುಭಮಂಗಳ ಸಮುದಾಯ ಭವನದಲ್ಲಿ ‘ ನಾರೀ ಶಕ್ತಿ ಸಂಗಮ’ ಮಹಿಳಾ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಶಿವಮೊಗ್ಗ ವಿಭಾಗದ ಸಂಚಾಲಕಿ ಹಾಗೂ ಭಾರತೀಯ ಕಿಸಾನ್ ಸಂಘದ ರಾಷ್ಟ್ರೀಯ ಕಾರ್ಯದರ್ಶಿ ವೀಣಾ ಸತೀಶ್ ತಿಳಿಸಿದರು.


ಅವರು ಇಂದು ಶುಭಮಂಗಳ ಸಮುದಾಯ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಸಮ್ಮೇಳನವನ್ನು ಮಹಿಳೆಯರಲ್ಲಿ ಜಾಗೃತಿ ಮೂಡಿಸಲು ಆಯೋಜಿಸಲಾಗಿದ್ದು, ರಾಷ್ಟ್ರೀಯ ಚಿಂತನೆ, ಸಾಮಾಜಿಕ ಸಾಮರಸ್ಯ ಮಹಿಳಾ ಸುರಕ್ಷೆ, ಗ್ರಾಮೀಣ ಕೃಷಿ ಇತ್ಯಾದಿ ವಿಚಾರಗಳ ಬಗ್ಗೆ ಸಮ್ಮೇಳನ ಬೆಳಕು ಚೆಲ್ಲಲಿದೆ. ಸಮ್ಮೇಳನದಲ್ಲಿ ಶಿವಮೊಗ್ಗ ಜಿಲ್ಲೆಯ ೨೦೦೦ಕ್ಕೂ ಹೆಚ್ಚು ಮಹಿಳೆಯರು ಭಾಗವಹಿಸಲಿದ್ದಾರೆ ಎಂದರು.


ಸಮ್ಮೇಳನಕ್ಕೆ ವೈದ್ಯರು, ವಕೀಲರು, ಅಧ್ಯಾಪಕಿಯರು, ಸ್ವಯಂ ಸೇವಾ ಸಂಸ್ಥೆಗಳು, ಮಹಿಳಾ ಸಂಘಗಳು, ಉದ್ಯೋಗಸ್ಥ ಮಹಿಳೆಯರು, ವಿದ್ಯಾರ್ಥಿನಿಯರು, ಹೋರಾಟಗಾರ್ತಿಯರು ಹೀಗೆ ೧೧ ಶ್ರೇಣಿಗಳನ್ನು ಗುರುತಿಸಲಾಗಿದ್ದು, ಈ ಶ್ರೇಣಿಯ ಮಹಿಳೆಯರು ಭಾಗವಹಿಸಲಿದ್ದಾರೆ. ಅದಕ್ಕಾಗಿ ತಾಲೂಕು, ನಗರ, ಹಾಗೂ ಜಿಲ್ಲಾ ಮಟ್ಟಗಳಲ್ಲಿ ಪೂರ್ವಭಾವಿ ಸಭೆ ನಡೆಸಲಾಗಿದೆ ಎಂದರು.


ಅಂದು ಬೆಳಿಗ್ಗೆ ೭-೩೦ಕ್ಕೆ ವಿನೋಬನಗರ ಪೊಲೀಸ್ ಚೌಕಿಯಿಂದ ಸಮುದಾಯ ಭವನದವರೆಗೆ ಶೋಭಾ ಯಾತ್ರೆ ನಡೆಯಲಿದ್ದು, ೯-೩೦ಕ್ಕೆ ಸ್ಥಳೀಯ ಮಹಿಳೆಯರು ತಯಾರಿಸಿದ ಕರಕುಶಲ ವಸ್ತುಗಳ ಮತ್ತು ಗೋವು ಉತ್ಪನ್ನಗಳ ಮಾರಾಟ ಮಳಿಗೆಗಳ ಉದ್ಘಾಟನೆ ನಡೆಯಲಿದೆ. ೧೦ ಗಂಟೆಗೆ ಸಮ್ಮೇಳನವನ್ನು ಕುಮುದಾ ಸುಶೀಲಪ್ಪ ಉದ್ಘಾಟಿಸಲಿದ್ದಾರೆ ಎಂದರು.


ಭಾರತೀಯ ಚಿಂತನೆಯಲ್ಲಿ ಮಹಿಳೆ, ಭಾರತದ ವಿಕಾಸದಲ್ಲಿ ಮಹಿಳೆಯರ ಪಾತ್ರ ಕುರಿತು ಸೀನು ಜೋಸೆಫ್ ಹಾಗೂ ಮಹಿಳಾ ಸುರಕ್ಷತೆ, ಸ್ವಾವಲಂಬನೆ, ಆರೋಗ್ಯ, ಶಿಕ್ಷಣ ವಿಷಯಗಳ ಕುರಿತು ಡಾ. ಲಕ್ಷ್ಮೀಪ್ರಸಾದ್ ಮಾತನಾಡಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷೆ ಡಾ. ವೀಣಾ ಭಟ್, ವಿಕಾಸ ಟ್ರಸ್ಟ್ ಅಧ್ಯಕ್ಷ ರಂಗನಾಥ್, ಸಮ್ಮೇಳನದ ಜಿಲ್ಲಾ ಸಂಚಾಲಕಿ ವಿಜಯಾ ಪ್ರಸಾದ್, ಸಹ ಸಂಚಾಲಕಿ ರಂಜಿನಿ ದತ್ತಾತ್ರಿ ಉಪಸ್ಥಿತರಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!