ಶಿವಮೊಗ್ಗ: ನಗರದ ನ್ಯಾಷನಲ್ ಪಬ್ಲಿಕ್ ಶಾಲೆ ಆವರಣದಲ್ಲಿ ಶನಿವಾರ ಸಿ.ಬಿ.ಎಸ್.ಸಿ ಶಾಲೆಗಳ ಸಹ್ಯಾದ್ರಿ ಸಹೋದಯ ಶಾಲೆಗಳ ಸಂಕೀರ್ಣದ ವತಿಯಿಂದ ಏರ್ಪಡಿಸಿದ್ದ ಸಿ.ಬಿ.ಎಸ್.ಸಿ ಅಂತರ ಶಾಲೆಗಳ ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾವಳಿಯಲ್ಲಿ ಬಾಲಕರ ವಿಭಾಗದಲ್ಲಿ ನ್ಯಾಷನಲ್ ಪಬ್ಲಿಕ್ ಶಾಲೆಯ ತಂಡ ಪ್ರಥಮ ಬಹುಮಾನ ಪಡೆದಿದ್ದು, ಅಮಟೇಕೊಪ್ಪದ ಹೊಂಗಿರಣ ಶಾಲೆ ದ್ವಿತೀಯ ಸ್ಥಾನ ಪಡೆದಿದೆ. ಬಾಲಕಿಯರ ವಿಭಾಗದಲ್ಲಿ ಹೊಂಗಿರಣ ಶಾಲೆಯ ತಂಡ ಪ್ರಥಮ ಸ್ಥಾನ ಪಡೆದಿದ್ದು, ನ್ಯಾಷನಲ್ ಪಬ್ಲಿಕ್ ಶಾಲೆಯ ತಂಡ ದ್ವಿತೀಯ ಸ್ಥಾನ ಪಡೆದಿದೆ.
ಕಾರ್ಯಕ್ರಮ ಉದ್ಘಾಟಿಸಿ ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿಗಳಾದ ಎಸ್.ಎನ್ ನಾಗರಾಜ ಮಾತನಾಡಿ, ಸ್ಪರ್ಧೆಯಲ್ಲಿ ಎದುರಾಗುವ ಸೋಲುಗಳನ್ನು ಯಾವುದೇ ಅಳುಕಿಲ್ಲದೆ ಮುಕ್ತವಾಗಿ ಸ್ವೀಕರಿಸಿ. ಸೋಲು ಹೊಸತನದ ಚಿಂತನೆಗೆ ಹಾಗೂ ಸ್ಪರ್ಧಾ ಪ್ರಕ್ರಿಯೆಯ ತಾಂತ್ರಿಕತೆಯನ್ನು ಉನ್ನತಿಕರಿಸಲು ಸಾಧ್ಯವಾಗಲಿದೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿದ್ದ ಪೋದಾರ್ ಶಾಲೆಯ ಪ್ರಾಂಶುಪಾಲರಾದ ಸುಕೇಶ್ ಸೇರಿಗಾರ ಮಾತನಾಡಿ, ನಮ್ಮ ಮನಸ್ಥಿತಿಯ ಅಧಾರದ ಮೇಲೆ ಸ್ಪರ್ಧೇಯ ಸೋಲು ಗೆಲುವುಗಳನ್ನು ಸ್ವೀಕರಿಸಬಹುದಾಗಿದೆ. ವಿದ್ಯಾರ್ಥಿಗಳು ಸದಾ ಕ್ರಿಯಾಶೀಲರಾಗಿರಿ, ಆದ್ಯತೆಯ ಅಧಾರದಲ್ಲಿ ಓದು ಮತ್ತು ಕ್ರೀಡಾ ಚಟುವಟಿಕೆಗಳನ್ನು ಸಮಾನವಾಗಿ ನಿರ್ವಹಿಸಿ ಎಂದು ಸಲಹೆ ನೀಡಿದರು.
ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷರಾದ ಜಿ.ಎಸ್.ನಾರಾಯಣರಾವ್ ವಿಜೇತ ತಂಡಗಳಿಗೆ ಬಹುಮಾನ ವಿತರಿಸಿದರು. ನ್ಯಾಷನಲ್ ಪಬ್ಲಿಕ್ ಶಾಲೆ ಪ್ರಾಂಶುಪಾಲರು ಹಾಗೂ ಸಹ್ಯಾದ್ರಿ ಸಹೋದಯ ಶಾಲೆಗಳ ಸಂಕೀರ್ಣದ ಅಧ್ಯಕ್ಷರಾದ ನವೀನ ಪಾಯಸ್ ಅಧ್ಯಕ್ಷತೆ ವಹಿಸಿದ್ದರು. ಭಾರತೀಯ ವಿದ್ಯಾಭವನದ ಪ್ರಾಂಶುಪಾಲರಾದ ಇಂದು.ಜಿ.ವಿ ಅತಿಥಿಗಳಾಗಿ ಭಾಗವಹಿಸಿದ್ದರು. ಜಿಲ್ಲೆಯ ಸಿ.ಬಿ.ಎಸ್.ಸಿ ಶಾಲೆಗಳ ಸುಮಾರು 16 ಕ್ಕು ಹೆಚ್ಚು ತಂಡಗಳು ಭಾಗವಹಿಸಿದ್ದರು.
ಚಿತ್ರ 1: ವಾಲಿಬಾಲ್ ಪಂದ್ಯಾವಳಿಯಲ್ಲಿ ವಿಜೇತ ತಂಡಗಳಿಗೆ ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷರಾದ ಜಿ.ಎಸ್.ನಾರಾಯಣರಾವ್ ಬಹುಮಾನ ವಿತರಿಸಿದರು. ಸಿ.ಬಿ.ಎಸ್.ಸಿ ಶಾಲೆಗಳ ಸಹ್ಯಾದ್ರಿ ಸಹೋದಯ ಶಾಲೆಗಳ ಸಂಕೀರ್ಣದ ಅಧ್ಯಕ್ಷರಾದ ನವೀನ ಪಾಯಸ್, ಭಾರತೀಯ ವಿದ್ಯಾಭವನದ ಪ್ರಾಂಶುಪಾಲರಾದ ಇಂದು.ಜಿ.ವಿ ಸೇರಿದಂತೆ ಮತ್ತಿತರರು ಚಿತ್ರದಲ್ಲಿದ್ದಾರೆ.
ಚಿತ್ರ 2: ವಾಲಿಬಾಲ್ ಪಂದ್ಯಾವಳಿಯನ್ನು ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿಗಳಾದ ಎಸ್.ಎನ್ ನಾಗರಾಜ ಉದ್ಘಾಟಿಸಿದರು. ಸಿ.ಬಿ.ಎಸ್.ಸಿ ಶಾಲೆಗಳ ಸಹ್ಯಾದ್ರಿ ಸಹೋದಯ ಶಾಲೆಗಳ ಸಂಕೀರ್ಣದ ಅಧ್ಯಕ್ಷರಾದ ನವೀನ ಪಾಯಸ್, ಪೋದಾರ್ ಶಾಲೆಯ ಪ್ರಾಂಶುಪಾಲರಾದ ಸುಕೇಶ್ ಸೇರಿಗಾರ ಸೇರಿದಂತೆ ಮತ್ತಿತರರು ಚಿತ್ರದಲ್ಲಿದ್ದಾರೆ.