ಮನುಷ್ಯ ದುಶ್ಚಟಗಳ ದಾಸನಾಗುವುದು ಜೀವನದ ಅತ್ಯಂತ ಕಷ್ಟದ ದುಃಖದ ಪರಿಸ್ಥಿತಿ. ತಂದೆಯವರು ಜೀವನದ ಅತ್ಯಂತ ಕೆಟ್ಟ ಸನ್ನಿವೇಶ ದಲ್ಲೂ ಸಹ ಯಾವತ್ತೂ ದುಶ್ಚಟಗಳ ದಾಸರಾಗಲಿಲ್ಲ. ಕಷ್ಟಗಳು ಎಲ್ಲರಿಗೂ ಬರುತ್ತದೆ ಕಷ್ಟಗಳಿಂದ ಹೊರಬರುವ ಪ್ರಯತ್ನ ಮಾಡಬೇಕೆ ವಿನಹ ದುಶ್ಚಟಗಳ ದಾಸರಾದರೆ ಒಳ್ಳೆಯ ಬೆಳವಣಿಗೆ ಅಲ್ಲ ಎಂದು ಶಾಸಕ ಬಿ.ವೈ.ವಿಜಯೇಂದ್ರ ಹೇಳಿದರು.


ಅವರು ಬಸವನಂದಿಹಳ್ಳಿ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಟ್ರಸ್ಟ್ ಲಯನ್ಸ್ ಕ್ಲಬ್ ಹಾಗೂ ಹಲವು ಸಂಘಟನೆಗಳ ಸಹಕಾರ ದೊಂದಿಗೆ ಆಯೋಜಿಸಿದ್ದ ಮದ್ಯವರ್ಜನ ಶಿಬಿರ ಸಮಾರೋಪ ಸಮಾರಂಭದಲ್ಲಿ ಮಾತನಾಡುತ್ತಾ, ನಮ್ಮ ತಂದೆಯವರಿಗಿಂತ ಉತ್ತಮ ಉದಾಹರಣೆ ತಮಗೆ ಬೇಕಿಲ್ಲ. ನನ್ನ ತಾಲೂಕಿನ ಸುಮಾರು ೬೦ ಜನ ಮದ್ಯ ವರ್ಜಿಸಿದರೆ ೬೦ ಕುಟುಂಬಗಳ ಜೀವನ

ಸುಖಮಯವಾಗುತ್ತಿದೆ. ದೃಢಸಂಕಲ್ಪದೊಂದಿಗೆ ಮುಂದಿನ ಜೀವನವನ್ನು ಸಾಗಿಸಿ ಆರ್ಥಿಕವಾಗಿ ಸಾಮಾಜಿಕವಾಗಿ ಸದೃಢ ವ್ಯಕ್ತಿಗಳಾಗಿ ಎಂದರು.


ಶ್ರೀ ಕ್ಷೇತ್ರ ಹಿರೇಮಾಗಡಿಯ ಶ್ರೀಗಳು ದಿವ್ಯ ಸಾನಿಧ್ಯ ವಹಿಸಿ ಮಾತನಾಡುತ್ತಾ, ಮಾನವ ಶರೀರ ಒಂದು ಅಮೂಲ್ಯ ಭಂಡಾರ ಇದು ಕಸ ಕಡ್ಡಿ ತ್ಯಾಜ್ಯ ವಸ್ತುಗಳ ತಿಜೋರಿಯಲ್ಲ. ಆದ್ದರಿಂದ ನಿಷಿದ್ಧ ವಸ್ತುಗಳನ್ನು ನಮ್ಮ ದೇಹಕ್ಕೆ ಸೇವಿಸುವುದು ಒಳ್ಳೆಯದಲ್ಲ .ಯಾವಾಗಲೂ ಒಳ್ಳೆಯ ವಸ್ತುಗಳ ಸೇವನೆ ಮನುಷ್ಯನ ಆರೋಗ್ಯಕ್ಕೆ ಪೂರಕ ಎಂದರು.


ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಲಯನ್ ಯೋಗಿರಾಜ್ ಮಾತನಾಡಿ, ಶಿಬಿರಕ್ಕೆ ಸಂಪೂರ್ಣ ಸಹಕಾರ ನೀಡಿದ ಎಲ್ಲರನ್ನು ಸ್ಮರಿಸಿ ಅಭಿನಂದಿಸಿದರು.

ಶಿಬಿರಾರ್ಥಿ ಗಳಿಗೆ ಮತ್ತು ಅವರ ಕುಟುಂಬದವರಿಗೆ ಶುಭ ಕೋರಿದರು. ಕಾರ್ಯಕ್ರಮದ ಪ್ರಾರಂಭದಲ್ಲಿ ಧರ್ಮಸ್ಥಳ ಸಂಸ್ಥೆಯ ಗಣೇಶ್ ಆಚಾರ್ಯರವರು ಶಿಬಿರಾರ್ಥಿಗಳಿಂದ ಸಂಕಲ್ಪ ಮತ್ತು ಪುನರ್ ವಿವಾಹ ಕಾರ್ಯಕ್ರಮ ಶಾಸ್ತ್ರೋಕ್ತವಾಗಿ ನಡೆಸಿಕೊಟ್ಟರು.


ಸಮಾರಂಭದಲ್ಲಿ ವ್ಯವಸ್ಥಾಪನ ಸಮಿತಿಯ ಗೌರವಾಧ್ಯಕ್ಷ ಲಯನ್ ಗಿರೀಶ್ ಎಂ.ಆರ್ ,ಧರ್ಮ ಸ್ಥಳ ಸಂಸ್ಥೆಯ ಜಿಲ್ಲಾ ಮುಖ್ಯಸ್ಥ ಬಾಬು ನಾಯಕ್, ತಾಲೂಕು ಯೋಜನಾಧಿಕಾರಿ ನಂಜುಂಡಿ ಸ್ಥಳೀಯ ಮೇಲ್ವಿಚಾರಕಿ ಅಮಿತಾ ರಮೇಶ್ ಜನಜಾಗೃತಿ ವೇದಿಕೆಯ ಪ್ರೇಮ್ ಕುಮಾರ್, ಲಯನ್ಸ್ ಅಧ್ಯಕ್ಷ ಶಿವಯೋಗಿ, ಉಮೇಶ್, ಮಾಜಿ ಪಟ್ಟಣ ಪಂಚಾ ಯಿತಿ ಅಧ್ಯಕ್ಷ ಚೆನ್ನವೀರ ಶೆಟ್ಟಿ, ಕಾಳಿಕಾಂಬ ದೇವಸ್ಥಾನ ಸಮಿತಿ ಅಧ್ಯಕ್ಷ ನಾಗರಾಜ್, ಮಲ್ಲಿಕಾರ್ಜುನ್ ಬಳ್ಳಿಗಾವಿ, ರಾಜು ಗೌಡ ಇತರರಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!