ಶಿವಮೊಗ್ಗ : ರಾಜ್ಯ ಸರ್ಕಾರ ಗ್ಯಾರಂಟಿ ಕಾರ್ಯಕ್ರಮ ಮೂಲಕ ಬಡವರ ಜೇಬಿಗೆ ಕನ್ನ ಹಾಕುತ್ತಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಆರೋಪಿಸಿದ್ದಾರೆ.

ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದರು,  ರಾಜ್ಯದಲ್ಲಿ ಅಘೋಷಿತ ಲೋಡ್ ಶೆಡ್ಡಿಂಗ್ ಆರಂಭಗೊಂಡಿದೆ. ರೈತರು ಬೇಸತ್ತಿದ್ದಾರೆ, ಬೆಳೆ ಉಳಿಸಿಕೊಳ್ಳಲೂ ವಿದ್ಯುತ್ ಸಿಗುತ್ತಿಲ್ಲ. ಅಕ್ಕಪಕ್ಕದ ರಾಜ್ಯದಿಂದ ವಿದ್ಯುತ್ ಖರೀದಿಸಿ ಕೊಡಬೇಕು ಎಂದು ಒತ್ತಾಯಿಸಿದರು.

ಗ್ಯಾರಂಟಿ ಯೋಜನೆ ನೀಡುವುದಾಗಿ ಘೋಷಿಸಿ ಜನರನ್ನು ದಿಕ್ಕು ತಪ್ಪಿಸಲಾಗಿದೆ. ಜನರಿಗೆ ಯೋಜನೆಯು ದೊರಕುತ್ತಿಲ್ಲ. ಇತ್ತ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯವು ಸಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರ ಮೊಬೈಲ್ ನೆಟ್ವರ್ಕ್ ಗಾಗಿ 300 ಕೋಟಿ ರೂ. ಅನುದಾನ ನೀಡಿದೆ.  ಮಲೆನಾಡು ಭಾಗದಲ್ಲಿ ಆದ್ಯತೆ ನೀಡಲಾಗುತ್ತಿದೆ. ಡಿಸೆಂಬರ್ ಒಳಗಾಗಿ 100 ಟವರ್ ಸ್ಥಾಪನೆ ಆಗಲಿದೆ. ಮುಂದಿನ ದಿನಗಳಲ್ಲಿ ಉಳಿದ ಎಲ್ಲ ಕಡೆ ಟವರ್ ನಿರ್ಮಿಸಲಾಗುವುದು. ಈಗಿರುವ ನೆಟ್ವರ್ಕ್ ಸಮಸ್ಯೆ ಬಗೆಹರಿಯಲಿದೆ ಎಂದು ಸಂಸದರು ಭರವಸೆ ನೀಡಿದರು.

ಶಿವಮೊಗ್ಗ ಕ್ಷೇತ್ರದ ಟವರ್ ಗಳಿಗೆ 100 ಬ್ಯಾಟರಿ ಮಂಜೂರಾಗಿದೆ. ಇದರಿಂದ ಜನರೇಟರ್ ಅವಲಂಬನೆಗೆ ಮುಕ್ತಿ ಸಿಗಲಿದೆ. ಮೊಬೈಲ್ ನೆಟ್ವರ್ಕ್ ಟವರ್ ಸ್ಥಾಪನೆಯಿಂದ ಮಲೆನಾಡು ಭಾಗದ ಜನರಿಗೆ ಇನ್ನಷ್ಟು ಉಪಯೋಗ ದೊರಕಲಿದೆ ಎಂದರು. 

ರೈತ ನಾಯಕ ಹಾಗೂ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಏತ ನೀರಾವರಿ ಮಾಡಿದ್ದೇವೆ. ಶಿಕಾರಿಪುರ ತಾಲ್ಲೂಕಿನಲ್ಲಿ ಈ ಯೋಜನೆ ಪೂರ್ಣಗೊಂಡಿದೆ. ಈ ಯೋಜನೆಗಳಿಗೆ 24 ಗಂಟೆ ವಿದ್ಯುತ್ ಪೂರೈಸಿದರೆ ಕೆರೆಗಳಿಗೆ ನೀರು ಸಿಗಲಿದೆ ಎಂದರು.

ಕೇಂದ್ರ ಸರ್ಕಾರ ಎಲ್ಲ ರಾಜ್ಯಗಳ ತಜ್ಞರಿಂದ ಅಭಿಪ್ರಾಯ ಪಡೆದು ಹೊಸ ಶಿಕ್ಷಣ ನೀತಿ ಆರಂಭಿಸಿದೆ. ಆದರೆ, ರಾಜ್ಯ ಸರ್ಕಾರ ಅದನ್ನು ಕೈಬಿಟ್ಟು ಪ್ರತ್ಯೇಕ ಶಿಕ್ಷಣ ನೀತಿ ಅಳವಡಿಸುತ್ತಿದೆ. ಇದರಿಂದ ಸರ್ಕಾರಿ ಮಕ್ಕಳಿಗೆ ಅನ್ಯಾಯ ಆಗುತ್ತಿದೆ. ವಿಶೇಷವಾಗಿ ಗ್ರಾಮೀಣ ಭಾಗದ ಮಕ್ಕಳು ತೊಂದರೆ ಅನುಭವಿಸುತ್ತಾರೆ ಎಂದು ದೂರಿದರು.

By admin

ನಿಮ್ಮದೊಂದು ಉತ್ತರ

error: Content is protected !!