ಶಿವಮೊಗ್ಗ: ಜಿಲ್ಲಾ ಸಹಕಾರಿ (ಡಿಸಿಸಿ) ಬ್ಯಾಂಕ್‌ನಲ್ಲಿ ೨೦೨೩ರಲ್ಲಿ ನಡೆದ ೯೬ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿರುವ ಆರೋಪದ ಹಿನ್ನೆಲೆಯಲ್ಲಿ ತನಿಖೆ ನಡೆಯುತ್ತಿದ್ದು, ಈ ತನಿಖಾ ಪ್ರಕ್ರಿಯೆಯನ್ನು ಚುರುಕುಗೊಳಿಸಬೇಕು ಹಾಗೂ ಅಕ್ರಮದಲ್ಲಿ ಭಾಗಿಯಾದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕೋರಿ ಅಖಿಲ ಕರ್ನಾಟಕ ಡಿ.ಕೆ. ಶಿವಕುಮಾರ್ ಅಭಿಮಾನಿಗಳ ಸಂಘದ ವತಿಯಿಂದ ಡಿಸಿಸಿ ಬ್ಯಾಂಕ್‌ನ ನೂತನ ಅಧ್ಯಕ್ಷ ಆರ್.ಎಂ. ಮಂಜುನಾಥರ ಗೌಡರ ಮೂಲಕ ಮಾನ್ಯ ಉಪ ಮುಖ್ಯಮಂತ್ರಿಗಳು, ಸಹಕಾರ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರಿಗೆ ೦೨-೧೦-೨೦೨೩ರ ಇಂದು ಮಂಗಳವಾರ ಮನವಿ ಸಲ್ಲಿಸಲಾಯಿತು.


ಡಿಸಿಸಿ ಬ್ಯಾಂಕ್ ನಾಡಿನ ಸಹಕಾರ ಕ್ಷೇತ್ರದಲ್ಲಿಯೇ ಅತ್ಯಂತ ಪ್ರತಿಷ್ಠಿತ ಹಾಗೂ ಪ್ರಖ್ಯಾತ ಬ್ಯಾಂಕ್‌ಗಳಲ್ಲಿ ಒಂದಾಗಿದೆ. ಈ ಸಹಕಾರಿ ವ್ಯವಸ್ಥೆಯಲ್ಲಿ ೨.೬೦ ಲಕ್ಷ ರೈತ ಸದಸ್ಯರಿದ್ದು, ಸಾವಿರಾರು ಕೋಟಿ ರೂ. ವಹಿವಾಟು ಹೊಂದಿದೆ.
ಸಹಕಾರಿ ವ್ಯವಸ್ಥೆಯಲ್ಲಿ ಪಾರದರ್ಶಕತೆ, ಪ್ರಾಮಾಣಿಕತೆ ಅತ್ಯಗತ್ಯ. ಇದು ಬ್ಯಾಂಕ್‌ನ ಸಿಬ್ಬಂದಿಗಳಲ್ಲಿ ಇರಬೇಕಾಗಿದೆ. ಆದರೆ ನೇಮಕಾತಿ ಸಂದರ್ಭದಲ್ಲಿ ಹಣ ನೀಡಿ ನೇಮಕಗೊಂಡಲ್ಲಿ ಇಂತಹ ಸಿಬ್ಬಂದಿಗಳು ಭ್ರಷ್ಟಾಚಾರದಲ್ಲಿ ಪಾಲ್ಗೊಂಡು ಸಹಕಾರಿ ವ್ಯವಸ್ಥೆಯ ಉದ್ದೇಶವನ್ನೇ ಹಾಳು ಮಾಡುತ್ತಾರೆ.


ಆದ್ದರಿಂದ ಇಂತಹ ನೇಮಕಾತಿಗಳಿಗೆ ಅವಕಾಶ ನೀಡಬಾರದು ಹಾಗೂ ನೇಮಕಾತಿಗೊಂಡಿರುವ ೯೬ ಸಿಬ್ಬಂದಿಗಳ ವಿರುದ್ಧ ನಡೆಯುತ್ತಿರುವ ತನಿಖೆ ಚುರುಕುಗೊಳಿಸಬೇಕು. ಪ್ರಾಮಾಣಿಕ ನಿರುದ್ಯೋಗಿಗಳಿಗೆ ಉದ್ಯೋಗ ಅವಕಾಶ ಕಲ್ಪಿಸಬೇಕೆಂದು ಮನವಿಯಲ್ಲಿ ಕೋರಲಾಗಿದೆ.
ಈ ಸಂದರ್ಭದಲ್ಲಿ ಅಖಿಲ ಕರ್ನಾಟಕ ಡಿ.ಕೆ. ಶಿವಕುಮಾರ್ ಅಭಿಮಾನಿಗಳ ಸಂಘದ ಜಿಲ್ಲಾಧ್ಯಕ್ಷ, ಕೆಪಿಸಿಸಿ ಸಂಯೋಜಕ ಆರ್. ಮೋಹನ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪಿ.ಓ. ಶಿವಕುಮಾರ್, ರಾಮಚಂದ್ರ ನಾಯಕ್, ಸಿದ್ದಪ್ಪ, ಮಂಜುನಾಥ್, ರಮೇಶ್ ಗೌಡ, ಗಾಜನೂರು ನಾಗರಾಜ್, ಸುವರ್ಣ ನಾಗರಾಜ್ ಮತ್ತಿತರರು ಉಪಸ್ಥಿತರಿದ್ದರು.


ಇದೇ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್‌ನ ಅಧ್ಯಕ್ಷರಾಗಿ ೬ನೇ ಬಾರಿಗೆ ಆಯ್ಕೆಯಾಗಿರುವ ಸಹಕಾರಿ ಕ್ಷೇತ್ರದ ದಿಗ್ಗಜ, ಸಹಕಾರಿ ರತ್ನ, ಹಿರಿಯ ಸಹಕಾರಿ ಧುರೀಣ, ಕಾಂಗ್ರೆಸ್ ಮುಖಂಡ ಡಾ| ಆರ್.ಎಂ. ಮಂಜುನಾಥ ಗೌಡರನ್ನು ಅಭಿನಂದಿಸಿ ಸನ್ಮಾನಿಸಲಾಯಿತು.

By admin

ನಿಮ್ಮದೊಂದು ಉತ್ತರ

error: Content is protected !!