-ಗೊರೂರು ಅನಂತರಾಜು, ಹಾಸನ.
ಚಿತ್ರಕಲೆಗೆ ಎಂತಹವರ ಮನಸ್ಸನ್ನು ಒಂದು ಕ್ಷಣ ತಡೆದು ನಿಲ್ಲಿಸುವ ಶಕ್ತಿಯಿದೆ. ಮಾತಿನಲ್ಲಿ ಹೇಳಲಾಗದ್ದನ್ನು ಕಲಾವಿದನು ಕುಂಚ ಬಣ್ಣ ಬಣ್ಣದ ಗೆರೆಗಳಲ್ಲಿ ಸೆರೆ ಹಿಡಿದು ಮನಸೂರೆಗೊಳ್ಳುವ ಸೊಗಸಿಗೆ ಸರಿಸಾಟಿ ಮತ್ತೊಂದಿಲ್ಲ. ಕಲೆಯ ಹಾದಿಯಲ್ಲಿ ಸಾಗಿ ಕಲಾವಿದ ಕೆ.ಟಿ.ಶಿವಪ್ರಸಾದ್ ‘ನಮ್ಮೊಳಗಿನ ರಂಗವ್ವ’ ಎಂಬ ಚಿತ್ರದಿಂದ ಪ್ರಭಾವಿತರಾಗಿ ಅವರ ಕಲೆಯ ಆರಾಧಕರಾಗಿ ಕಲೆಯ ಬೆನ್ನತ್ತಿದವರು ಎ.ಸಿ. ಸುರೇಶ್ ಅವರು.
ಅರಕಲಗೂಡು ತಾಲ್ಲೂಕು ಅತ್ನಿ ಗ್ರಾಮದ ಶ್ರೀಮತಿ ದೇವಿರಮ್ಮ ಚನ್ನಯ್ಯ ದಂಪತಿಗಳ ಸುಪತ್ರರಾಗಿ ದಿನಾಂಕ 14-4-1968ರಂದು ಜನಿಸಿದ ಇವರು ಹಾಸನದ ನಿರ್ಮಲ ಚಿತ್ರಕಲಾ ಶಾಲೆಯಲ್ಲಿ ಆರ್ಟ್ ಮಾಸ್ಟರ್ ಡಿಪ್ಲೋಮಾ ಮಾಡಿದ್ದಾರೆ. ಇವರು ಕಲೆಯ ಹಲವು ಪ್ರಕಾರಗಳಲ್ಲಿ ವರ್ಕ್ ಮಾಡುತ್ತಾ ತಾವು ಕಂಡ ಕೊಳೆಗೇರಿ ಬದುಕನ್ನು ನೈಜವಾಗಿ ಚಿತ್ರಿಸಿದ್ದಾರೆ. ಪ್ರಸ್ತುತ ಸಾಮಾಜಿಕ ಬದುಕಿನಲ್ಲಿ ನಡೆಯುತ್ತಿರುವ ಶೋಷಣೆಗೆ ಸುರೇಶ್ ಚಿತ್ರಕಲೆ ಕನ್ನಡಿ ಹಿಡಿದಿದೆ. 1998ರ ರಚನೆಗಳು ಜಲವರ್ಣದಲ್ಲಿ ಹೆಣ್ಣಿನ ಶೋಷಣೆಯನ್ನು ಚಿತ್ರಿಸಲ್ಪಟ್ಟಿವೆ. ಮನುಷ್ಯನ ವಿಕಾರವಾದ ತಲೆಯ ಬುರುಡೆ ಅದರ ಹಿಂಭಾಗದಲ್ಲಿ ಕಲ್ಲಿನ ಹಳೆಯ ಗೋಡೆ ಇದೆ. ಮುಂದೆ ಒಂದು ಬಾವಲಿ ಹಾರಿ ಹೋಗುತ್ತಿರುವ ದೃಶ್ಯವಿದೆ.
ಕಲಾವಿದನ ಕಲ್ಪನೆಯಲ್ಲಿ ಬಾವಲಿ ಒಂದು ಕೆಟ್ಟ ಸಂದೇಶ ತೆಗೆದುಕೊಂಡು ಹೊರಟಿದೆ. ಪ್ರಪಂಚವನ್ನೇ ತಲ್ಲಣಗೊಳಿಸಿದ ಕೋವಿಡ್-19 ಕರಾಳ ಕಥೆಯನ್ನು ಆಗಲೇ ಕಲಾವಿದರು ಊಹಿಸಿ ಬರೆದಿರುವುದು ಸೋಜಿಗವೆ ಸೈ.
ಅಕ್ರಾಲಿಕ್ ಮಾಧ್ಯಮದಲ್ಲಿ ಶೋಷಣೆ ಶೀರ್ಷಿಕೆಯಡಿ ಸಂಕೋಲೆಯೊಳಗೆ ಬಂಧಿಯಾದ ಹೆಣ್ಣನ್ನು ಶೋಷಿಸುತ್ತಿರುವಲ್ಲಿ ಕಾಗೆಯೊಂದು ಮನುಷ್ಯನ ಮೃಗೀಯ ಧೋರಣೆಯನ್ನು ಸಂಕೇತಿಸಿದೆ.
ಗ್ರಾಫಿಕ್ ಕಲೆಯಲ್ಲಿ ಲಿನೋ, ವುಡ್ ಕಟ್ಟಿಂಗ್, ಕ್ಲೇ ಮಾಡೆಲ್ ಪರಿಣತಿ ಹೊಂದಿದ್ದಾರೆ. ಮರದ ತುಂಡೊಂದನ್ನು ಹಲವು ಬಾರಿ ಕೆತ್ತಿ ಬಣ್ಣ ಬಳಿದು ನವ್ಯ ಕಲಾಕೃತಿಯಾಗಿಸಬಲ್ಲರು.
ಚಿಣ್ಣರಮೇಳ, ಮಕ್ಕಳ ಬೇಸಿಗೆ ಶಿಬಿರಗಳಲ್ಲಿ ಪೇಪರ್ ಕಟ್ಟಿಂಗ್ಸ್ ನಲ್ಲಿ ಹೂವುಗಳನ್ನು ತರಕಾರಿಗಳಿಂದ ಗ್ರೀಟಿಂಗ್ ಕಾರ್ಡ್ ಕ್ಲೇ ಮಾಡೆಲ್ ಎಲ್ಲಾ ಕಲಿಸಿದ್ದಾರೆ. ಬ್ಯಾನರ್, ಸೈನ್ ಬೋರ್ಡ್, ಸ್ಕ್ರೀನ್ ಪ್ರಿಂಟಿಂಗ್ ಗಳಿಕೆ ಏನೇನು ಸಾಲದು ಇವರ ಜೀವನ ಬದುಕಿಗೆ. ಚಾರ್ಕೋಲ್ ವರ್ಕ್‍ನಲ್ಲಿ ನವ್ಯ ಕಲಾಕೃತಿ ಸಂಪ್ರದಾಯ ಶೈಲಿ ಕಲಾರಚನೆಯಲ್ಲಿ ಪಳಗಿದ ಇವರು 1994ರ ಮಂಡ್ಯ 68ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನ, ಇದೇ ವರ್ಷ ಸಕಲೇಶಪುರದಲ್ಲಿ ನಡೆದ ಹಾಸನ ಜಿಲ್ಲಾ ಸಾಹಿತ್ಯ ಸಮ್ಮೇಳನ. ಹಳೇಬೀಡಿನಲ್ಲಿ ನಡೆದ ತಾಲ್ಲೂಕು ಸಾಹಿತ್ಯ ಸಮ್ಮೇಳನ, 2002ರಲ್ಲಿ ಬೇಲೂರು ತಾಲ್ಲೂಕು ಸಾಹಿತ್ಯ ಸಮ್ಮೇಳನ, 1999 ಮೈಸೂರು ದಸರಾ ವಸ್ತು ಪ್ರದರ್ಶನ ಹೊಯ್ಸಳ ಮಹೋತ್ಸವ ಹೀಗೆ ಇವರ ಚಿತ್ರಕಲಾ ಪ್ರದರ್ಶನಗಳು ನಡೆದಿವೆ.
ಮಂಡ್ಯದಲ್ಲಿ 1998ರಲ್ಲಿ ನಡೆದ ಗ್ರಾಫಿಕ್ಸ್ ಕಲಾಕೃತಿಗಳ ಪ್ರದರ್ಶನ 1996 ಜಿಲ್ಲಾ ಸಾಕ್ಷರತಾ ಭಿತ್ತಿಚಿತ್ರ ಕಾರ್ಯಾಗಾರ, ಹೊಯ್ಸಳ ಮಹೋತ್ಸವ ಪೈಂಟಿಂಗ್ ಕ್ಯಾಂಪ್ ಹಾಸನ ಮತ್ತು ಹಳೇಬೀಡಿನಲ್ಲಿ ನಡೆದು ಭಾಗವಹಿಸಿದ್ದಾರೆ. ಕರ್ನಾಟಕ ಲಲಿತಾ ಕಲಾ ಅಕಾಡಮಿಯ ಪೇಂಟಿಂಗ್ ಕ್ಯಾಂಪ್, ಶ್ರವಣಬೆಳಗೊಳದಲ್ಲಿ ನಡೆದ ಅಖಿಲ ಭಾರತ ಸಾಹಿತ್ಯ ಸಮ್ಮೇಳನ, ವಿಶ್ವಕಲಾ ದಿನಾಚರಣೆ ಪ್ರಯುಕ್ತ ಹಾಸನದಲ್ಲಿ ನಡೆದ ಕರ್ನಾಟಕ ಲಲಿತಾ ಕಲಾ ಅಕಾಡೆಮಿ ಚಿತ್ರ ಕಲಾ ಪ್ರದರ್ಶನ, ಉದಯ ಟಿವಿಯ ಏಡ್ಸ್ ಕುರಿತ ಬಿತ್ತಿ ಚಿತ್ರ ಪ್ರದರ್ಶನ ಹೀಗೆ ಪಾಲ್ಗೊಂಡಿದ್ದಾರೆ.
ಸಂಪನ್ಮೂಲ ವ್ಯಕ್ತಿಯಾಗಿ ಹಾಸನ ಜಿಲ್ಲಾ ವೃತ್ತಿ ಶಿಕ್ಷಕರ ಕಾರ್ಯಾಗಾರ, ನೆಹರು ಯುವ ಕೇಂದ್ರ ಅಂಬೇಡ್ಕರ್ ಯುವಕ ಸಂಘ ದೊಡ್ಡಬಾಗನಹಳ್ಳಿ ಸ್ಕ್ರೀನ್ ಪ್ರಿಂಟಿಂಗ್ ತರಭೇತಿ ನೀಡಿದ್ದಾರೆ. ಚಿಣ್ಣರ ಮೇಳಗಳಲ್ಲಿ ಮಣ್ಣಿನ ಮಾದರಿ ಪೇಪರ್ ಕ್ರಾಫ್ಟ್ ಮಾಡುವುದನ್ನು ಹೇಳಿಕೊಟ್ಟು. ಸಾಕ್ಷರತಾ ಆಂದೋಲನದಲ್ಲಿ ಸಾಕ್ಷರತಾ ಘೋಷಣೆಗಳನ್ನು ಬರೆದಿದ್ದಾರೆ. ಹಾಸನದ ವಿಜಯ ಆಂಗ್ಲ ಮಾದ್ಯಮ ಶಾಲೆಯಲ್ಲಿ ಚಿತ್ರಕಲಾ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದ ಇವರು ನಾಟಕಗಳಿಗೆ ರಂಗಸಜ್ಜಿಕೆ ಮಾಡಿದ್ದಾರೆ. ಕನ್ನಡ ಮತ್ತು ಸಂಸ್ಕøತಿ ಇಲಾಖೆ ನವದೆಹಲಿ ನಡೆಸಿದ ಧ್ವನಿ ಮತ್ತು ಬೆಳಕು ಕಾರ್ಯಕ್ರಮದಲ್ಲಿ ಸ್ಟೇಜ್ ವರ್ಕ್ ನಿಭಾಯಿಸಿದ್ದಾರೆ. ಸೃಜನಶೀಲ ಕಲಾರಚನೆ ಜೊತೆಗೆ ಪಾಟ್ ಪೇಂಟಿಂಗ್, ಗಾಜಿನ ಬಾಟಲ್‍ಗಳ ಮೇಲೆ ಚಿತ್ರಿಸುವುದು, ವಿಜ್ಞಾನ ಮಾದರಿ ತಯಾರಿಕೆ ಇತ್ಯಾದಿ ಇವರ ದಿನನಿತ್ಯದ ಹವ್ಯಾಸ. ಚಿಕ್ಕಂದಿನಲ್ಲೇ ಪರಿಸರ ಕಾಳಜಿಯುಳ್ಳವರಾಗಿ ಹಾಸನ ಹಸಿರು ಭೂಮಿ ಪ್ರತಿಷ್ಠಾನ, ಬಿ.ಜೆ.ವಿ.ಎಸ್. ಜೊತೆ ಸೇರಿ ಗಿಡ ನೆಡುವುದು, ಕಲ್ಯಾಣ ಸ್ವಚ್ಛತೆ, ತಾರಸಿ ಕೃಷಿ, ಶಾಲಾ ಮಕ್ಕಳಿಗೆ ಪಕ್ಷಿ ವೀಕ್ಷಣೆ, ಆಕಾಶ ವೀಕ್ಷಣೆ ಆರೋಗ್ಯ ಶಿಬಿರ ಹೀಗೆ ಸದಾ ಚಟುವಟಿಕೆ ನಿರತರು.