ಸಾಗರ : ಇಲ್ಲಿನ ಮಂಕಳಲೆ ಸಂತ ಜೊಸೆಫರ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಗುರುವಾರ ರಕ್ಷಾಬಂಧನ ಆಚರಣೆಗೆ ಸಂಬಂದಪಟ್ಟಂತೆ ಮುಖ್ಯ ಶಿಕ್ಷಕರು ಮತ್ತು ಪೋಷಕರ ನಡುವೆ ವಾಗ್ಯುದ್ದ ನಡೆಯಿತು.
ಬುಧವಾರ ರಕ್ಷಾಬಂಧನ ಹಿನ್ನೆಲೆಯಲ್ಲಿ ೯ನೇ ತರಗತಿಯಲ್ಲಿ ಮಕ್ಕಳು ಪರಸ್ಪರ ರಾಖಿ ಕಟ್ಟಿಕೊಂಡಿದ್ದಾರೆ. ಓರ್ವ ವಿದ್ಯಾರ್ಥಿನಿ ವಿದ್ಯಾಥಿಯೊಬ್ಬನಿಗೆ ರಾಖಿ ಕಟ್ಟಿದ್ದಾಳೆ. ಎಲ್ಲರ ಎದುರಿಗೆ ರಾಖಿ ಕಟ್ಟಿದ್ದರಿಂದ ಬಾಲಕ ಮಾನಸಿಕವಾಗಿ ಬೇಸರಗೊಂಡಿದ್ದಾನೆ. ಬಾಲಕನಿಗೆ ರಾಖಿ ಕಟ್ಟಿದಾಗ ಉಳಿದ ವಿದ್ಯಾರ್ಥಿಗಳು ಚಪ್ಪಾಳೆ ತಟ್ಟಿ ಸಂಭ್ರಮಿಸಿದ್ದರು. ಇದರಿಂದ ನೊಂದ ವಿದ್ಯಾರ್ಥಿ ಬಾತ್‌ರೂಮ್‌ಗೆ ಹೋಗಿ ಬಾಗಿಲು ಹಾಕಿಕೊಂಡು ಅಳಲಾರಂಭಿಸಿದನು. ಆಗ ಮುಖ್ಯ ಶಿಕ್ಷಕರು ಮತ್ತು ಶಿಕ್ಷಕ ವರ್ಗ ವಿದ್ಯಾರ್ಥಿಯನ್ನು ಸಮಾಧಾನಪಡಿಸಿ, ಬಾಲಕನ ಕೈಗೆ ಕಟ್ಟಿದ್ದ ರಾಖಿಯನ್ನು ತೆಗೆಸಿದ್ದಾರೆ. ಜೊತೆಗೆ ಎಲ್ಲ ವಿದ್ಯಾರ್ಥಿಗಳು ಪರಸ್ಪರ ಕಟ್ಟಿಸಿಕೊಂಡ ರಾಖಿಯನ್ನು ಬಿಚ್ಚಿಸಿ ಕಳಿಸಿದ್ದರು. ಆದರೂ ಗುರುವಾರ ಬೆಳಿಗ್ಗೆ ೧೧ ಗಂಟೆವರೆಗೆ ಮಕ್ಕಳನ್ನು ಹೊರಗೆ ನಿಲ್ಲಿಸುವ ಶಿಕ್ಷೆಯನ್ನು ನೀಡಲಾಗಿತ್ತು.
ಈ ವಿಷಯವನ್ನು ವಿದ್ಯಾರ್ಥಿಗಳು ಮನೆಗೆ ಹೋಗಿ ಪೋಷಕರಿಗೆ ತಿಳಿಸಿದ್ದರು. ಗುರುವಾರ ಪೋಷಕರು ಮತ್ತು ಹಿಂದೂಪರ ಸಂಘಟನೆಗಳು ಶಾಲೆಗೆ ಆಗಮಿಸಿ ರಾಖಿ ಬಿಚ್ಚಿಸಿದ್ದಕ್ಕೆ ತೀವೃ ಆಕ್ರೋಶ ವ್ಯಕ್ತಪಡಿಸಿದರು. ಹಿಂದೂಪರ ಸಂಘಟನೆಯ ಕೋಮಲ್ ರಾಘವೇಂದ್ರ, ಸಂತೋಷ್, ರಾಘವೇಂದ್ರ ಕಾಮತ್, ಆಟೋ ಗಣೇಶ್, ಕುಮಾರ ಶೆಟ್ಟಿ, ಶ್ರೀಧರ್ ಸಾಗರ್, ಪ್ರತಿಮಾ ಜೋಗಿ, ಕಿರಣ್, ನವೀನ್ ಯಳವರಸಿ, ಗಣೇಶ್ ಇನ್ನಿತರರು ಕಟ್ಟಿದ್ದ ರಾಖಿಯನ್ನು ಬಿಚ್ಚಿಸಿದ್ದ ಮುಖ್ಯ ಶಿಕ್ಷಕಿ ಮತ್ತು ಶಿಕ್ಷಕ ವರ್ಗವನ್ನು ತರಾಟೆಗೆ ತೆಗೆದುಕೊಂಡರು.
ಸ್ಥಳಕ್ಕೆ ಡಿವೈಎಸ್‌ಪಿ ಗೋಪಾಲಕೃಷ್ಣ ನಾಯ್ಕ್, ಸರ್ಕಲ್ ಇನ್ಸ್‌ಪೆಕ್ಟರ್ ಸೀತಾರಾಮ್, ಕೃಷ್ಣಪ್ಪ, ತಹಶೀಲ್ದಾರ್ ಚಂದ್ರಶೇಖರ್ ನಾಯ್ಕ್, ಶಿಕ್ಷಣ ಇಲಾಖೆಯ ಅಧಿಕಾರಿಗಳು ಆಗಮಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಮುಖ್ಯ ಶಿಕ್ಷಕಿ ರಾಖಿ ತೆಗೆಸಿದಕ್ಕೆ ಕ್ಷಮೆ ಕೋರಿದ ಹಿನ್ನೆಲೆಯಲ್ಲಿ ಘಟನೆಯನ್ನು ಸಮಾಪ್ತಿಗೊಳಿಸಲಾಯಿತು.
ಘಟನೆಗೆ ಖಂಡನೆ : ಪವಿತ್ರವಾದ ರಕ್ಷಾ ಬಂಧನ ಕಾರ್ಯಕ್ರಮಕ್ಕೆ ಅವಮಾನಿಸಿರುವ ಸಂತ ಜೊಸೆಫರ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಕ್ರಮವನ್ನು ಹಿಂದೂ ಜಾಗರಣಾ ವೇದಿಕೆ ಖಂಡಿಸಿದೆ.
ಶಿಕ್ಷಣದ ಹೆಸರಿನಲ್ಲಿ ಮಕ್ಕಳ ಮೇಲೆ ದಬ್ಬಾಳಿಕೆ ನಡೆಸುತ್ತಿರುವುದು ಶಾಲೆಯಲ್ಲಿ ಕಂಡು ಬರುತ್ತಿದೆ. ಮಕ್ಕಳ ಓವರ್ ಕೋಟ್, ಬೆಲ್ಟ್ ಇನ್ನಿತರೆ ಮೇಲೆ ಶಿಲುಬೆಯ ಚಿತ್ರವನ್ನು ಹಾಕಿರುವುದು ಸರಿಯಲ್ಲ. ಇಲ್ಲಿ ಎಲ್ಲ ವರ್ಗದ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ತಕ್ಷಣ ಟೈ, ಬೆಲ್ಟ್ ಇನ್ನಿತರೆ ಮೇಲೆ ಹಾಕಿಸಿರುವ ಶಿಲುಬೆ ಚಿತ್ರವನ್ನು ತೆಗೆಯಬೇಕು ಎಂದು ಹಿಂದೂ ಜಾಗರಣಾ ವೇದಿಕೆ ಒತ್ತಾಯಿಸಿದೆ.