ಶಿವಮೊಗ್ಗ : ನಿಮ್ಮ ತುಂಗಾ ತರಂಗ ಓದುಗ ಬಳಗ ನೀಡಿದ ಮಾಹಿತಿಯ ಬೆನ್ನು ಹಿಡಿದು ಪ್ರಕಟಿಸಿದ್ದ ಶಿವಮೊಗ್ಗದ ಸ್ಪಾ ಹೆಸರಿನ ವೇಶ್ಯಾವಾಟಿಕೆ ದಂಧೆಯ ವರದಿಗೆ ಪೂರಕವಾಗಿ ಖಚಿತ ಮಾಹಿತಿ ಮೇರೆಗೆ ಶಿವಮೊಗ್ಗ ಪೊಲೀಸರು ನಡೆಸಿದ ದಾಳಿಯಲ್ಲಿ ಸ್ಪಾ ಮಾಲೀಕರು ಹುಡುಗಿಯರನ್ನು ವೇಶ್ಯಾವಾಟಿಕೆ ದಂಧೆಯೊಳಗೆ ಕರೆತರುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದೆ.


ಕಳೆದ 2 ತಿಂಗಳ ಹಿಂದೆ ನಿಮ್ಮ ತುಂಗಾ ತರಂಗ ಪತ್ರಿಕೆ ಸ್ಪಾ ಹೆಸರಿನಲ್ಲಿ ಶಿವಮೊಗ್ಗ ನಗರ ಸೇರಿದಂತೆ ಹಲವೆಡೆ ವೇಶ್ಯಾವಾಟಿಕೆ ನಡೆಸುತ್ತಿದ್ದ ಕುರಿತು ವರದಿ ಬಿತ್ತರಿಸಿದ್ದ ಬೆನ್ನಲ್ಲೆ ಸ್ಪಾ ಗಳು ಎಚ್ಚರವಾಗಿದ್ದವು. ಒಂದಿಷ್ಟು ಪೊಲೀಸ್ ಅಧಿಕಾರಿಗಳು ಈ ದಂಧೆಯ ಅಳವನ್ನು ಹುಡುಕತೊಡಗಿದ್ದರು.


ಈ ನಡುವೆ ನಿನ್ನೆ ಖಚಿತ ಮಾಹಿತಿ ಮೇರೆಗೆ ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್ ಕುಮಾರ್, ಹೆಚ್ಚುವರಿ ಪೊಲೀಸ್ ರಕ್ಷಣಾಧಿಕಾರಿ ಅನಿಲ್ ಕುಮಾರ್ ಭೂಮರೆಡ್ಡಿ ಅವರ ಮಾರ್ಗದರ್ಶನದಲ್ಲಿ ಪೊಲೀಸ್ ಉಪಾಧೀಕ್ಷಕ, ಉಪವಿಭಾಗ ಬಿ ನ ಎಂ.ಸುರೇಶ್, ಮಹಿಳಾ ಪೊಲೀಸ್ ಠಾಣೆಯ ಇನ್ಸ್‌ಸ್ಪೇಕ್ಟರ್ ಕುಮಾರ್ ಹಾಗೂ ಸಿಬ್ಬಂದಿಗಳು ದಾಳಿ ನಡೆಸಿ ವೇಶ್ಯಾವಾಟಿಕೆಯ ದಂಧೆಯೊಳಗೆ ಆಮಿಷ ತೋರಿಸಿ ಕರೆ ತಂದಿದ್ದ ೬ ಹೆಣ್ಣು ಮಕ್ಕಳನ್ನು ರಕ್ಷಿಸಿದ್ದಾರೆ.


ಶಿವಮೊಗ್ಗ ನಗರದ ಕುವೆಂಪು ರಸ್ತೆಯಲ್ಲಿರುವ ಸಾಯಿ ಆರ್ಕೆಡ್ ಕಟ್ಟಡದಲ್ಲಿದ್ದ ರಾಯಲ್ ಆರ್ಚ್ ಫ್ಯಾಮಿಲಿ ಸೆಲೂನ್ ಮತ್ತು ಸ್ಪಾನ ಮಾಲೀಕರಾದ ವಿದ್ಯಾಶ್ರೀ ಎಂ ಹಾಗೂ ಅವರ ಪತಿ ಗೋಪಾಲ್ ವೈ ಅವರನ್ನು ಬಂಧಿಸಿ ೬ ಯುವತಿಯರನ್ನು ರಕ್ಷಿಸಿದ್ದಾರೆ. ಶಿವಮೊಗ್ಗ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಸ್ಪಾ ಹೆಸರಿನ ಕೃತ್ಯಗಳಲ್ಲಿ ಗಿರಾಕಿಗಳನ್ನು ಹುಡುಕಿ ಅವರಿಗೆ ಕೇವಲ ಮಸಾಜು ಮಾತ್ರವಲ್ಲದೇ, ವೇಶ್ಯಾವಾಟಿಕೆ ದಂಧೇ ಮಾಡಲು ಅವಕಾಶ ಕಲ್ಪಿಸುತ್ತಿದ್ದ ಹತ್ತಾರು ದೂರುಗಳು ಪದೇ ಪದೇ ಕೇಳಿ ಬರುತ್ತಿದ್ದವು. ಕೆಲ ತಲೆಕೆಟ್ಟ ಗಿರಾಕಿಗಳು ಆಯಾ ಸ್ಪಾ ಮಾಲೀಕರೊಂದಿಗೆ ಮಾತನಾಡುತ್ತಾ, ವೇಶ್ಯಾವಾಟಿಕೆ ದಂಧೆಯ ಲೈಂಗಿಕತೆ ಕುರಿತು ಬೇಡಿಕೆ ಇಡುತ್ತಿದ್ದರು. ಒಂದು ಕಡೆ ಈ ಬಗೆಯಾದರೆ ಮತ್ತೊಂದು ಕಡೆ ಕೆಲ ಸ್ಪಾಗಳು ಅನಧಿಕೃತವಾಗಿದ್ದು, ಆರೋಗ್ಯ ಇಲಾಖೆ, ನಗರಪಾಲಿಕೆ ಅನುಮತಿಯನ್ನೇ ಪಡೆದಿಲ್ಲ. ಈ ವಿಷಯದ ಬಗ್ಗೆ ದೊರೆತ ಖಚಿತ ಮಾಹಿತಿಯನ್ನು ತುಂಗಾ ತರಂಗ ಅಂದೇ ಮೊದಲ ಹಂತದಲ್ಲಿ ಸಾರ್ವಜನಿಕವಾಗಿ ವಿವರಿಸಿ ಹೇಳಿತ್ತು.


ಒಟ್ಟಾರೆ ಸಂತೋಷದ ಸಂಗತಿ ಎಂದರೆ ಈಗ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಅವರ ತಂಡ ಇಂತಹ ಅಕ್ರಮಗಳನ್ನು ಬಗ್ಗು ಬಡೆಯುವ ಕೆಲಸಕ್ಕೆ ಮುಂದಾಗಿರುವುದು ಸ್ವಾಗತಾರ್ಹ. ಇರುವ ಸುಮಾರು 60 ರಿಂದ 70 ಸ್ಪಾಗಳಲ್ಲಿ ಒಂದೆರೆಡು ಹೊರತು ಪಡಿಸಿದರೆ ಉಳಿದ ಸ್ಪಾಗಳಲ್ಲಿ ಈಗಲೂ ಇದೇ ದಂಧೆ ನಡೆಯುತ್ತಿದೆಯಂತೆ. ಪೊಲೀಸರು ಸಮಯ ತಪ್ಪಿಸಿ ಮಾರುವೇಷದ ತನಿಖೆ ನಡೆಸಿದರೆ ಇಂತಹ ಸಾಕಷ್ಟು ಅಪರಾಧಿಗಳು ಪತ್ತೆಯಾಗುತ್ತಾರೆ ಅಲ್ಲವೇ..?

By admin

ನಿಮ್ಮದೊಂದು ಉತ್ತರ

error: Content is protected !!