ಸಿಗಂದೂರು ತಾಯಿ ಮಡಿಲಲ್ಲಿ ಮಾಲಿಕರಾಗುವವರ ತಕರಾರು….!

ಶಿವಮೊಗ್ಗ,ಅ.17:
ತಾಯಿ ಸಿಗಂದೂರು ದೇವಿಯ ಪೂಜೆ ವಿವಾದ ಹೊಸಹೊಸ ತಿರುವು ಪಡೆಯುತ್ತಿದೆ. ಕಿತ್ತಾಟ ನಗೆಪಾಟಲಿಗೀಡಾಗುತ್ತಿದೆ.
ಸಿಗಂದೂರು ಶ್ರೀ ಚೌಡೇಶ್ವರಿ ದೇವಿಯ ಪೂಜೆಯನ್ನು ನಮ್ಮ ಕುಟುಂಬದವರು ಅನಾದಿಕಾಲದಿಂದಲೂ ನಡೆಸಿಕೊಂಡು ಬಂದಿದ್ದು ಈಗ ಅದನ್ನು ಕೆಲವರು ಕಬಳಿಸಲು ಹೊರಟಿದ್ದಾರೆ. ದೇವಸ್ಥಾನದ ನಮ್ಮ ಸುಪರ್ದಿಗೆ ಬರಬೇಕು ಎಂದು ಹಳೆ ಜೀರ್ಣೋದ್ದಾರ ಸಮಿತಿಯ ಮಂಜಪ್ಪ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ದೇವಸ್ತಾನ ವಿವಾದಕ್ಕೆ ಸಂಬಂಧಿಸಿದಂತೆ ನಿನ್ನೆನಡೆದ ಘಟನೆ ಖಂಡನೀಯವಾದುದು. ತಾವೇ ಧರ್ಮದರ್ಶಿಗಳು ಎಂದು ಸ್ವಯಂಘೋಷಿತಗೊಂಡಿರುವ ರಾಮಪ್ಪ ಹಾಗು ಪ್ರಧಾನ ಅರ್ಚಕ ಶೇಷಗಿರಿ ಭಟ್ಟರು ಈ ದೇವಸ್ತಾನವನ್ನು ಹರಾಜಿಗೆ ಇಟ್ಟಿದ್ದಾರೆ. ದೇವಿ ಚೌಡೇಶ್ವರಿ ಈ ಇಬ್ಬರ ಸ್ವತ್ತೂ ಅಲ್ಲ ಎಂದರು.

ತಾಯಿಯ ಸನ್ನಿದಿ


ಇದು ಮೂಲತಃ ಈಡಿಗರ ದೇವತೆಯಾಗಿದ್ದಾಳೆ. ನೀರಿನಲ್ಲಿದ್ದ ದೇವತೆಯನ್ನು ತಂದು ಪೂಜೆ ಮಾಡಿದ ಕೀರ್ತಿ ನಮ್ಮ ಕುಟುಂಬಕ್ಕೆ ಸೇರಿದೆ. ನಮ್ಮ ತಂದೆ ಚೌಡಪ್ಪನವರು ಮೊದಲು ಇದನ್ನು ವರ್ಷಕ್ಕೊಮ್ಮೆ ಜನವರಿ ತಿಂಗಳಲ್ಲಿ ಪೂಜಿಸುತ್ತಿದ್ದರು. ಕ್ರಮೇಣ ಅದಕ್ಕೆ ರೂಪ ಕೊಡಲಾಯಿತು ಅಷ್ಠೇ. ಆದರೆ ಈಗ ಹಣ ಬರಲು ಪ್ರಾರಂಭವಾದ ಮೇಲೆ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಅದನ್ನು ಸ್ವತ್ತಾಗಿ ಬಳಸಿಕೊಳ್ಳುತ್ತಿದ್ದರು ಎಂದರು.
ಇಬ್ಬರ ಕಿತ್ತಾಟದಲ್ಲಿ ಭಕ್ತರಿಗೆ ತೊಂದರೆಯಾಗುತ್ತಿದೆ. ಒಂದು ಕುಟುಂಬದ ದೇವತೆಯನ್ನು ಹೀಗೆ ದುರುಪಯೋಗವಾಗಲು ನಾವು ಬಿಡುವುದಿಲ್ಲ. ಸದ್ಯಕ್ಕೆ ಈವಿವಾದಕ್ಕೆ ಸಂಬಂಧಿಸಿದಂತೆ ಸ್ಥಳೀಯ ನ್ಯಾಯಾಲಯಗಳಲ್ಲಿ ನಮಗೆ ಸೋಲಾಗಿರಬಹುದು. ಆದರೆ ಹೈಕೋರ್ಟ್‌ಗೆ ಮೇಲ್ಮನವಿ ಹೋಗಿದ್ದು ಇದರಲ್ಲಿ ನಮಗೆ ನ್ಯಾಯ ಸಿಗುತ್ತದೆ. ಯಾವುದೇ ಕಾರಣಕ್ಕೂ ಮುಜರಾಯಿ ಇಲಾಖೆಗೆ ಸೇರಿಸಲು ಇದನ್ನು ಬಿಡುವುದಿಲ್ಲ ಎಂದರು.
ಹೋರಾಟಗಾರ ದೂಗೂರು ಪರಮೇಶ್ವರ್ ಮಾತನಾಡಿ, ದೇವಸ್ಥಾನದ ಆಸ್ತಿಯನ್ನು ಧರ್ಮದರ್ಶಿ ಎನಿಸಿಕೊಂಡಿರುವ ರಾಮಪ್ಪ ಮತ್ತು ಅರ್ಚಕ ಶೇಷಗಿರಿ ಭಟ್ಟ ಕಬಳಿಸಲು ಹೊರಟಿದ್ದಾರೆ. ಭಕ್ತರ ಹಣವನ್ನು ವಂಚಿಸಿದ್ದಾರೆ. ಕೋಟಿ ಕೋಟಿ ಸಂಪಾದನೆ ಮಾಡಿದ್ದಾರೆ. ಅರಣ್ಯದ ಆಸ್ತಿಯನ್ನು ಕಬಳಿಸಿದ್ದಾರೆ. ಅದು ಸರ್ಕಾರದ ಆಸ್ತಿ. ಈ ಇಬ್ಬರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಮತ್ತು ಇಡಿ ಪ್ರಕರಣವನ್ನು ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.
ಅಲ್ಲಿಯವರೆಗೂ ಜಿಲ್ಲಾಡಳಿತ ದೇವಸ್ಥಾನದ ಎಲ್ಲ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಮತ್ತು ಅಲ್ಲಿಗೆ ಆಡಳಿತಾಧಿಕಾರಿಯನ್ನು ನೇಮಿಸಬೇಕು. ರಾಜ್ಯದಲ್ಲಿ ಎಲ್ಲೆಲ್ಲಿ ಸರ್ಕಾರಿ ಮತ್ತು ಅರಣ್ಯ ಜಾಗಗಳನ್ನು ಕಬಳಿಸಿ ದೇವಸ್ಥಾನಗಳನ್ನು ಕಟ್ಟಿದ್ದಾರೋ ಅವೆಲ್ಲವನ್ನು ಸರ್ಕಾರ ತಮ್ಮ ವಶಕ್ಕೆ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಚೌಡಪ್ಪ, ಬಸಪ್ಪ ಮುಂತಾದವರಿದ್ದರು.

By admin

ನಿಮ್ಮದೊಂದು ಉತ್ತರ

You missed

error: Content is protected !!