ಶಿವಮೊಗ್ಗ, ಅ.01:
ಉತ್ತರಪ್ರದೇಶದ ಹತ್ರಾಸ್ ಗ್ಯಾಂಗ್ ರೇಪ್ ಪ್ರಕರಣವನ್ನು ತೀವ್ರವಾಗಿ ಖಂಡಿಸಿರುವ ಮಾನವ ಹಕ್ಕುಗಳ ಕಮಿಟಿ ಪ್ರಕರಣದ ಆರೋಪಿಗಳಿಗೆ ಕಠಿಣವಾದ ಶಿಕ್ಷೆ ನೀಡಬೇಕೆಂದು ಆಗ್ರಹಿಸಿದೆ.
ಶಿವಮೊಗ್ಗ ಜಿಲ್ಲಾಧಿಕಾರಿಗಳ ಮೂಲಕ ಉತ್ತರ ಪ್ರದೇಶದ ರಾಜ್ಯಪಾಲರಿಗೆ ಹಾಗೂ ದೇಶದ ರಾಷ್ಟ್ರಪತಿ ಅವರಿಗೆ ಇಂದು ಕಮಿಟಿ ಮನವಿ ಸಲ್ಲಿಸಿತು.

ಮನವಿ ಸಲ್ಲಿಕೆ


ಸೆಪ್ಟೆಂಬರ್ 14 ರಂದು ಉತ್ತರಪ್ರದೇಶದ ಹತ್ರಾಸ್ ನಲ್ಲಿ 18 ವರ್ಷದ ಬಾಲಕಿ ಮೇಲೆ ನಡೆದ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣವು ದೇಶದಲ್ಲಿ ಹೆಣ್ಣು ಮಕ್ಕಳ ಸುರಕ್ಷತೆಯ ಬಗ್ಗೆ ಮತ್ತೆ ಪ್ರಶ್ನೆ ಉಂಟು ಮಾಡಿದೆ ಎಂದಿದ್ದಾರೆ.
ದೇಶದಲ್ಲಿ ದೆಹಲಿ ಅತ್ಯಾಚಾರ ಪ್ರಕರಣ ಹೈದರಾಬಾದ್ ಅತ್ಯಾಚಾರ ಪ್ರಕರಣ ಹೀಗೆ ಅತ್ಯಾಚಾರಗಳಿಗೆ ಕೊನೆಯೇ ಇಲ್ಲದಂತೆ ಆಗಿದೆ. ಅದರಲ್ಲೂ ಉತ್ತರ ಪ್ರದೇಶದ ಪ್ರಕರಣವು ತೀವ್ರ ರಾಕ್ಷಸ ಪ್ರವೃತ್ತಿಯಂತೆ ಕಾಣುತ್ತಿದ್ದು, ಮನುಕುಲಕ್ಕೆ ಸಂಕಟವಾಗಿದೆ ಎಂದಿದ್ದಾರೆ.
ಈ ಪ್ರಕರಣದಲ್ಲಿ ಬಂಧಿತರಾಗಿರುವ ನಾಲ್ವರು ಆರೋಪಿಗಳಿಗೆ ಕಾನೂನಿನ ರೀತಿಯಲ್ಲಿ ಕಠಿಣ ಶಿಕ್ಷೆಯನ್ನು ನೀಡಿ ಹಾಗೂ ದೇಶದಲ್ಲಿ ಇಂಥ ಪ್ರಕರಣಗಳು ಮತ್ತೆ ಮರುಕಳಿಸದಂತೆ ಸರಕಾರಗಳು ಬಲವಾದ ಕಾನೂನು ಹಾಗೂ ವ್ಯವಸ್ಥೆಯನ್ನು ಬಲಪಡಿಸಬೇಕು ಎಂದು ಕಮಿಟಿ ಆಗ್ರಹಿಸಿದೆ.

ಕಮಿಟಿ ಪದಾದಿಕಾರಿಗಳು


ತನಿಖೆಯ ಭರವಸೆ ನೀಡಿರುವ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ತನಿಖೆಗೆ ಎಸ್ ಐ ಟಿ ರಚಿಸಲು ಮುಂದಾಗಿರುವುದು ಶ್ಲಾಘನೀಯ. ಹಾಗೆಯೇ ಆದಷ್ಟು ಬೇಗ ತನಿಖೆ ಮುಗಿಸಿ ಸೂಕ್ತ ಕಾನೂನು ಕ್ರಮಕ್ಕೆ ಮುಂದಾಗಬೇಕಿದೆ.
ತನಿಖೆ ನಡೆಯದಿದ್ದರೆ ಮುಂದಿನ ದಿನಗಳಲ್ಲಿ ಜನರೇ ಆರೋಪಿಗಳನ್ನು ಸೆದೆಬಡಿಯುವ ಕಾಲ ಬರುತ್ತದೆ. ಯಾವುದೇ ಸರ್ಕಾರಗಳು ಅಂತಹ ಉಗ್ರವಾದಕ್ಕೆ ಅವಕಾಶ ನೀಡದೇ ಸೂಕ್ತ ಕ್ರಮ ಕೈಗೊಳ್ಳಲು ಮುಂದಾಗಬೇಕು ಎಂದು ವಿನಂತಿಸುತ್ತದೆ.
ಈ ಸಂದರ್ಭದಲ್ಲಿ ಮಾನವ ಹಕ್ಕುಗಳ ಕಮಿಟಿಯ ರಾಜ್ಯಾಧ್ಯಕ್ಷ ಕೆ ನಾಗರಾಜ್, ರಾಜ್ಯ ಮಾಧ್ಯಮ ಸಲಹೆಗಾರ ಗಜೇಂದ್ರ ಸ್ವಾಮಿ, ಜಿಲ್ಲಾ ಅಧ್ಯಕ್ಷ ದಯಾನಂದ್ ಎಸ್. ವಿ., ಪ್ರಮುಖರಾದ ಶಾರದಾ ಶೇಷಗಿರಿ ಗೌಡ, ಅಣ್ಣಪ್ಪ , ಆರ್. ರಮೇಶ್, ವಿನೋದ್, ಹರೀಶ್, ನಾಗರಾಜ್ ಹಾಗೂ ರಮೇಶ್ ಬಸಪ್ಪ ಹಾಗೂ ಇತರರಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!