ಅಡಿಕೆ ರೋಗಗಳ ನಿಯಂತ್ರಣಕ್ಕೆ ಸಂಶೋಧನಾ ಕೇಂದ್ರ ಆರಂಭಿಸಬೇಕು. ಎಂದು ಕೃಷಿ ವಿಜ್ಞಾನಿ ಪ್ರೊ.ಪ್ರಕಾಶ್ ಕಮ್ಮರಡಿ ಹೇಳಿದರು.
ಅವರು ಇಂದು ಎಪಿಎಂಸಿಯಲ್ಲಿನ ಅಡಿಕೆ ವರ್ತಕರ ಸಂಘದ ಸಭಾಂಗಣದಲ್ಲಿ ಅಡಿಕೆ ವರ್ತಕರು ಮತ್ತು ಬೆಳೆಗಾರರ ಜೊತೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ ಸಂಶೋಧನಾ ಕೇಂದ್ರ ಸ್ಥಾಪಿಸಲು ಬೇಕಾದರೆ ರೈತರಿಂದಲೂ ಸೆಸ್ ರೂಪದಲ್ಲಿ ಶುಲ್ಕ ಸಂಗ್ರಹಿಸಿ ಸರ್ಕಾರ ಮತ್ತು ರೈತರ ಸಹಭಾಗಿತ್ವದಲ್ಲಿ ನಡೆಸಬಹುದು ಎಂದರು.


ಅಡಿಕೆ ಎಲೆ ಚುಕ್ಕೆ ರೋಗ ಕೊರೋನ ಸಾಂಕ್ರಾಮಿಕ ಇದ್ದಂತೆ. ಅದಕ್ಕೂ ರೋಗ ಕಾಣಿಸಿಕೊಂಡಿರುವ ಕಡೆ ಸಾಮೂಹಿಕ ಚಿಕಿತ್ಸಾ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ ಎಂದು ಅಡಿಕೆ ಎಲೆ ಚುಕ್ಕೆ ರೋಗ ಹೊಸದೇನೂ ಅಲ್ಲ. ಹಿಂದೆಯೂ ಇತ್ತು. ಮುಂದೆಯೂ ಇರಲಿದೆ. ಆದರೆ ರೋಗ ಕಾಣಿಸಿಕೊಂಡಿರುವ ಕಡೆ ಒಬ್ಬ ರೈತರು ಔ?ಧಿ ಸಿಂಪರಣೆ ಮಾಡಿ, ಮತ್ತೊಬ್ಬರು ಸುಮ್ಮನೇ ಇದ್ದರೆ ಆಗುವುದಿಲ್ಲ. ಇದು ಕೂಡ ಕೊರೋನ ಸಾಂಕ್ರಾಮಿಕ ರೋಗ ಇದ್ದಂತೆ. ಹಾಗಾಗಿ ಸಾಮೂಹಿಕ ಚಿಕಿತ್ಸಾ ಕ್ರಮಗಳನ್ನು ಕೈಗೊಳ್ಳಬೇಕು. ಇದನ್ನೂ ಕೂಡ ಸರ್ಕಾರವೇ ಮಾಡಿದರೆ ಇನ್ನೂ ಉತ್ತಮ. ಡ್ರೋಣ್ ಮೂಲಕ ಸಿಂಪರಣೆ ಕೈಗೊಳ್ಳಬಹುದಾಗಿದೆ ಎಂದರು.


ಎಲೆ ಚುಕ್ಕೆ ರೋಗ ಅಡಿಕೆ ತೋಟಗಳನ್ನೇ ಆಹುತಿ ತೆಗೆದುಕೊಳ್ಳುತ್ತಿರಲು ಪ್ರಮುಖ ಕಾರಣ ಬದಲಾಗಿರುವ ಹವಾಮಾನ. ಹಿಂದೆಲ್ಲಾ ಜೂನ್ ತಿಂಗಳಿನಲ್ಲಿ ಮಳೆಗಾಲ ಆರಂಭವಾಗಿ ಅಕ್ಟೋಬರ್ ವೇಳೆಗೆ ಮಳೆ ಮುಗಿಯುತ್ತಿತ್ತು ಈಗ ಹಾಗೆ ಆಗುತ್ತಿಲ್ಲ. ಮೇ ತಿಂಗಳಿನಿಂದ ಆರಂಭವಾಗಿ ಜನವರಿ ತಿಂಗಳವರೆಗೂ ಮಳೆ ಸುರಿಯುತ್ತಿದೆ. ವಾತಾವರಣದಲ್ಲಿ ತೇವಾಂಶ ಹೆಚ್ಚಾದರೆ ಅಡಿಕೆ ಎಲೆ ಚುಕ್ಕೆ ರೋಗದ ಶಿಲೀಂದ್ರ ಬೆಳವಣಿಗೆಗೆ ಸಹಾಯ ಆಗುತ್ತದೆ. ಬಿಸಿಲು ಬಿದ್ದರೆ ಈ ರೋಗ ತಾನಾಗಿಯೇ ಹತೋಟಿಗೆ ಬರುತ್ತದೆ.

ಇದರ ಜೊತೆಗೆ ಮಣ್ಣಿನ ನಿರ್ವಹಣೆಯೂ ಮುಖ್ಯ. ಮಣ್ಣಿನ ಪಿಹೆಚ್ ೫ ರಿಂದ ೬ ಇರಬೇಕು. ಅದಕ್ಕಿಂತ ಹೆಚ್ಚಾದರೆ ಗಿಡಗಳಿಗೆ ಪೂರಕ ಅಲ್ಲ. ಗಿಡಗಳು ಸುಲಭವಾಗಿ ಉಸಿರಾಡುವಂತೆ ಮಾಡಿಕೊಡಬೇಕು ಎಂದರು.


ಈ ಸಂದರ್ಭದಲ್ಲಿ ಪ್ರಮುಖರಾದ ಡಿ.ಎಂ.ಶಂಕರಪ್ಪ, ಕಿಮ್ಮನೆ ಜಯರಾಂ, ದೇವಕುಮಾರ್, ಮಾದೇಶ ಹೆಗ್ಡೆ, ಹೊಸ್ತೋಟ ಮಂಜುನಾಥ, ಕೆ.ಟಿ.ಗಂಗಾಧರ, ಅನಿಲ್‌ಕುಮಾರ್, ನೇತ್ರಾವತಿ, ಚಿದಂಬರರಾವ್ ಇನ್ನಿತರರು ಹಾಜರಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!