ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬ ಪ್ರಜೆಯೂ ಪ್ರಭುವೇ ಆಗಿದ್ದಾನೆ ಪ್ರಜೆಗಳ ಬೇಡಿಕೆ ಈಡೇರಿಸುವುದು ಸರ್ಕಾರದ ಕರ್ತವ್ಯ ಎಂದು ಕಾಂಗ್ರೆಸ್ ನಾಯಕ ಕಾಗೋಡು ತಿಮ್ಮಪ್ಪ ಹೇಳಿದ್ದಾರೆ.
ಅವರು ಇಂದು ಈಡಿಗರ ಭವನದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ, ಶರಾವತಿ ಮುಳುಗಡೆ ಸಂತ್ರಸ್ತರ ಜಾಗೃತಿ ಸಮಿತಿ ಶಿವಮೊಗ್ಗ ವತಿಯಿಂದ ಹಮ್ಮಿಕೊಂಡಿದ್ದ ಶರಾವತಿ ಮುಳುಗಡೆ ಸಂತ್ರಸ್ತರ ಹಾಗು ಕಾಂಗ್ರೆಸ್ ಮುಖಂಡರ ಪೂರ್ವಭಾವಿ ಸಭೆ ಉದ್ಘಾಟನೆಗು ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದರು.
ನಾಡಿಗೆ ಬೆಳಕು ಕೊಟ್ಟ ಶರಾವತಿ ಸಂತ್ರಸ್ತರಿಗೆ ಇನ್ನು ಸೌಲಭ್ಯಗಳು ಸಿಕ್ಕಿಲ್ಲ. ಇದು ಘೋರ ದುರಂತ. ಕಾಂಗ್ರೆಸ್ ಕಾರ್ಯಕರ್ತರು ಈ ಬಗ್ಗೆ ಹೋರಾಟ ನಡೆಸಿ ಅಂತಿಮ ರೂಪ ನೀಡಲು ನಿಶ್ಚಯಿಸಿದ್ದು, ಅವರ ಹೋರಾಟಕ್ಕೆ ನಾನು ಕೂಡ ಬೆಂಬಲಿಸುತ್ತಿದ್ದೇನೆ.
ಪ್ರಜಾಪ್ರಭುತ್ವ ವಿರೋಧಿ ನೀತಿ ಜನ ಸಹಿಸಲ್ಲ. ಅಧಿಕಾರ ಸಿಕ್ಕ ಕೂಡಲೆ ಕೆಲವರಿಗೆ ಕಣ್ಣು ಆಕಾಶಕ್ಕೆ ಹೋಗುತ್ತದೆ. ಜನ ಸಾಮಾನ್ಯರಿಗೆ ಮೂಲಭೂತ ಸೌಲಭ್ಯ ಒದಗಿಸುವುದು ಸರ್ಕಾರದ ಕರ್ತವ್ಯ. ಆತನ ರಕ್ಷಣೆ ಸರ್ಕಾರ ಮಾಡಲೇಬೇಕು. ಶರಾವತಿ ಸಂತ್ರಸ್ತರಿಗೆ ಹಕ್ಕುಪತ್ರ ಸೇರಿದಂತೆ ಅವರಿಗೆ ಅನುಕೂಲ ವಾತಾವರಣ ಸರ್ಕಾರ ಕಲ್ಪಿಸಬೇಕು ಎಂದರು.
ಸಾಗರ ಕ್ಷೇತ್ರದ ಚುನಾವಣೆಗೆ ಸ್ಪರ್ಧಿಸುತ್ತೀರ ಎಂಬ ಪ್ರಶ್ನೆಗೆ ಆ ರೀತಿ ಯೋಚನೆ ಮಾಡಿಲ್ಲ. ಸ್ವಾಭಾವಿಕವಾಗಿ ಅರ್ಜಿ ಸಲ್ಲಿಸಿದ್ದೇನೆ. ಮಗಳಿಗು ಆಸಕ್ತಿಯಿದೆ. ನಮ್ಮ ಮನೆಯೊಳಗೆ ಯಾವುದೇ ಸ್ಪರ್ಧೆಯಿಲ್ಲ. ಹಲವಾರು ಜನ ಅರ್ಜಿ ಹಾಕಿರಬಹುದು. ಪಕ್ಷದ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿಕೊಂಡು ಬಂದವರು ನಾಯಕರೆನಿಸಿಕೊಳ್ಳುತ್ತಾರೆ. ಅವರಿಗೆ ಪಕ್ಷ ಟಿಕೆಟ್ ನೀಡುತ್ತದೆ. ಜನರ ಕೆಲಸ ಮಾಡಿದವರನ್ನು ಜನರು ಗೆಲ್ಲಿಸುತ್ತಾರೆ ಎಂದರು.
ಸೊರಬ ಕ್ಷೇತ್ರಕ್ಕೆ ಮುಖ್ಯಮಂತ್ರಿಗಳ ಭೇಟಿ ಹಾಗೂ ಜನಸಂಕಲ್ಪ ಯಾತ್ರೆಯ ಬಗ್ಗೆ ನನಗೆ ಗೊತ್ತಿಲ್ಲ ಬಿಜೆಪಿಯ ಉದ್ದೇಶ ಏನಿದೆಯೋ ಗೊತ್ತಿಲ್ಲ. ಎಲ್ಲಾ ಜಿಲ್ಲೆಗಳಲ್ಲೂ ಕಾರ್ಯಕ್ರಮ ರೂಪಿಸಿದ್ದಾರೆ ಎಂಬ ಮಾಹಿತಿಯಿದೆ.
ಕಳೆದ ಬಾರಿ ನಾನು ಇದೇ ಕೊನೆ ಚುನಾವಣೆ ಎಂದು ಹೇಳಿಲ್ಲ. ನನಗೆ ಕಳೆದ ಬಾರಿ ಜನರೆ ಒತ್ತಾಯ ಪೂರ್ವಕವಾಗಿ ನಿಲ್ಲಿಸಿದ್ದರು. ಆದರೆ ಗೆಲ್ಲಿಸಿಲ್ಲ. ಪಕ್ಷದ ತೀರ್ಮಾನ ಅಂತಿಮ. ಯಾರನ್ನು ಗೆಲ್ಲಿಸಬೇಕೆಂಬುದು ಜನರೆ ತೀರ್ಮಾನಿಸುತ್ತಾರೆ. ಸಹಜವಾಗಿ ಕಾಂಗ್ರೆಸ್‍ನಲ್ಲಿ ಸ್ಪರ್ಧಾಕಾಂಕ್ಷಿಗಳ ಸಂಖ್ಯೆ ಜಾಸ್ತಿಯಿದೆ. ನಾನು ಮೊದಲೆ ನಿಲ್ಲುತ್ತೇನೆ ಎಂದು ಹೇಳಿದ್ದರೆ ಯಾರೂ ಕೂಡ ಅರ್ಜಿ ಹಾಕುವುದಿಲ್ಲ ಎಂಬುದು ಸುಳ್ಳು. ನಾನು ಹೇಳಿದರೂ ಹೇಳದಿದ್ದರೂ ಈಗಿನ ಕಾಲದಲ್ಲಿ ಎಲ್ಲರೂ ಆಕಾಂಕ್ಷಿಗಳೆ. ಪ್ರಜಾಪ್ರಭುತ್ವದಲ್ಲಿ ಅವೆಲ್ಲ ಸಾಮಾನ್ಯ ಎಲ್ಲಾ ನಾಯಕರಿಗೂ ಸ್ಪರ್ಧಿಸುವ ಹಕ್ಕಿದೆ ಎಂದರು.
ಈ ಸಂದರ್ಭದಲ್ಲಿ ಎನ್.ರಮೇಶ್, ವಿಜಯ್‍ಕುಮಾರ್, ಕಲಗೋಡು ರತ್ನಾಕರ್, ಆರ್.ಪ್ರಸನ್ನ ಕುಮಾರ್ ಬೇಳೂರು ಗೋಪಾಲಕೃಷ್ಣ ಉಪಸ್ಥಿತರಿದ್ದರು.