ಕಾರ್ಖಾನೆಯ ಒಳನೋಟ


ಶಿವಮೊಗ್ಗ, ಸೆ.09:
ಭದ್ರಾವತಿಯಲ್ಲಿರುವ ಮೈಸೂರು ಪೇಪರ್ ಮಿಲ್ಸ್ ನವೀಕರಣ, ನಿರ್ವಹಣೆಗೆ ರಾಜ್ಯ ಸರ್ಕಾರ ಟೆಂಡರ್ ಆಹ್ವಾನಿಸಿದೆ. ಈ ಮೂಲಕ ಖಾಸಗಿಗೆ ವಹಿಸಲು ಮೊದಲ ಹೆಜ್ಜೆ ಇಟ್ಟಂತಾಗಿದೆ.
ಸೆಪ್ಟೆಂಬರ್ 2ರಂದು ರಾಜ್ಯ ಸರ್ಕಾರ ಟೆಂಡರ್ ಅಧಿಸೂಚನೆ ಹೊರಡಿಸಿದೆ. ಸೆ.12ರ ತನಕ ಟೆಂಡರ್ ಸಲ್ಲಿಕೆಗೆ ಅವಕಾಶ ನೀಡಲಾಗಿದೆ. ಸ್ಥಳೀಯ ಮತ್ತು ಜಾಗತಿಕವಾಗಿ ಯಾರು ಬೇಕಾದರೂ ಟೆಂಡರ್ ಸಲ್ಲಿಕೆ ಮಾಡಲು ಅವಕಾಶ ನೀಡಲಾಗಿದೆ.
ಸರ್ಕಾರ ಕೆಲವು ಷರತ್ತುಗಳನ್ನು ವಿಧಿಸಿದೆ. ಟೆಂಡರ್ ಪ್ರಕ್ರಿಯೆ ಅಂತಿಮಗೊಂಡ ಬಳಿಕ ಆಯ್ಕೆಯಾಗುವ ಕಂಪನಿ ಜೊತೆ ಮಾತುಕತೆ ನಡೆಸುವಾಗ ಸಣ್ಣ-ಪುಟ್ಟ ಬದಲಾವಣೆಗಳನ್ನು ಮಾಡಲಾಗುತ್ತದೆ. 4 ವರ್ಷಗಳ ಬಳಿಕ ಎಂಪಿಎಂ ಕಾರ್ಖಾನೆ ಪುನಃ ಆರಂಭವಾಗುವ ನಿರೀಕ್ಷೆ ಹುಟ್ಟಿದೆ.


ಮೈಸೂರು ಪೇಪರ್ ಮಿಲ್ಸ್ (ಎಂಪಿಎಂ) ಕಾರ್ಖಾನೆ ಮತ್ತು ಭೂಮಿ ಎಂಪಿಎಂ ಹೆಸರಿನಲ್ಲಿಯೇ ಇರಲಿದೆ. ನವೀಕರಣಕ್ಕೆ ಟೆಂಡರ್ ಪಡೆಯುವ ಕಂಪನಿ ಕಾರ್ಮಿಕರ ನೇಮಕ, ವೇತನ, ಎಲ್ಲವನ್ನೂ ನಿರ್ವಹಣೆ ಮಾಡಬೇಕಿದೆ. ಸುಮಾರು 1 ಸಾವಿರ ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆ ಇದೆ.
ಟೆಂಡರ್ ಪಡೆಯುವ ಕಂಪನಿ ನವೀಕರಣಕ್ಕೆ ಕನಿಷ್ಠ 1ಸಾವಿರ ಕೋಟಿ ಹೂಡಿಕೆ ಮಾಡಬೇಕು. ಆರಂಭದಲ್ಲಿ 1 ಸಾವಿರ ಉದ್ಯೋಗ ಸೃಷ್ಟಿಯಾಗಬೇಕು. ಟೆಂಡರ್ ಪ್ರಕ್ರಿಯೆಗಳು ಅಂತ್ಯಗೊಂಡ 3ತಿಂಗಳಿನಲ್ಲಿ ಉತ್ಪಾದನೆ ಆರಂಭಿಸಬೇಕು.
ಎಂಪಿಎಂ ವಾರ್ಷಿಕ ಸುಮಾರು 450ಕೋಟಿ ರೂ. ವಹಿವಾಟು ಮಾಡುತ್ತಿತ್ತು. 600ಕೋಟಿ ರೂ. ನಷ್ಟವಾಗಿದೆ ಎಂಬ ನೆಪವನ್ನು ಹೇಳಿ 4ವರ್ಷಗಳ ಹಿಂದೆ ಕಾರ್ಖಾನೆ ಮುಚ್ಚಲಾಗಿದೆ. ಈಗ ರಾಜ್ಯ ಸರ್ಕಾರ ವಿಶೇಷ ಆಸಕ್ತಿವಹಿಸಿ ಟೆಂಡರ್ ಕರೆದಿದೆ ಎನ್ನಲಾಗಿದೆ.
ಖಾಸಗೀಕರಣಕ್ಕೆ ವಿರೋಧ: ಎಸ್. ಎಂ. ಕೃಷ್ಣ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದಾಗ ಎಂಪಿಎಂ ಖಾಸಗೀಕರಣ ಮಾಡುವ ಪ್ರಸ್ತಾಪ ಕೇಳಿ ಬಂದಿತ್ತು. ಆಗ ಸಚಿವರಾಗಿದ್ದ ಕಾಗೋಡು ತಿಮ್ಮಪ್ಪ ವಿರೋಧ ವ್ಯಕ್ತಪಡಿಸಿದ್ದರು.
ಕಾರ್ಖಾನೆಯನ್ನು ಸರ್ಕಾರಕ್ಕೆ ನಡೆಸಲು ಸಾಧ್ಯವಾಗದಿದ್ದರೆ ಖಾಸಗಿ ಅವರಿಗೆ ವಹಿಸಿ ಎಂದು ಕಾರ್ಮಿಕರು ಮನವಿ ಮಾಡಿದ್ದರು. ಮುಚ್ಚಿದ ಕಾರ್ಖಾನೆಯನ್ನು ತೆಗೆದು, ಕಾರ್ಮಿಕರಿಗೆ ಕೆಲಸ ನೀಡಬೇಕು ಎಂದು ಒತ್ತಾಯಿಸಿದ್ದರು.
ಭದ್ರಾವತಿಯಲ್ಲಿ ಎಂಪಿಎಂ ಕಾರ್ಖಾನೆ ಮತ್ತು ಅದರ ಟೌನ್ ಶಿಪ್ ಭೂಮಿ ಸುಮಾರು ೫೦೦ ಎಕರೆಯಷ್ಟಿದೆ. ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯಲ್ಲಿ ೭೫ ಸಾವಿರ ಎಕರೆ ಭೂಮಿಯನ್ನು ಕಾಗದ ಉತ್ಪಾದನೆಯ ಪ್ರಮುಖ ಕಚ್ಚಾ ವಸ್ತು ಅಕೇಶಿಯಾ ಬೆಳೆಯಲು ಗುತ್ತಿಗೆ ಆಧಾರದಲ್ಲಿ ನೀಡಲಾಗಿತ್ತು.

(one India)

By admin

ನಿಮ್ಮದೊಂದು ಉತ್ತರ

error: Content is protected !!