
ಶಿವಮೊಗ್ಗ: ಮಾನವ ಹಕ್ಕುಗಳ ಹೋರಾಟ ಸಮಿತಿಯಿಂದ ಕಳೆದ 30 ವರ್ಷಗಳಿಂದ ಕೆಲಸ ಮಾಡುತ್ತಿರುವ ಅಧ್ಯಕ್ಷ ಬಿ.ಎನ್. ರಾಜು ಅವರಿಗೆ ಮಾ. 14 ರಂದು ಸಂಜೆ 4 ಗಂಟೆಗೆ ಭದ್ರಾವತಿಯ ಅಕ್ಕಮಹಾದೇವಿ ಸಮುದಾಯ ಭವನದಲ್ಲಿ ಅಭಿನಂದನಾ ಸಮಾರಂಭ ಆಯೋಜಿಸಲಾಗಿದೆ ಎಂದು ಸಮಿತಿಯ ಪ್ರಧಾನ ಕಾರ್ಯದರ್ಶಿ ಅಕ್ರಂ ಖಾನ್ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬಿ.ಎನ್. ರಾಜು ಅವರು ಸಮಿತಿಯ ಕೇಂದ್ರಬಿಂದುವಾಗಿದ್ದಾರೆ. ಕಳೆದ 30 ವರ್ಷಗಳಿಂದ ಬಡಜನರ ಪರವಾಗಿ ಹಗಲಿರುಳು ನಿರಂತರ ಕೆಲಸ ಮಾಡುತ್ತಿದ್ದಾರೆ. ದೀನ ದಲಿತರು, ರೈತರು, ಕಾರ್ಮಿಕರು, ಬೀದಿ ವ್ಯಾಪಾರಿಗಳು,ಆಟೋ ಚಾಲಕರು, ವಿದ್ಯಾರ್ಥಿಗಳು ಹೀಗೆ ಹಲವು ಕ್ಷೇತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಇಂತಹ ಸಮಾಜ ಸೇವೆ ಮಾಡುತ್ತಿರುವ ಅವರನ್ನು ಗೌರವಿಸುವುದು ನಮ್ಮ ಕರ್ತವ್ಯವಾಗಿದೆ ಎಂದರು.

ಬಿ.ಎನ್. ರಾಜು ಪ್ರಮುಖವಾಗಿ ಎಂಪಿಎಂ ಮತ್ತು ವಿಐಎಸ್ಎಲ್ ಕಾರ್ಖಾನೆಗಳನ್ನು ಉಳಿಸಲು ಕೆಲಸ ಮಾಡಿದವರಾಗಿದ್ದಾರೆ. ಭದ್ರಾವತಿಯಲ್ಲಿ ನೀರು, ರಸ್ತೆ, ಚರಂಡಿ, ಸಂತೆಮೈದಾನ ಇತರ ಮೂಲ ಸೌಕರ್ಯಗಳಿಗಾಗಿ ಹೋರಾಟ ಮಾಡಿದ್ದಾರೆ. ಕಳ್ಳತನ ತಪ್ಪಿಸಲು ಪೊಲೀಸರ ಸಹಕಾರದಲ್ಲಿ ಕ್ರಮಕೈಗೊಂಡಿದ್ದಾರೆ. ಕಳಪೆ ಕಾಮಗಾರಿಗಳ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ತಿಮ್ಮಯ್ಯ ಮಾರ್ಕೆಟ್ ನೆಲಸಮ ಮಾಡಿದಾಗ ಅಲ್ಲಿನ ವ್ಯಾಪಾರಿಗಳ ಪರವಾಗಿ ಹಲವು ದಿನಗಳವರೆಗೆ ಹೋರಾಟ ಮಾಡಿ ಅದನ್ನು ಯಶಸ್ವಿಗೊಳಿಸಿದ್ದಾರೆ. ಹೀಗೆ ಜನಾನುರಾಗಿಯಾಗಿರುವ ಅವರನ್ನು ಸನ್ಮಾನಿಸಲಾಗುವುದು ಎಂದರು.

ಕಾರ್ಯಾಧ್ಯಕ್ಷ ಐ.ಎಲ್. ಅರುಣ್ ಕುಮಾರ್ ಮಾತನಾಡಿ, ಅಭಿನಂದನಾ ಸಮಾರಂಭವನ್ನು ಜೆಡಿಎಸ್ ಪಕ್ಷದ ಮುಖಂಡರಾದ ಶಾರದಾ ಎಂ.ಜೆ. ಅಪ್ಪಾಜಿ ಉದ್ಘಾಟಿಸುವರು. ಜಿಪಂ ಮಾಜಿ ಸದಸ್ಯ ಮಣಿಶೇಖರ್ ಅಧ್ಯಕ್ಷತೆ ವಹಿಸುವರು. ಕಾರ್ಮಿಕ ಮುಖಂಡ ಡಿ.ಸಿ. ಮಾಯಣ್ಣ ಪ್ರಶಸ್ತಿ ಪ್ರದಾನ ಮಾಡುವರು. ರೈತ ಸಂಘದ ರಾಜ್ಯಾಧ್ಯಕ್ಷ ಕೆ.ಟಿ. ಗಂಗಾಧರ್, ಶಾಸಕ ಬಿ.ಕೆ. ಸಂಗಮೇಶ್, ಮಾಜಿ ಶಾಸಕ ವೈ.ಎಸ್.ವಿ. ದತ್ತ, ನಗರಸಭೆ ಮಾಜಿ ಅಧ್ಯಕ್ಷ ಆರ್. ಕರುಣಾಮೂರ್ತಿ ಮೊದಲಾದವರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಮಿತಿ ಪದಾಧಿಕಾರಿಗಳಾದ ಬ್ರಹ್ಮಲಿಂಗಯ್ಯ, ಶೇಖರ್, ಶ್ರೀನಿವಾಸ್, ಪೀರ್ ಸಾಹೇಬ್, ರಂಗಪ್ಪ, ನಾರಾಯಣ್, ಬಸವರಾಜ್ ಮೊದಲಾದವರಿದ್ದರು.