ಶಿವಮೊಗ್ಗ, ಡಿ.30:
ಒಂದು ಚಿಕ್ಕ ವಿಷಯ, ಅನಗತ್ಯವಾದ ಚಿಕ್ಕ ಜಗಳ, ಬದುಕು ಕಟ್ಟಿಕೊಳ್ಳಬೇಕಾದ ಯುವಕ ಬದುಕನ್ನೇ ಕಳೆದುಕೊಂಡು ಜೈಲಲ್ಲಿ ಮುದ್ದೆ ಮುರಿಯಬೇಕಾದ ಪರಿಸ್ಥಿತಿ. ಇದು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪದ ಘಟನೆಯಿದು.
ಪೊಲೀಸ್ ಇಲಾಖೆ ವಿವರ
ಸೈಯದ್ ಜಾಫರ್ ಮುಲ್ಲಾ 26 ವರ್ಷ ಶಿರಾಳಕೊಪ್ಪ, ಈತನು ಶಿರಾಳಕೊಪ್ಪ ಟೌನ್ ಶ್ರೀ ಜಯಕರ್ನಾಟಕ ರೈಸ್ ಮಿಲ್ ಎದುರು ಕಬ್ಬಿನ ಹಾಲಿನ ಜ್ಯೂಸ್ ಅಂಗಡಿ ಹಾಕಿಕೊಂಡಿದ್ದು, ಈ ಅಂಗಡಿಗೆ ಬರುವ ಗ್ರಾಹಕರು ಬೈಕ್ ಗಳನ್ನು ಜಾವಿದ್ ಬೇಗ್ ನ ಕುಷನ್ ಅಂಗಡಿಯ ಮುಂಭಾಗ ನಿಲ್ಲಿಸುತ್ತಿರುವುದರಿಂದ ಸರಿಯಾಗಿ ವ್ಯಾಪಾರವಾಗುತ್ತಿಲ್ಲ ಅಂಗಡಿಯನ್ನು ಇಲ್ಲಿಂದ ತೆಗಿ ಎಂದು ಕುಷನ್ ಅಂಗಡಿ ಮಾಲೀಕ ಜಾವಿದ್ ಬೇಗ್ ನು ಹಲವು ಬಾರಿ ಗಲಾಟೆ ಮಾಡುತ್ತಿದ್ದು, ಇದೇ ವಿಚಾರವಾಗಿ ದಿನಾಂಕ:06-11-2019 ರಂದು ಸಂಜೆ ಜಾವಿದ್ ಬೇಗ್ ನು ಸೈಯದ್ ಜಾಫರ್ ಮುಲ್ಲಾ ನೊಂದಿಗೆ ಮತ್ತೆ ಜಗಳ ಮಾಡಿ ತನ್ನ ಬಳಿ ಇದ್ದ ಚಾಕುವಿನಿಂದ ಹೊಟ್ಟೆ ಎದೆ ಮತ್ತು ಕುತ್ತಿಗೆಗೆ ಹಲ್ಲೆ ಮಾಡಿ ಕೊಲೆ ಮಾಡಿರುತ್ತಾನೆಂದು ಮೃತನ ಸಹೋದರ ನೀಡಿದ ದೂರಿನ ಮೇರೆಗೆ ಶಿರಾಳಕೊಪ್ಪ ಪೊಲೀಸ್ ಠಾಣೆಯಲ್ಲಿ ಗುನ್ನೆ ಸಂಖ್ಯೆ 0136/2019 ಕಲಂ 504, 506, 302 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಲಾಗಿರುತ್ತದೆ.
ಅಂದಿನ ಬಸವರಾಜ್ ಸಿಪಿಐ ಶಿಕಾರಿಪುರ ವೃತ್ತ ರವರು ಸದರಿ ಪ್ರಕರಣದ ತನಿಖೆಯನ್ನು ಕೈಗೊಂಡು ಆರೋಪಿ ಜಾವಿದ್ ಬೇಗ್ 20 ವರ್ಷ ಉಡುಗಣಿ ಶಿಕಾರಿಪುರ, ಈತನನ್ನು ದಸ್ತಗಿರಿ ಮಾಡಿ, ಈತನ ವಿರುದ್ಧ ಘನ ನ್ಯಾಯಾಲಯಕ್ಕೆ ದೋಷಾರೋಪಣ ಪತ್ರವನ್ನು ಸಲ್ಲಿಸಿರುತ್ತಾರೆ. ಪ್ರಕರಣದಲ್ಲಿ ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಶ್ರೀ ಸುರೇಶ್ ಕುಮಾರ್ ವಾದ ಮಂಡಿಸಿದ್ದು, Principal District and Session court Shivamogga ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆದು ನ್ಯಾಯಾಧೀಶರಾದ ಮುಸ್ತಫಾ ಹುಸೇನ್ ಎಸ್.ಎ.ಅವರು ದಿನಾಂಕ 30-12-2021 ರಂದು ಆರೋಪಿತನ ವಿರುದ್ಧ ಕಲಂ 302 ಐಪಿಸಿ ಕಾಯ್ದೆ ಅಡಿಯಲ್ಲಿ ಆರೋಪ ದೃಢಪಟ್ಟ ಹಿನ್ನೆಲೆಯಲ್ಲಿ ಆರೋಪಿಗೆ ಜೀವಾವಧಿ ಶಿಕ್ಷೆ ಮತ್ತು 50,000/- ರೂ ದಂಡ, ದಂಡವನ್ನು ಕಟ್ಟದಿದ್ದರೆ ಹೆಚ್ಚುವರಿಯಾಗಿ 06 ತಿಂಗಳು ಕಾರವಾಸ ಶಿಕ್ಷೆ ಹಾಗೂ ದಂಡದ ಮೊತ್ತದಲ್ಲಿ 45,000/- ರೂ ಗಳನ್ನು ಅವಲಂಬಿತರಿಗೆ ಪರಿಹಾರವಾಗಿ ನೀಡಲು ಆದೇಶ ನೀಡಿರುತ್ತಾರೆ.


