ಶಿವಮೊಗ್ಗ: ದೈನಂದಿನ ವ್ಯವಹಾರಗಳಲ್ಲಿ ವರ್ತಕರು ಇ-ವೇ ಬಿಲ್ ಗಳನ್ನು ಸಕಾಲದಲ್ಲಿ ಸರಿಯಾಗಿ ಅಳವಡಿಸಿಕೊಂಡು ಡಂಡ ತಪ್ಪಿಸಿಕೊಳ್ಳಬೇಕೆಂದು ವಾಣಿಜ್ಯ ತೆರಿಗೆ ಹೆಚ್ಚುವರಿ ಆಯುಕ್ತ ಡಾ. ಮರುಳೀಕೃಷ್ಣ ತಿಳಿಸಿದರು.

ಅವರು ಇಂದು ನಗರದ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಭಾಂಗಣದಲ್ಲಿ ಸಂಘದ ವತಿಯಿಂದ ಇ-ವೇ ಬಿಲ್ ಮತ್ತು ಜಿ.ಎಸ್.ಟಿ ಮಾಹಿತಿ ಕಾರ್ಯಾಗಾರ ಉದ್ಘಾಟಿಸಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಮಾಹಿತಿ ನೀಡಿದರು.

 ಕರ್ನಾಟಕದಲ್ಲಿ ಇ-ಸುಗಮ್ 2010ರಲ್ಲೇ ಜಾರಿಗೊಳಿಸಿತ್ತು. ಇದೇ ಮಾದರಿಯಲ್ಲೆ ಇ-ವೇ ಬಿಲ್ ಗಳನ್ನು ಅಳವಡಿಸಿಕೊಂಡು ಬರಲಾಗಿದೆ. ಜಿ.ಎಸ್.ಟಿ ಬಂದ ಮೇಲೆ ಸರ್ಕಾರಕ್ಕೆ ಕೊರೋನಾ ಸಂದರ್ಭದಲ್ಲೂ ಆದಾಯ ಹೆಚ್ಚಳವಾಗಿದೆ. ಇ-ವೇ ಬಿಲ್ ಗಳಲ್ಲಿ ನಮೂದಿಸಿದ ಸಾಮಗ್ರಿಗಳ ಆಧಾರದ ಮೇಲೆ ಸಂಪೂರ್ಣ ತೆರಿಗೆಯನ್ನು ಕೊಡಲೇಬೇಕಾಗುತ್ತದೆ ಇದರಿಂದ ತಪ್ಪಸಿಕೊಳ್ಳಲಾಗುವುದಿಲ್ಲ. ಹಿಂದೆ 10 ಸಾವಿರ ರೂಪಾಯಿಗಳ ಸಾಮಗ್ರಿ ವಿಲೇವಾರಿಯಾದಾಗ ಅದನ್ನು ಸಾವಿರ ರೂಪಾಯಿ ಎಂದು ತೋರಿಸುವ ಸಂಭವವಿತ್ತು. ಆದರೆ, ಈಗ ಅದು ಸಾದ್ಯವಿಲ್ಲ ಎಂದು ಹೇಳಿದರು. ಮೊಟಾರು ವಾಹನಗಳಲ್ಲಿ 50 ಸಾವಿರ ರೂ.ಗಳು ಮೇಲ್ಪಟ್ಟ ಯಾವುದೇ ಸಾಮಗ್ರಿಗಳು ಸಾಗಾಟಗೊಂಡಲ್ಲಿ ತೆರಿಗೆ ಸಲ್ಲಿಸುವುದು ಅನಿವಾರ್ಯ. ಜಿ.ಎಸ್.ಟಿ. ಬಂದ ಮೇಲೆ ದೇಶದಲ್ಲಿರುವ ಎಲ್ಲಾ ವಾಣಿಜ್ಯ ಇಲಾಖೆಯ ಚೆಕ್ ಪೋಸ್ಟ್ ಗಳನ್ನು ತೆರವುಗೊಳಿಸಲಾಗಿದೆ. ಅತ್ಯಾಧುನಿಕ ತಾಂತ್ರಿಕತೆ ಅಳವಡಿಸಿಕೊಂಡಿರುವುದರಿಂದ ತೆರಿಗೆ ತಪ್ಪಿಸಿಕೊಳ್ಳುವುದು ಅಸಾಧ್ಯ. ತಾಂತ್ರಿಕತೆ ಅಳವಡಿಸಿಕೊಂಡಿಲ್ಲವಾದಲ್ಲಿ ಜಿ.ಎಸ್.ಟಿ ಅನುಷ್ಟಾನ ಅಸಾಧ್ಯ. ಮಾಹಿತಿ ಎಲ್ಲರ ಬಳಿ ಇದೆ ಅದರೆ, ಅದನ್ನು ತಿಳಿದು ಅರ್ಥೈಸಿಕೊಂಡಾಗ ಅತ್ಯಂತ ಸುಲಭವಾಗುತ್ತದೆ ಎಂದರು.

ಎಲ್ಲದಕ್ಕೂ ಒಂದು ಇತಿಮಿತಿ ಇರುವ ಹಾಗೆ ಜಿ.ಎಸ್.ಟಿ ಕೂಡ ತನ್ನದೇ ಆದ ಇತಿಮಿತಿಯನ್ನು ಹೊಂದಿದೆ. ಬಿಲ್ ಹಾಕಿದರೆ ಯಾವುದೇ ಆತಂಕ ಇರುವುದಿಲ್ಲ. ಕರ್ನಾಟಕ ರಾಜ್ಯದಲ್ಲಿ ಜಿ.ಎಸ್.ಟಿ ತೆರಿಗೆ ಸಂಗ್ರಹ ವರ್ಷಂಪ್ರತಿ ಹೆಚ್ಚಳವಾಗುತ್ತಿದ್ದು, ಕೆಲವೊಂದು ನ್ಯೂನತೆಗಳು ಇರುವುದನ್ನು ನಾವು ಒಪ್ಪ್ಪುತ್ತೇವೆ. ಆದರೆ, ವ್ಯಾಪಾರಸ್ಥರು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಾಗ ಲೋಪವನ್ನು ಸರಿಪಡಿಸುವ ವ್ಯವಸ್ಥೆಯಾಗಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ವಾಸುದೇವ ಮಾತನಾಡಿ, ವ್ಯಾಪಾರಿಗಳು ಸರ್ಕಾರದ ಎಲ್ಲಾ ತೆರಿಗೆ ನೀತಿಯ  ಬದಲಾವಣೆಗೆ ಸಹಕಾರ ಕೊಡುತ್ತಾ ಬಂದಿದ್ದೇವೆ. ಆದರೂ ವ್ಯಾಪಾರಿಗಳನ್ನು ಕಳ್ಳರ ಹಾಗೆ ನೋಡುವ ಪದ್ದತಿಯನ್ನು ಅಧಿಕಾರಿಗಳು ಬಿಡಬೇಕು, ಕಂಪನಿಗಳು 50 ಕೋಟಿ ಮೀರಿದ ಬಿಲ್ ಗಳನ್ನು ವಿತರಕರಿಗೆ ನೀಡುವಲ್ಲಿ ತಾಂತ್ರಿಕ ಲೋಪವಾದಾಗ  ವಿನಾಕಾರಣ ದಂಡವನ್ನು ವಿತರಕರೇ ಭರಿಸುವಂತಾಗಿದೆ. ಅನೇಕ ಸಂದರ್ಭಗಳಲ್ಲಿ ಯಾರದೋ ತಪ್ಪಿಗೆ ಯಾರೋ ದಂಡ ತೆರುವಂತಾಗಿದೆ ಮತ್ತು ಕೆಲವು ಸಂದರ್ಭಗಳಲ್ಲಿ ಮೂವರ ಬಳಿ ಒಟ್ಟು ವ್ಯಾಪಾರದ ಮೊತ್ತ 50 ಸಾವಿರ ಇದ್ದಾಗ ಕೇವಲ ಒಂದೇ ಹೆಸರು ಸ್ವೀಕಾರವಾಗುವ ಅವಕಾಶ ತೆರಿಗೆ ಇಲಾಖೆಯ ಆಪ್ನಲಲ್ಲಿ ಇರುವುದರಿಂದ ಅದಕ್ಕೂ ವಿತರಕರೇ ದಂಡ ತೆರುವ ಪರಿಸ್ಥಿತಿ ಇದ್ದು, ಈ ಲೋಪಗಳನ್ನು ಸರಿಪಡಿಸುವಂತೆ ವಿನಂತಿಸಿದರು. 

ಪ್ರಸ್ತಾವಿಕವಾಗಿ ಮಾತನಾಡಿದ ತೆರಿಗೆ ಸಲಹಾ ಸಮಿತಿ ಚೇರ್ಮನ್ ಮಧುಸೂದನ ಐತಾಳ್, ಹಿಂದಿನ ತೆರಿಗೆ ವಿಧಾನಗಳನ್ನು ಹೋಲಿಸಿದಾಗ ಜಿ.ಎಸ್.ಟಿ ಕಠಿಣತೆ ಹೊಂದಿದೆ. ಮತ್ತು ದಂಡದ ಪ್ರಮಾಣ ಜಾಸ್ತಿ ಇದೆ ಎಂದು ಅನಿಸುತ್ತದೆ. ವ್ಯಾಪಾರಸ್ಥರು ಸಂದರ್ಭಾನುಸಾರ ಇದನ್ನು ಅರಿತುಕೊಂಡು ಹೊಸ ತೆರಿಗೆಯ ಬಗ್ಗೆ ಮಾಹಿತಿಯನ್ನು ಪಡೆಯಬೇಕು. ಇಂತಹ ಕಾರ್ಯಾಗಾರಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಾಗವಹಿಸಿ ಸ್ಪಂದಿಸಬೇಕು ಎಂದರು.

ಸಮಾರಂಭದಲ್ಲಿ ವಾಣಿಜ್ಯ ತೆರಿಗೆಯ ಮಲೆನಾಡು ವಿಭಾಗದ ಜಂಟಿ ಆಯುಕ್ತರಾದ ಕೆ. ಮಂಜುನಾಥ್, ಹಾಗೂ ಅಧಿಕಾರಿಗ ವರ್ಗದವರು ಮತ್ತು ಜಿಲ್ಲಾ ವಾಣಿಜ್ಯ ಸಂಘದ ಎಸ್.ಎಸ್. ಉದಯಕುಮಾರ್, ಡಿ.ಎಸ್. ಅರುಣ್, ಡಿ.ಎಂ.ಶಂಕರಪ್ಪ ಬಿ. ಗೋಪಿನಾಥ್, ಬಿ.ಆರ್. ಸಂತೋಷ್, ಜಿ.ವಿಜಯಕುಮಾರ್, ಡಿ.ಪಿ. ಸಂದೀಪ್, ಪಾಂಡುರಂಗ ಉಪಸ್ಥಿತರಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!