ಶಿವಮೊಗ್ಗ:
ಪ್ರಕೃತಿಯಲ್ಲಿ ದೇವಿಯನ್ನು ಕಾಣುವುದು ನಮ್ಮ ದೇಶದ ಸಂಸ್ಕೃತಿ. ನಮ್ಮ ಸಂಸ್ಕೃತಿ ಮತ್ತು ಸಂಸ್ಕಾರ ಉಳಿಸಬೇಕೆನ್ನುವ ದೃಷ್ಟಿಯಿಂದ ಹಿರಿಯರು ದಸರಾ ಹಬ್ಬದಂತಹ ಹಬ್ಬ ಹರಿದಿನಗಳನ್ನು ಆಚರಿಸುತ್ತಾ ನಮ್ಮ ಸಂಸ್ಕೃತಿ ಮುಂದುವರೆಯಲು ಕಾರಣರಾಗಿದ್ದಾರೆ ಎಂದು ಖ್ಯಾತ ಯಕ್ಷಗಾನ ಕಲಾವಿದರಾದ ಶಿವಕುಮಾರ್ ಬೇಗಾರ್ ಹೇಳಿದ್ದಾರೆ.
ಅವರು ಇಂದು ಶಿವಮೊಗ್ಗದ ಕೋಟೆ ರಸ್ತೆಯ ಶ್ರೀ ಚಂಡಿಕಾ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಶಿವಮೊಗ್ಗ ದಸರಾ ಮಹೋತ್ಸವ – 2021ನ್ನು ಉದ್ಘಾಟಿಸಿ ಮಾತನಾಡಿದರು.
ನಾನೊಬ್ಬ ಯಕ್ಷಗಾನ ಕಲಾವಿದ. ಹತ್ತು ಸಾವಿರಕ್ಕೂ ಹೆಚ್ಚು ಪ್ರಸಂಗಗಳಲ್ಲಿ ಸ್ತ್ರೀ ಪಾತ್ರ ಮಾಡಿದ್ದೇನೆ. ಅದರಲ್ಲೂ 1500 ಪಾತ್ರಗಳು ದುರ್ಗೆಯ ಪಾತ್ರ ಲಭಿಸಿದ್ದು ನನ್ನ ಅದೃಷ್ಟ. ಯಕ್ಷಗಾನ ಕಲೆಗೆ ಜಾಗತಿಕ ಗೌರವ ಸಿಕ್ಕಿದೆ. ಯಕ್ಷಗಾನ ಕಲಾವಿದನಿಗೆ ದಸರಾ ಮಹೋತ್ಸವದ ಉದ್ಘಾಟನೆಯ ಭಾಗ್ಯ ಕೊಡುತ್ತಿರುವುದು ಕಲೆಗೆ ಶಿವಮೊಗ್ಗದ ಜನರು ನೀಡಿದ ಗೌರವ ಎಂದು ಭಾವಿಸುತ್ತೇನೆ. ನಮಗೆ ಕಷ್ಟ ಬಂದಾಗ ಅಮ್ಮಾ ಎಂದು ಕರೆಯುತ್ತೇವೆ. ತ್ರಿಮೂರ್ತಿಗಳಿಗೂ ಕಷ್ಟ ಬಂದಾಗ ಅವರು ಕೂಡ ಅಮ್ಮಾ ಎಂದು ಹೇಳಿದಾಗ ದೇವಿಯ ಸ್ವರೂಪ ಹೊರಹೊಮ್ಮುತ್ತದೆ. ದೇವಿ ದಿವ್ಯ ತೇಜಸ್ವಿನಿಯಾಗಿದ್ದು, ಪ್ರತಿಯೊಬ್ಬ ವ್ಯಕ್ತಿಯಲ್ಲೂ ಅಡಗಿದ್ದಾಳೆ. ದುಷ್ಟರ ಸಂಹಾರಕ್ಕಾಗಿ ತ್ರಿಮೂರ್ತಿಗಳಿಗೂ ಅಸಾಧ್ಯವಾದಾಗ ನವದಿನಗಳಲ್ಲಿ ನವರೂಪ ತಳೆದು ದುಷ್ಟರ ಸಂಹಾರ ಮಾಡುತ್ತಾಳೆ ಎಂದು ಹೇಳಿದರು.
10ನೆಯ ದಿನ ವಿಜಯದಶಮಿಯಂದು ಮಹಿಷಾಸುರ ಮರ್ದಿನಿಯಾಗಿ ದುಷ್ಟಸಂಹಾರ ಮಾಡಿ ಎಲ್ಲರನ್ನೂ ರಕ್ಷಿಸುತ್ತಾಳೆ. ಹಾಗಾಗಿ ಈ ಸಂಸ್ಕೃತಿ ಮತ್ತು ಪೌರಾಣಿಕ ಇತಿಹಾಸದ ಬಗ್ಗೆ ನಮ್ಮ ಮಕ್ಕಳಿಗೂ ತಿಳಿಯಬೇಕಾದರೆ ನಮ್ಮ ಸಂತತಿಗೆ ಸಂಬಂಧಗಳ ಪರಿಚಯವಾಗಬೇಕಾದರೆ ಈ ರೀತಿಯ ಹಬ್ಬಗಳನ್ನು ಹಮ್ಮಿಕೊಳ್ಳಬೇಕು. ದಯವಿಟ್ಟು ಪೋಷಕರು ಮಕ್ಕಳಿಗೆ ಉತ್ತಮ ಸಂಸ್ಕಾರ, ಸಂಸ್ಕೃತಿ ಮತ್ತು ಸಂಬಂಧಗಳನ್ನು ಕಲಿಸಿ ಎಂದರು.
ಸಚಿವ ಕೆ.ಎಸ್.ಈಶ್ವರಪ್ಪ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ, ಹೆಣ್ಣಲ್ಲಿ ಲಕ್ಷ್ಮೀ, ಸರಸ್ವತಿ ಮ್ತು ದುರ್ಗೆಯನ್ನು ಕಾಣುವ ದೇಶ ನಮ್ಮದು. ಹೆಣ್ಣನ್ನು ಒಂದು ಭೋಗದ ವಸ್ತುವನ್ನಾಗಿ ಪ್ರಪಂಚದ ಮುಂದುವರೆದ ರಾಷ್ಟ್ರಗಳು ತಿಳಿದಿವೆ. ಆದರೆ, ನಮ್ಮ ದೇಶದಲ್ಲಿ ಹೆಣ್ಣನ್ನು ತಾಯಿಯಾಗಿ ಗೌರವಿಸುತ್ತೇವೆ. ಭಾರತೀಯ ಸಂಸ್ಕೃತಿ ಎಂದರೆ, ಒಂದು ಉತ್ತಮ ಸಂಸ್ಕಾರವಿರುವ ಸಂಸ್ಕೃತಿಯಾಗಿದ್ದು, ಈಗ ಇಡೀ ವಿಶ್ವವೇ ಭಾರತದ ಸಂಸ್ಕೃತಿಯೆಡೆಗೆ ಆಕರ್ಷಿತವಾಗುತ್ತಿದೆ ಎಂದರು.
ನಾವೆಲ್ಲರೂ ಕೂಡ ನಮ್ಮ ದೇಶ, ಸಂಸ್ಕೃತಿ, ಧರ್ಮವನ್ನು ಉಳಿಸುವ ಪ್ರಯತ್ನ ಮಾಡೋಣ. ಉದ್ಘಾಟಕರ ನಿವೇದನೆಯಂತೆ ಮುಂದಿನ ದಸರಾದಲ್ಲಿ ಯಕ್ಷ ದಸರಾವನ್ನು ಸೇರಿಸಿ ಯಕ್ಷಗಾನ ಕಲೆಯನ್ನು ಬೆಳೆಸೋಣ ಎಂದರು.
ಮೇಯರ್ ಸುನಿತಾ ಅಣ್ಣಪ್ಪ, ಉಪಮೇಯರ್ ಶಂಕರ್ ಗನ್ನಿ, ಪಾಲಿಕೆ ಸದಸ್ಯರು, ಆಯುಕ್ತ ಚಿದಾನಂದ ವಟಾರೆ ಮೊದಲಾದವರಿದ್ದರು.
ಈ ಸಂದರ್ಭದಲ್ಲಿ ಉದ್ಘಾಟಕರಾದ ಶಿವಕುಮಾರ್ ಬೇಗಾರ್ ದಂಪತಿಗಳನ್ನು ಅಭಿನಂದಿಸಲಾಯಿತು.