ಶಿವಮೊಗ್ಗ: ನಕಲಿ ಕರಾಟೆ ತರಬೇತಿದಾರರ ಹಾವಳಿ ತಡೆದು, ಸ್ವರಕ್ಷಣಾ ತರಬೇತಿ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು ಎಂದು ರಾಜ್ಯ ಕರಾಟೆ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಶಿವಮೊಗ್ಗ ವಿನೋದ್ ಆಗ್ರಹಿಸಿದರು.

ನಗರದ ಪತ್ರಿಕಾ ಭವನದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಗ್ರ ಶಿಕ್ಷಣ ಕರ್ನಾಟಕದಡಿ ಶಾಲಾ ಮಕ್ಕಳಿಗೆ ನೀಡುವ ಸ್ವರಕ್ಷಣಾ ತರಬೇತಿ ಯೋಜನೆಯಲ್ಲಿ ತರಬೇತಿದಾರರಿಗೆ ಅನ್ಯಾಯವಾಗುತ್ತಿದೆ ಎಂದು ದೂರಿದರು.
ಗೌರವಧನದಲ್ಲಿ ಅನ್ಯಾಯ: ಈ ಹಿಂದೆ ಐ ಯೋಜನೆಯಡಿ 24 ಅವಧಿಯ ತರಬೇತಿಗೆ ₹8,400 ಗೌರವಧನ ನೀಡಲಾಗುತ್ತಿತ್ತು. ಕಳೆದ ವರ್ಷ ₹9 ಸಾವಿರ ನಿಗದಿಪಡಿಸಲಾಗಿತ್ತು. ಈ ವರ್ಷ ಅದೇ ಮೊತ್ತಕ್ಕೆ 36 ಅವಧಿ ತರಬೇತಿ ಕಡ್ಡಾಯಗೊಳಿಸಿರುವುದರಿಂದ ಪ್ರತಿ ಅವಧಿಗೆ ₹250 ಮಾತ್ರ ದೊರೆಯುತ್ತಿದೆ. ಪ್ರತಿ ಅವಧಿಗೆ ಕನಿಷ್ಠ ₹500 ನೀಡಬೇಕು ಅಥವಾ ತರಬೇತಿ ಅವಧಿಯನ್ನು 16ಕ್ಕೆ ಇಳಿಸಬೇಕು ಎಂದು ಒತ್ತಾಯಿಸಿದರು.
ತರಬೇತಿದಾರರಿಗೆ ದ್ವಿತೀಯ ಪಿಯುಸಿ ವಿದ್ಯಾರ್ಹತೆ ಕಡ್ಡಾಯಗೊಳಿಸಿರುವುದರಿಂದ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಹಿರಿಯ ತರಬೇತಿದಾರರಿಗೆ ಅನ್ಯಾಯವಾಗುತ್ತಿದೆ. ಈ ನಿಯಮವನ್ನು ಮರುಪರಿಶೀಲಿಸಬೇಕು ಎಂದರು.

ಜಿಲ್ಲೆಯಲ್ಲಿ ನಕಲಿ ದಾಖಲೆಗಳೊಂದಿಗೆ ಕೆಲವು ಮಹಿಳಾ ತರಬೇತಿದಾರರು ತರಬೇತಿಗೆ ಅರ್ಜಿ ಸಲ್ಲಿಸುತ್ತಿದ್ದಾರೆ. ಶಾಲಾ ಮುಖ್ಯೋಪಾಧ್ಯಾಯರು ಪ್ರಮಾಣಪತ್ರ, ಸಂಸ್ಥೆಯ ಮಾನ್ಯತೆ ಪರಿಶೀಲಿಸುವುದರ ಜತೆಗೆ ಪ್ರಾತ್ಯಕ್ಷಿಕೆ ಮೂಲಕ ತರಬೇತಿದಾರರ ಸಾಮರ್ಥ್ಯ ಖಚಿತಪಡಿಸಿಕೊಳ್ಳಬೇಕು ಎಂದು ಹೇಳಿದರು.

ಜಿಲ್ಲೆಯಲ್ಲಿ ವಿವಿಧ ಇಲಾಖೆಗಳ ಸ್ವರಕ್ಷಣಾ ತರಬೇತಿ ಯೋಜನೆಗಳು ವಿಳಂಬವಾಗಿವೆ. ಪದವಿ ಪೂರ್ವ ಕಾಲೇಜುಗಳಲ್ಲಿನ ರಾಣಿ ಲಕ್ಷ್ಮೀಬಾಯಿ ಸ್ವರಕ್ಷಣಾ ತರಬೇತಿ ಹಾಗೂ ಮೊರಾರ್ಜಿ ವಸತಿ ಶಾಲೆಗಳ ತರಬೇತಿ ಪೂರ್ಣಗೊಂಡಿಲ್ಲ. ಸಮಾಜ ಕಲ್ಯಾಣ ಇಲಾಖೆಯಡಿ ವಿದ್ಯಾರ್ಥಿನಿಯರ ವಸತಿ ನಿಲಯಗಳಲ್ಲಿ ತರಬೇತಿ ಆರಂಭಿಸಲು ಆದೇಶವಾಗಿ ಏಳು ತಿಂಗಳು ಕಳೆದರೂ ಅನುಷ್ಠಾನಗೊಂಡಿಲ್ಲ ಎಂದು ದೂರಿದರು.

ರಾಜ್ಯದ ಮೊರಾರ್ಜಿ ವಸತಿ ಶಾಲೆಗಳಲ್ಲಿ ತರಬೇತಿ ನೀಡಿದವರಿಗೆ ಗೌರವಧನ ಬಿಡುಗಡೆಯಾಗಿಲ್ಲ. ಈ ವರ್ಷ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಿಸಿದ್ದರೂ ತರಬೇತಿ ಆರಂಭಿಸಲು ಆದೇಶ ಹೊರಡಿಸಿಲ್ಲ. ಜಿಲ್ಲಾಧಿಕಾರಿಗಳು ಸಭೆ ನಡೆಸಿ ಸಂಬಂಧಪಟ್ಟ ಇಲಾಖೆಗಳ ಮೂಲಕ ಯೋಜನೆಗಳನ್ನು ಕಾಲಮಿತಿಯಲ್ಲಿ ಅನುಷ್ಠಾನಗೊಳಿಸಬೇಕು ಎಂದು ಆಗ್ರಹಿಸಿದರು. ಈ ಕುರಿತು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹಾಗೂ ಸಮಗ್ರ ಶಿಕ್ಷಣ ಕರ್ನಾಟಕದ ಯೋಜನಾ ನಿರ್ದೇಶಕರಿಗೆ ಮನವಿ ಸಲ್ಲಿಸಲಾಗಿದೆ ಎಂದರು.
ಪ್ರಮುಖರಾದ ಅನುಪ್ ಆರ್. ಶೇಖರ್, ಹೆಚ್. ಎನ್. ಶ್ರೇಯಸ್ ಇದ್ದರು.
——————————————