
ಶಿವಮೊಗ್ಗ: ಕನ್ನಡ ರಾಜ್ಯೋತ್ಸವವನ್ನು ಕೇವಲ ಒಂದು ದಿನದ ಆಚರಣೆಗೆ ಸೀಮಿತಗೊಳಿಸದೆ, ನಿತ್ಯದ ಬದುಕು ಮತ್ತು ವ್ಯವಹಾರಗಳಲ್ಲಿ ಕನ್ನಡವನ್ನು ಅಳವಡಿಸಿಕೊಳ್ಳುವ ಮೂಲಕ ಭಾಷೆಯ ಉಳಿವು ಮತ್ತು ಬೆಳವಣಿಗೆಗೆ ಕನ್ನಡಿಗರು ಮುಂದಾಗಬೇಕು ಎಂದು ಕದಂಬ ವೇದಿಕೆಯ ಸಂಸ್ಥಾಪಕ ಶಶಿಧರ ಭಂಡಿಗಡಿ ಮನವಿ ಮಾಡಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಕನ್ನಡಿಗರೇ ಕನ್ನಡ ಮಾತನಾಡಲು ಹಿಂಜರಿಯುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಮಾತ್ರ ಕನ್ನಡದ ಅಭಿಮಾನ ತೋರಿಸುವ ಬದಲು, ದೈನಂದಿನ ವ್ಯವಹಾರಗಳಲ್ಲಿ ಕನ್ನಡಕ್ಕೆ ಆದ್ಯತೆ ನೀಡಬೇಕು. ಚಿತ್ರಮಂದಿರಗಳು, ಮಾಲ್ಗಳು ಹಾಗೂ ಸರ್ಕಾರಿ ಇಲಾಖೆಗಳಲ್ಲಿ ಕನ್ನಡ ರಾಜ್ಯೋತ್ಸವವನ್ನು ನಾಡಹಬ್ಬದಂತೆ ಆಚರಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ನ.1ರಂದು ನಗರದ ಎಲ್ಲ ಚಿತ್ರಮಂದಿರಗಳು ಮತ್ತು ಮಲ್ಟಿಪ್ಲೆಕ್ಸ್ಗಳಲ್ಲಿ ಕಡ್ಡಾಯವಾಗಿ ಕನ್ನಡ ಚಲನಚಿತ್ರ ಪ್ರದರ್ಶಿಸಬೇಕು. ಕನ್ನಡದ ಧ್ವಜ ಹಾರಿಸುವ ಮೂಲಕ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಬೇಕು. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಚಿತ್ರಮಂದಿರ, ಮಲ್ಟಿಪ್ಲೆಕ್ಸ್ ಮತ್ತು ಕಟ್ಟಡಗಳ ಮಾಲೀಕರು ಅಗತ್ಯ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಕನ್ನಡಪರ ಸಂಘಟನೆಗಳ ನೇತೃತ್ವದಲ್ಲಿ ಚಿತ್ರಮಂದಿರಗಳು ಮತ್ತು ಮಾಲ್ಗಳಿಗೆ ಮುತ್ತಿಗೆ ಹಾಕುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.

ನ.1ರಂದು ಬೆಳಿಗ್ಗೆ 9 ಗಂಟೆಗೆ ನಗರದ ಕದಂಬ ವೇದಿಕೆ ಆವರಣದಲ್ಲಿ ಧ್ವಜಾರೋಹಣ ಕಾರ್ಯಕ್ರಮ ನಡೆಯಲಿದೆ. ಕನ್ನಡಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಶಶಿಧರ ಭಂಡಿಗಡಿ ಕೋರಿದ್ದಾರೆ.