
ಶಿವಮೊಗ್ಗ : ಅ.26:
ಹವಾಮಾನ ವೈಪರೀತ್ಯ ಮತ್ತು ಬರಗಾಲದ ಸವಾಲುಗಳನ್ನು ಎದುರಿಸಲು ರೈತರಿಗೆ ಮಾರ್ಗದರ್ಶನ ನೀಡುವ ಸದುದ್ದೇಶದಿಂದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯವು ಅಕ್ಟೋಬರ್ 30 ರಿಂದ ನವೆಂಬರ್ 2 ರವರೆಗೆ 4 ದಿನಗಳ ಕಾಲ ‘ಕೃಷಿ ಮತ್ತು ತೋಟಗಾರಿಕೆ ಮೇಳ-2026’ ಆಯೋಜಿಸಿದ್ದು, ವಿಶ್ವವಿದ್ಯಾನಿಲಯದ ವ್ಯಾಪ್ತಿಯ ಎಲ್ಲಾ ಜಿಲ್ಲೆಗಳ ರೈತಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಕೃಷಿ ಮೇಳದ ಲಾಭ ಪಡೆದುಕೊಳ್ಳುವಂತೆ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಕುಲಪತಿ ಡಾ. ಎಂ.ವಿ.ಧನಂಜಯ ಅವರು ಹೇಳಿದರು.

ಅವರು ಇಂದು ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿ ಮಾತನಾಡುತ್ತಿದ್ದರು. “ಬರ ನಿರ್ವಹಣೆಗಾಗಿ ನಾವೀನ್ಯತಾ ಕೃಷಿ” ಎಂಬ ಧ್ಯೇಯವಾಕ್ಯದಡಿ ಶಿವಮೊಗ್ಗದ ಕೃಷಿ ಮಹಾವಿದ್ಯಾಲಯದ ನವಿಲೆ ಆವರಣದಲ್ಲಿ ಕೃಷಿ ಮೇಳ ನಡೆಯಲಿದೆ. ಈ ಮೇಳದ ಅಂಗವಾಗಿ ಕೃಷಿ ಪರಿಕರಗಳು, ಬೀಜ-ರಸಗೊಬ್ಬರಗಳು, ಯಂತ್ರೋಪಕರಣಗಳು, ಸಸಿ ಮತ್ತು ಗಿಡಗಳು, ಪ್ರಾತ್ಯಕ್ಷಿತೆಗಳಿಗಾಗಿ 600ಕ್ಕೂ ಹೆಚ್ಚಿನ ಮಳಿಗೆಗಳನ್ನು ತೆರೆಯಲಾಗಿದೆ ಎಂದರು.

ಮೇಳದಲ್ಲಿ ಮೂರು ದಿನಗಳ ಕಾಲ ವಿವಿಧ ವಿಷಯಗಳ ಕುರಿತು ತಜ್ಞರು ಹಾಗೂ ಸಂಪನ್ಮೂಲ ವ್ಯಕ್ತಿಗಳಿಂದ ಸಂವಾದ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಅ.30ರಂದು “ಬರಕ್ಕೆ ಹೆದರದ ನೈಸರ್ಗಿಕ ಕೃಷಿ: ಜೀವಂತ ಮಣ್ಣಿನ ಜೀವ ಶಕ್ತಿ”, ಅ.31ರಂದು ಅಂತಾರಾಷ್ಟ್ರೀಯ ಮಹಿಳಾ ವರ್ಷದ ಪ್ರಯುಕ್ತ “ಆಧುನಿಕ ಕೃಷಿ ತಂತ್ರಜ್ಞಾನ ಮತ್ತು ನಾವೀನ್ಯತೆಯಲ್ಲಿ ಮಹಿಳೆಯರ ಪಾತ್ರ” ಹಾಗೂ ನ.1: “ಡಿಜಿಟಲ್ ಕೃಷಿ: ಅವಕಾಶಗಳು, ಸವಾಲುಗಳು ಮತ್ತು ಮುಂದಿನ ದಾರಿ” ಎಂಬ ವಿಷಯಗಳ ಕುರಿತು ವಿಸ್ತೃತ ಚರ್ಚೆ ಮತ್ತು ಸಂವಾದಗಳು ನಡೆಯಲಿವೆ. ರೈತರು, ಆಸಕ್ತ ಕೃಷಿಕರು ಈ ಗೋಷ್ಠಿಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಅವರು ಮನವಿ ಮಾಡಿದರು.
ಎಂದ ಅವರು, ಮೇಳದಲ್ಲಿ ಬೀಜ-ಸಸಿಗಳು-50, ಕೀಟನಾಶಕ-80, ಕೃಷಿ ಸಲಕರಣೆ-35, ಮೌಲ್ಯವರ್ಧಿತ ಆಹಾರ-40, FPO/SHG-30, ನರ್ಸರಿ-15, ಆಹಾರ ಮಳಿಗೆ-60 ಸೇರಿದಂತೆ 600ಕ್ಕೂ ಹೆಚ್ಚು ಮಳಿಗೆಗಳಿರಲಿವೆ. ICAR ನ 15ಕ್ಕೂ ಹೆಚ್ಚು ಸಂಶೋಧನಾ ಸಂಸ್ಥೆಗಳು, 80 ಸರ್ಕಾರಿ ಇಲಾಖೆಗಳು ಭಾಗವಹಿಸಲಿರುವುದು ವಿಶೇಷವಾಗಿದೆ ಎಂದರು.

ಬರ ನಿರ್ವಹಣಾ ವಿಭಾಗ, ಅಡಿಕೆ ವಿಭಾಗ, ಮೀನುಗಾರಿಕೆ, ಹೈನುಗಾರಿಕೆ, ಕುರಿ-ಮೇಕೆ ಸಾಕಣೆ, ಏಡಿ ಸಾಕಣೆ, ಮುತ್ತು ಕೃಷಿ, ಬ್ಲಾಕ್ ಸೋಲ್ಜರ್ ಫ್ಲೈ ಪ್ರದರ್ಶನ. ಮಲೆನಾಡಿನಲ್ಲಿ ಕಣ್ಮರೆಯಾಗುತ್ತಿರುವ ಕಬ್ಬಿನ ಗಾಣದ ಅಪರೂಪದ “ಕೋಣದ ಕಣೆ” ಪ್ರದರ್ಶನ ವಿಶೇಷವಾಗಿರಲಿದೆ. ಅಲ್ಲದೇ, ಶ್ವಾನ ಪ್ರದರ್ಶನ, ಹಸು-ಎಮ್ಮೆ, ಕುರಿ-ಆಡು ಸ್ಪರ್ಧೆ, ಸಿರಿಧಾನ್ಯ ಪಾಕ ಸ್ಪರ್ಧೆ, ಮೀನುಗಾರಿಕೆ ಇಲಾಖೆಯ ‘ಮತ್ಸ್ಯಾಂಗಣ’ ಮೇಳದ ವಿಶೇಷ ಆಕರ್ಷಣೆಗಳಾಗಿರಲಿದೆ ಎಂದರು.
ವಿಶ್ವವಿದ್ಯಾಲಯ ಆವಿಷ್ಕರಿಸಿದ ‘ಬಹುಉಪಯೋಗಿ ಕೃಷಿ ಉಪಕರಣ’ ಮತ್ತು ‘ಸೋಲಾರ್ ಮಲ್ಟಿಗ್ರೇನ್ ಕ್ಲೀನರ್’ ಗೆ ಪೇಟೆಂಟ್ ಲಭಿಸಿದೆ. ‘ಸಹ್ಯಾದ್ರಿ ಸಿಂಧೂರ’ ಕೆಂಪು ಭತ್ತ ಮತ್ತು ‘ಸಹ್ಯಾದ್ರಿ ಪ್ರಗತಿ’ ಕಡಲೆ ತಳಿಗಳಿಗೆ ಕೇಂದ್ರದಿಂದ ಅನುಮೋದನೆ ದೊರೆತಿದೆ. ಇದೇ ಕಾರ್ಯಕ್ರಮದಲ್ಲಿ ಆಕ್ರೋಮೆಟ್ AI ವಾಟ್ಸಪ್ ಬಾಟ್, ಸಹ್ಯಾದ್ರಿ AI ಸಮಾಲೋಚನಾ ತಂತ್ರಾಂಶ, ಹೊಸ ಭತ್ತದ ತಳಿ ‘ಸಹ್ಯಾದ್ರಿ ಅನ್ನಪೂರ್ಣ’ ಬಿಡುಗಡೆಯಾಗಲಿದೆ. ಜೊತೆಗೆ 7 ಸಂಸ್ಥೆಗಳೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗುವುದು ಎಂದವರು ತಿಳಿಸಿದರು.
ಕೃಷಿ ಮೇಳವನ್ನು ಮುಖ್ಯಮಂತ್ರಿ ಶಲಲ ಡಿ.ಕೆ. ಶಿವಕುಮಾರ್ ಅವರು ಉದ್ಘಾಟಿಸಲಿದ್ದಾರೆ. ಅದಕ್ಕೂ ಮುನ್ನ ಮೇಳದ ಮೊದಲ ದಿನ ಪದ್ಮಶ್ರೀ ಪುರಸ್ಕೃತ ಪ್ರಗತಿಪರ ರೈತ ಸತ್ಯನಾರಾಯಣ ಬೇಲೆರಿ ಅವರು ಮೇಳಕ್ಕೆ ವಿದ್ಯುಕ್ತ ಚಾಲನೆ ನೀಡಲಿದ್ದಾರೆ. ಅಲ್ಲದೇ ಮೇಳದ ಉದ್ಘಾಟನಾ ಸಮಾರಂಭದಲ್ಲಿ ಕೃಷಿ ಸಚಿವ ಪಿ.ಎಂ. ನರೇಂದ್ರ ಸ್ವಾಮಿ ಅವರು ಕೃಷಿ ವಸ್ತು ಪ್ರದರ್ಶನ ಉದ್ಘಾಟಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರು ಪುಸ್ತಕ/ತಾಂತ್ರಿಕ ಕೈಪಿಡಿಗಳನ್ನು ಬಿಡುಗಡೆ ಮಾಡಲಿದ್ದಾರೆ. ತೋಟಗಾರಿಕೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರು ತಂತ್ರಜ್ಞಾನ ಉದ್ಯಾನವನ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕಿ ಶ್ರೀಮತಿ ಶಾರದಾ ಪೂರ್ಯಾನಾಯ್ಕ ವಹಿಸಲಿದ್ದಾರೆ ಎಂದ ಅವರು, ಇದೇ ವೇದಿಕೆಯಲ್ಲಿ ವಿಶ್ವವಿದ್ಯಾಲಯದ ವ್ಯಾಪ್ತಿಯ 6 ಜಿಲ್ಲೆಗಳ 12 ಮಂದಿ ಪ್ರಗತಿಪರ ರೈತ ಮತ್ತು ರೈತ ಮಹಿಳೆಯರಿಗೆ ಜಿಲ್ಲಾಮಟ್ಟದ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದರು.

ಪತ್ರಿಕಾಗೋಷ್ಠಿಯಲ್ಲಿ ವಿವಿಯ ಸಂಶೋಧನಾ ನಿರ್ದೇಶಕ ಶ್ರೀಧರ್, ಡಾ.ವೀರಣ್ಣ, ಡಾ.ಮಾವರ್ಕರ್, ಡಾ.ಎಸ್.ಯು.ಪಾಟೀಲ್, ಡಾ.ಅವಿನಾಶ್, ಪ್ರಿಯಾಂಕ, ಡಾ.ರಾಘವೇಂದ್ರ ಮೇಸ್ತ ಸೇರಿದಂತೆ ವಿಶ್ವವಿದ್ಯಾಲಯ ಅಧಿಕಾರಿ-ಸಿಬ್ಬಂಧಿಗಳು ಉಪಸ್ಥಿತರಿದ್ದರು.
