ಶಿವಮೊಗ್ಗ: ಶಿವಮೊಗ್ಗದಲ್ಲಿ ನಡೆದ ದಸರಾ ಹಬ್ಬದ ಸಡಗರ ಮತ್ತು ಜಂಬೂ ಸವಾರಿಯಲ್ಲಿ ನಡೆದ ಅವಘಡ ಇವುಗಳೆಲ್ಲವನ್ನೂ ಚರ್ಚಿಸಲು ಮತ್ತು ಪ್ರಮುಖವಾಗಿ ಬೆಳ್ಳಿ ಮಂಟಪದ ಜಖಂ ಆಗಿರುವುದೂ ಸೇರಿದಂತೆ ಅನೇಕ ವಿಷಯಗಳನ್ನು ಚರ್ಚಿಸುವ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಮಧು ಬಂಗಾರಪ್ಪ ನಾಳೆ ಅ. ೨೪ರಂದು ಬೆಳಗ್ಗೆ ೯ ರಿಂದ ೧೦ ಗಂಟೆಯವರೆಗೆ ಮಹಾನಗರ ಪಾಲಿಕೆಗೆ ಭೇಟಿ ನೀಡಿ ಅಲ್ಲಿನ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಸಿ. ಯೋಗೀಶ್ ಹೇಳಿದರು.

ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಂಬೂಸವಾರಿಯಲ್ಲಿ ನಡೆದ ಅವಘಡ ಬಿಟ್ಟರೆ ಉಳಿದೆಲ್ಲವೂ ಈ ಬಾರಿ ದಸರಾ ವಿಜೃಂಭಣೆಯಿಂದಲೇ ನಡೆದಿದೆ. ೨೦೧೩ರಿಂದ ೧೮ರ ವರೆಗೆ ಮಹಾನಗರ ಪಾಲಿಕೆಯಲ್ಲಿ ಚುನಾಯಿತ ಪ್ರತಿನಿಧಿಗಳು, ಮೇಯರ್ ಮತ್ತು ಉಪ ಮೇಯರ್ ಗಳು ಆಯಾ ಕಾಲಘಟ್ಟದಲ್ಲಿದ್ದ ಜಿಲ್ಲಾ ಉಸ್ತುವಾರಿ ಸಚಿವರುಗಳು, ನಂತರದಲ್ಲಿ ಇದುವರೆಗೂ ಇದ್ದ ಆಡಳಿತ ಪಕ್ಷ ಎಲ್ಲರೂ ಕೂಡ ಶಿವಮೊಗ್ಗ ದಸರಾದ ಯಶಸ್ಸಿಗೆ ಕಾರಣರಾಗಿದ್ದಾರೆ ಎಂದರು.

ಈ ವರ್ಷವೂ ಕೂಡ ದಸರಾ ವಿಭಿನ್ನವಾಗಿ ನಡೆಯಿತು. ಯೋಗ ದಸರಾ, ರಂಗ ದಸರಾ, ಸಿನಿಮಾ ದಸರಾ ಸೇರಿದಂತೆ ಎಲ್ಲವೂ ವಿಜೃಂಭಣೆಯಿಂದ ನಡೆದಿವೆ. ನಟ ರವಿಚಂದ್ರನ್, ಸಾಧುಕೋಕಿಲ, ಶ್ರೀನಾಥ್ ಸೇರಿದಂತೆ ಅನೇಕ ಜನಪ್ರಿಯ ನಟ ನಟಿಯರು ಬಂದು ಹೋಗಿದ್ದಾರೆ. ಇದು ಸಂಭ್ರಮದ ದಸರಾ ಆಗಿದ್ದು ನಿಜ ಎಂದರು.
ಆದರೆ, ಇದರ ನಡುವೆ ಕಪ್ಪು ಚುಕ್ಕೆ ಎಂಬಂತೆ ಅಂಬಾರಿಯ ಸಮಯದಲ್ಲಿ ಅವಘಡ ನಡೆದೇ ಹೋಗಿದೆ. ಇದಕ್ಕೆ ಕಾರಣ ಯಾರು ಎನ್ನುವುದನ್ನೂ ಹುಡುಕುವುದಕ್ಕಿಂತ ಇನ್ನು ಮುಂದೆ ಎಚ್ಚರಿಕೆಯಿಂದ ಇರುವುದು ಅಗತ್ಯ ಎಂಬುದನ್ನು ಮನಗಾಣಬೇಕಾಗಿದೆ. ಅದೃಷ್ಟವಶಾತ್ ಆನೆಯ ಆಕ್ರೋಶಕ್ಕೆ ಯಾವ ಪ್ರಾಣ ಅಪಾಯವೂ ಆಗಿಲ್ಲ. ಬೆಳ್ಳಿಯ ಚಾಮುಂಡೇಶ್ವರಿ ಮಂಟಪಕ್ಕೆ ಸ್ವಲ್ಪ ಹಾನಿಯಾಗಿರುವುದು ನಿಜ. ಯಾವ ಚಿನ್ನದ ಒಡವೆಗಳು ಕಾಣೆಯಾಗಿಲ್ಲ. ಎಲ್ಲವೂ ಸುರಕ್ಷಿತವಾಗಿವೆ ಎಂದರು.

ಈ ಎಲ್ಲಾ ಹಿನ್ನೆಲೆಯಲ್ಲಿ ಸಚಿವ ಮಧು ಬಂಗಾರಪ್ಪ ಮಹಾನಗರ ಪಾಲಿಕೆಗೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಮಾತನಾಡಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಮುಖಂಡರಾದ ಎಸ್.ಕೆ. ಮರಿಯಪ್ಪ, ನಾಗರಾಜ್ ಕಂಕಾರಿ, ಹೆಚ್. ಪಾಲಾಕ್ಷಿ, ಶಿವಕುಮಾರ್, ಕಲೀಂ ಪಾಷಾ, ಧೀರರಾಜ್ ಹೊನ್ನವಿಲೆ, ವಿಶ್ವನಾಥ್ ಕಾಶಿ, ರಾಜಶೇಖರ್, ನೂರುಲ್ಲಾ, ಮಜರ್, ನಿರಂಜನ್ ಡಿ.ಸಿ., ವಸಂತ್ ಇತರರು ಇದ್ದರು.
:
ನಾಳೆ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಕಾಂಗ್ರೆಸ್ ಕಚೇರಿಗೆ ಆಗಮನ
ಶಿವಮೊಗ್ಗ: ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರು ಇದೇ ಮೊದಲ ಬಾರಿಗೆ ಶಿವಮೊಗ್ಗ ನಗರಕ್ಕೆ ಆಗಮಿಸುತ್ತಿದ್ದು, ಅವರು ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಆದರೆ. ಮುಖ್ಯವಾಗಿ ನಾಳೆ ಬೆಳಗ್ಗೆ ೯.೩೦ಕ್ಕೆ ಕಾಂಗ್ರೆಸ್ ಕಚೇರಿಗೆ ಆಗಮಿಸುತ್ತಿದ್ದು, ಅವರಿಗೆ ಭವ್ಯ ಸ್ವಾಗತ ಕೋರಲಾಗುವುದು ಎಂದು ಹೆಚ್.ಸಿ. ಯೋಗೀಶ್ ತಿಳಿಸಿದರು.

ಬಿ.ಕೆ. ಹರಿಪ್ರಸಾದ್ ಅವರು ಪ್ರಮುಖವಾಗಿ ಕಾಂಗ್ರೆಸ್ ಕಾರ್ಯಕರ್ತರು, ವಿವಿಧ ಘಟಕಗಳ ಮುಖ್ಯಸ್ಥರೊಂದಿಗೆ ಪಕ್ಷದ ಸಂಘಟನೆ, ಸ್ಥಳೀಯ ಸಂಸ್ಥೆಗಳ ಚುನಾವಣೆ ಕುರಿತು ಮಾತನಾಡಲಿದ್ದಾರೆ. ಈ ಕಾರ್ಯಕ್ರಮಕ್ಕೆ ಕಾರ್ಯಕರ್ತರು ಹಾಗೂ ವಿವಿಧ ಘಟಕಗಳ ಪದಾಧಿಕಾರಿಗಳು ಸರಿಯಾದ ಸಮಯಕ್ಕೆ ಹಾಜರಿರಬೇಕು. ಮತತು ಯಾವುದೇ ಕಾರಣಕ್ಕೂ ಹಾರ ತುರಾಯಿಗಳನ್ನು ತರಬಾರದು ಎಂದು ಮನವಿ ಮಾಡಿದ್ದಾರೆ.
೯