
ಶಿವಮೊಗ್ಗ ನಗರದ ದಸರಾ ಉತ್ಸವಕ್ಕೆ ಸಕ್ರೆಬೈಲು ಆನೆ ಬಿಡಾರದಿಂದ ಕರೆತರಲಾಗಿದ್ದ ಸೋಮ ಮತ್ತು ಬಹದ್ದೂರ್ ಆನೆಗಳು ಪರಸ್ಪರ ಗುದ್ದಾಡಿಕೊಂಡ ಘಟನೆ ಗಾಂಧಿ ಬಜಾರ್ ಪ್ರದೇಶದಲ್ಲಿ ಕೆಲಕಾಲ ಆತಂಕದ ವಾತಾವರಣ ಸೃಷ್ಟಿಸಿತು.

ದಸರಾ ಉತ್ಸವದ ಅಂಗವಾಗಿ ಚಾಮುಂಡೇಶ್ವರಿ ತಾಯಿಯ ವಿಗ್ರಹವನ್ನು ಹೊತ್ತು ಸಾಗುತ್ತಿದ್ದ ಸೋಮ ಆನೆ ಹಾಗೂ ಬಹದ್ದೂರ್ ಆನೆ ಪರಸ್ಪರ ಗುದ್ದಾಡಿಕೊಂಡಿವೆ ಎಂಬ ಮಾಹಿತಿ ಲಭ್ಯವಾಗಿದೆ. ಈ ವೇಳೆ ಸೋಮ ಆನೆಯ ಮೇಲಿದ್ದ ಚಾಮುಂಡೇಶ್ವರಿ ದೇವಿಯ ವಿಗ್ರಹವು ಮಂಟಪದ ಸಮೇತ ಮೇಲಿನಿಂದ ಕೆಳಕ್ಕೆ ಬಿದ್ದಿದೆ ಎಂದು ತಿಳಿದುಬಂದಿದೆ.

ಜನನಿಬಿಡ ಗಾಂಧಿ ಬಜಾರ್ ಪ್ರದೇಶದಲ್ಲಿ ಏಕಾಏಕಿ ನಡೆದ ಈ ಘಟನೆ ಕಂಡು ಸಾರ್ವಜನಿಕರು ಆತಂಕಕ್ಕೊಳಗಾದರು. ಓರ್ವರು ಗಾಯಗೊಂಡಿದ್ದಾರೆ ಎನ್ನಲಾಗಿದೆ.

ದಸರಾ ಸಂಭ್ರಮದ ನಡುವೆ ಆನೆಗಳ ಗುದ್ದಾಟ ಮತ್ತು ದೇವಿಯ ವಿಗ್ರಹ ಮಂಟಪ ಸಮೇತ ಕೆಳಕ್ಕೆ ಬಿದ್ದ ಘಟನೆ ಸ್ಥಳದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಿಸಿತು.
ದಸರಾ ಉತ್ಸವದ ಮೆರವಣಿಗೆಯಲ್ಲಿ ಭಾಗವಹಿಸುವ ಆನೆಗಳ ಸುರಕ್ಷತೆ ಹಾಗೂ ಸಾರ್ವಜನಿಕರ ರಕ್ಷಣೆಗೆ ಅಗತ್ಯ ಮುನ್ನೆಚ್ಚರಿಕೆ ವಹಿಸುವುದು ಎಷ್ಟು ಮುಖ್ಯ ಎಂಬುದನ್ನು ಈ ಘಟನೆ ಮತ್ತೊಮ್ಮೆ ನೆನಪಿಸಿದೆ.