ಶಿವಮೊಗ್ಗ: ಶಿವಮೊಗ್ಗ ದಸರಾದ ಬನ್ನಿ ಮಂಟಪದಲ್ಲಿ ರಾಜಕೀಯ ಮುಖಂಡರ ಶಕ್ತಿ ಪ್ರದರ್ಶನಕ್ಕೆ ಕಡಿವಾಣ ಹಾಕಿ, ಚುನಾಯಿತ ಜನಪ್ರತಿನಿಧಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾತ್ರ ವೇದಿಕೆಯಲ್ಲಿ ಅವಕಾಶ ಕಲ್ಪಿಸುವಂತೆ ಕಾರ್ಯಕ್ರಮ ಆಯೋಜಕರು ಕ್ರಮ ಕೈಗೊಳ್ಳಬೇಕು ಎಂದು ಪೀಪಲ್ಸ್ ಫಾರ್ ಸಿವಿಲ್ ರೈಟ್ಸ್ ಸಂಘಟನೆಯ ಅಧ್ಯಕ್ಷ ಸುರೇಶ್ ಬಾಬು ಆಗ್ರಹಿಸಿದರು.

ನಗರದ ಪತ್ರಿಕಾ ಭವನದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿವರ್ಷದಂತೆ ಇಲ್ಲಿನ ಮಹಾನಗರ ಪಾಲಿಕೆಯಿಂದ ಆಯೋಜಿಸುವ ದಸರಾ ಹಬ್ಬಕ್ಕೆ ಚಾರಿತ್ರಿಕ ಹಾಗೂ ಸಾಂಸ್ಕೃತಿಕ ಮಹತ್ವವಿದೆ. ಆದರೆ, ಬನ್ನಿ ಮುಡಿಯುವ ಕಾರ್ಯಕ್ರಮದಲ್ಲಿ ರಾಜಕೀಯ ಮುಖಂಡರ ಅಬ್ಬರ ಹೆಚ್ಚಾಗುತ್ತಿರುವುದರಿಂದ ಧಾರ್ಮಿಕ ವಿಧಿವಿಧಾನಗಳಿಗೆ ಅಡಚಣೆಯಾಗುತ್ತಿದ್ದು, ಸಾರ್ವಜನಿಕರಿಗೂ ತೊಂದರೆಯಾಗುತ್ತಿದೆ ಎಂದು ದೂರಿದರು.
ಮಾಜಿ ಮಹಾನಗರ ಪಾಲಿಕೆ ಸದಸ್ಯರು ಸೇರಿದಂತೆ ಚುನಾಯಿತ ಪ್ರತಿನಿಧಿಗಳಲ್ಲದ ರಾಜಕೀಯ ಮುಖಂಡರಿಗೆ ಮಂಟಪದ ಮೇಲೆ ಅವಕಾಶ ಕಲ್ಪಿಸುತ್ತಿರುವುದರ ಔಚಿತ್ಯವೇನು ಎಂದು ಪ್ರಶ್ನಿಸಿದ ಅವರು, ಸಂಸದರು, ಸಚಿವರು, ಶಾಸಕರು ಹಾಗೂ ಸಂಬಂಧಪಟ್ಟ ಅಧಿಕಾರಿಗಳು, ನಿಗಮ-ಮಂಡಳಿ ಮತ್ತು ಪ್ರಾಧಿಕಾರಗಳ ಅಧ್ಯಕ್ಷರು ಹಾಗೂ ಪ್ರತಿನಿಧಿಗಳಿಗೆ ಶಿಷ್ಟಾಚಾರದಂತೆ ಅವಕಾಶ ನೀಡಬೇಕು. ಅರ್ಚಕರು, ಪುರೋಹಿತರು ಮತ್ತು ಸಾಂಪ್ರದಾಯಿಕ ವಿಧಿವಿಧಾನಗಳಿಗೆ ಸಂಬಂಧಿಸಿದವರಿಗೆ ಆದ್ಯತೆ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

‘ನಮ್ಮದು ಚುನಾವಣೆಯ ವಿಚಾರವಲ್ಲ. ದಸರಾ ಕಾರ್ಯಕ್ರಮಕ್ಕೆ ಅಡಚಣೆಯಾಗುತ್ತಿದೆ ಎಂಬುದೇ ನಮ್ಮ ಕಾಳಜಿ. ಬನ್ನಿ ಮುಡಿಯುವ ಸಾಂಪ್ರದಾಯಿಕ ಕಾರ್ಯಕ್ರಮ ವೀಕ್ಷಿಸಲು ಸಾವಿರಾರು ಜನರು ಆಗಮಿಸುತ್ತಾರೆ. ಆದರೆ, ಧಾರ್ಮಿಕ ಆಚರಣೆಗಿಂತ ರಾಜಕೀಯ ಪ್ರದರ್ಶನವೇ ಹೆಚ್ಚು ಗಮನ ಸೆಳೆಯುವ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ದಸರಾ ಸಂದರ್ಭದಲ್ಲಿ ಮಕ್ಕಳು, ಮಹಿಳೆಯರು ಹಾಗೂ ಹಿರಿಯ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವುದರಿಂದ ಜನದಟ್ಟಣೆ ನಿಯಂತ್ರಿಸಲು ಅಗತ್ಯ ವ್ಯವಸ್ಥೆ ಮಾಡಬೇಕು. ರಾಜಮಹಾರಾಜರ ಕಾಲದಿಂದ ನಡೆದುಕೊಂಡು ಬಂದಿರುವ ಕತ್ತಿ ಪೂಜೆ ಸೇರಿದಂತೆ ಸಾಂಪ್ರದಾಯಿಕ ಆಚರಣೆಗಳು ಯಾವುದೇ ಅಡಚಣೆಯಿಲ್ಲದೆ ನಡೆಯುವಂತೆ ಕಾರ್ಯಕ್ರಮ ಆಯೋಜಕರು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಬನ್ನಿ ಮಂಟಪದ ಕಾರ್ಯಕ್ರಮವನ್ನು ವ್ಯವಸ್ಥಿತವಾಗಿ ನಡೆಸಲು ನುರಿತ ಕಲಾತಂಡಗಳು ಹಾಗೂ ವಿವಿಧ ಸಂಘ-ಸಂಸ್ಥೆಗಳಿದ್ದು, ಅವರಿಗೆ ಸೂಕ್ತ ಅವಕಾಶ ಕಲ್ಪಿಸುವ ಬಗ್ಗೆಯೂ ಮಹಾನಗರ ಪಾಲಿಕೆ ಗಮನ ಹರಿಸಬೇಕು. ಸಾರ್ವಜನಿಕ ಕಾರ್ಯಕ್ರಮವನ್ನು ರಾಜಕೀಯ ಶಕ್ತಿ ಪ್ರದರ್ಶನಕ್ಕೆ ಬಳಸಬಾರದು ಎಂದು ತಿಳಿಸಿದರು.

ಕಳೆದ ಮೂರ್ನಾಲ್ಕು ವರ್ಷಗಳಿಂದ ಈ ಅವ್ಯವಸ್ಥೆ ಸರಿಪಡಿಸುವಂತೆ ಮನವಿ ಸಲ್ಲಿಸುತ್ತಿದ್ದರೂ ಮಹಾನಗರ ಪಾಲಿಕೆ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ ಅವರು, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೂ ಮನವಿ ಸಲ್ಲಿಸಲಾಗಿದೆ. ಈ ಬಾರಿಯಾದರೂ ಕಾರ್ಯಕ್ರಮ ಆಯೋಜಕರು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಂಡು ಬನ್ನಿ ಮಂಟಪದ ಘನತೆ ಮತ್ತು ಧಾರ್ಮಿಕ ಆಚರಣೆಯ ಪಾವಿತ್ರ್ಯ ಕಾಪಾಡಬೇಕು. ಸಮಸ್ಯೆ ಮರುಕಳಿಸಿದರೆ ಕಾನೂನುಬದ್ಧ ಕ್ರಮಕ್ಕೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ನಿರಂಜನ್ ಮೂರ್ತಿ, ಯಶವಂತ್, ಎಂ. ಗುರುಕಿರಣ್, ಎಸ್. ಭರತ್, ಗಿರೀಶ್, ಎಂ.ಸಿ. ಅಭಿಜಿತ್, ರಾಜು ಹಾಗೂ ಸುಬ್ರಮಣ್ಯ ಇದ್ದರು.