


ಅಂಕಣ- 1
ಗಜೇಂದ್ರಸ್ವಾಮಿ, ಶಿವಮೊಗ್ಗ
ಈ ಜಗತ್ತಿನಲ್ಲಿ ನಾವು ಯಾರ ಋಣವನ್ನಾದರೂ ತೀರಿಸಬಹುದು. ಆದರೆ ಹೆತ್ತ ತಂದೆ ತಾಯಿಯ ಋಣವನ್ನು ತೀರಿಸಲು ಸಾಧ್ಯವಿಲ್ಲ, ಅದರ ಭಾರವನ್ನು ಕಡಿಮೆ ಮಾಡಿಕೊಳ್ಳುವುದರಲ್ಲೂ ನಾವು ಸೋಲುತ್ತೇವೆ. ಅದಕ್ಕೇ ಹೇಳುವುದು ತಂದೆ ತಾಯಿ ಬೆಲೆ ಕಟ್ಟಲಾಗದವರಲ್ಲವೇ?
ಇಂತಹದೊಂದು ಕಲ್ಪನೆಯ ನಡುವೆ ನನ್ನ ತಂದೆ ತಾಯಿ (ಅಯ್ಯ ಅಮ್ಮ) ಗೆ ಏನಾದರೂ ವಿಶೇಷವನಿಸುವ ಕೊಡುಗೆ ನೀಡಬೇಕು. ಅದು ಕುಟುಂಬದ ಎಲ್ಲರ ಜೊತೆ ಇರುವಾಗ ಎಂಬ ಆಸೆ ಮೂಡಿತ್ತು.
ಹೀಗೆ ಒಂದು ದಿನ ಊರಿಗೆ ಹೋಗಿದ್ದಾಗ ಮನೆಯ ಹಳೆಯ ಚಿತ್ರಗಳನ್ನು ಹಾಗೂ ಪುಸ್ತಕಗಳನ್ನು ನೋಡುತ್ತಿದ್ದೆ. ಅಲ್ಲಿ ನನ್ನ ತಂದೆ ತಾಯಿ ಮದುವೆಯಾದ ಸಮಯದಲ್ಲಿ ಶಿವಮೊಗ್ಗಕ್ಕೆ ಬಂದು ತೆಗೆಸಿಕೊಂಡಿದ್ದ ಕಪ್ಪು ಬಿಳುಪಿನ ಛಾಯಾಚಿತ್ರ ಹಾಗೂ ಅದರ ಹಳ್ಳುಕಟ್ಟಿನ ಫೋಟೋ ಸಿಕ್ಕಿತು. ಈ ಚಿತ್ರದಲ್ಲಿ ಏನೋ ಸ್ಪೆಷಲ್ ಇದೆ ಎನಿಸಿ ಹಾಗೆ ತೆಗೆದುಕೊಂಡು ಬಂದೆ.
ನಂತರ ಆ ಫೋಟೋವನ್ನು ಗೆಳೆಯ ದುರ್ಗಾ ಪ್ರಿಂಟರ್ಸ್ ನ ಸೀನಣ್ಣಗೆ ನೀಡಿದೆ. ಆ ಪೋಟೋಗೆ ಹೊಸ ರೂಪ ನೀಡಿ ಅದೇ ಶೈಲಿಯಲ್ಲಿ ಎರಡು ವಿಭಿನ್ನವಾದ ಫೋಟೋಗಳನ್ನು ಮಾಡಿಕೊಟ್ಟರು. ಇದು ಮನೆಯಲ್ಲಿ ಯಾರಿಗೂ ಗೊತ್ತಿದ್ದಿಲ್ಲ.
ನಿನ್ನೆ ನಡೆದ ಮನೆಯ ಸಮಾರಂಭವೊಂದರಲ್ಲಿ ಎಲ್ಲರೂ ಸೇರಿದ್ದೆವು. ಎಲ್ಲರ ಊಟ ಮುಗಿದ ನಂತರ ಅವರಿಗೆ ಈ ಎರಡು ಕವರ್ ಗಳನ್ನು ನೀಡಿ, ಎಲ್ಲರನ್ನೂ ನಿಲ್ಲಿಸಿಕೊಂಡು ಫೋಟೋ ತೆಗೆಸಿಕೊಂಡೆ. ಆ ಕವರ್ ಬಿಚ್ಚಿದ ನಂತರ ತಕ್ಷಣ ನನ್ನಯ್ಯ ಹಾಗೂ ಅಮ್ಮ ಖುಷಿಯಾದರು. ಆ ಖುಷಿಯ ನಡುವೆ ಇನ್ನೇನು ಬೇಕು ಹೇಳಿ?
ನಿಜಕ್ಕೂ ಸಂತೋಷ ಎಂಬುದು ನಮ್ಮ ನಡುವೆ ಇರುತ್ತದೆ. ನಾವು ಖುಷಿಯನ್ನು ಹಿಂಬಾಲಿಸಬಾರದು. ಖುಷಿ ನಮ್ಮ ಹಿಂದೆ ಬರಬೇಕು ಎಂಬುದಕ್ಕೆ ಇದೊಂದು ಸಣ್ಣ ಸಾಕ್ಷಿ ಎಂದುಕೊಳ್ಳುತ್ತೇನೆ. ಈ ಒಂದು ಸುಂದರ ಗಳಿಗೆಗೆ ಸಾಕ್ಷಿಯಾದ ನನ್ನ ಕುಟುಂಬಕ್ಕೆ ಹಾಗೂ ಬಂಧುಗಳಿಗೆ ನನ್ನ ನಮನಗಳು.
- ಗಜೇಂದ್ರ ಸ್ವಾಮಿ