
ಶಿವಮೊಗ್ಗ,ಸೆ.ಅ.17:
ಇಲ್ಲಿನ ಗೋಪಾಳದ ಕ್ರೀಡಾ ಸಂಕೀರ್ಣ ಹಾಗೂ ದೇವಕಾತಿಕೊಪ್ಪದ ಕೈಗಾರಿಕಾ ಪ್ರದೇಶದಲ್ಲಿ ನಡೆದ ಅಂತರ ಶಾಲಾ ಸ್ಕೇಟಿಂಗ್ ಸ್ಪರ್ಧೆ, ರಾಜ್ಯ ಮಟ್ಟದ ಸ್ಕೇಟರ್ ಗಳ ಆಯ್ಕೆಗೆ ಇಂದು ಬೆಳಿಗ್ಗೆ ಪತ್ರಕರ್ತ ಜಿ. ಚಂದ್ರಶೇಖರ್, ಪಾಲಿಕೆ ಮಾಜಿ ಸದಸ್ಯ ಇ. ವಿಶ್ವಾಸ್, ರಾಷ್ಟೀಯ ಕರಾಟೆ ಅಸೋಸಿಯೇಷನ್ ಪ್ರಮುಖ ವಿನೋದ್ ಅವರು ಚಾಲನೆ ನೀಡಿದರು.

ಇಲ್ಲಿನ ನಮ್ಮ ಶಿವಮೊಗ್ಗ ರೋಲರ್ ಸ್ಕೇಟಿಂಗ್ ಅಸೋಸಿಯೇಷನ್ (ರಿ.) ವತಿಯಿಂದ ಪ್ರತಿ ವರುಷದಂತೆ ಈ ಬಾರಿಯೂ ಆಯ್ಕೆ ಪ್ರಕ್ರಿಯೆ ಬೆಳಿಗ್ಗೆಯಿಂದಲೇ ಆರಂಭಗೊಂಡಿತು.

ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಕಾರ್ಪೊರೇಟರ್ ವಿಶ್ವಾಸ್ ಅವರು ಇಂತಹ ಒಂದು ಸ್ಕೇಟಿಂಗ್ ಸಂಸ್ಥೆ ಶಿವಮೊಗ್ಗದಲ್ಲಿ ಸಾಕಷ್ಟು ಪ್ರತಿಭಾನ್ವಿತರನ್ನು ಹೊರ ತರುವ ವೇದಿಕೆಯಾಗಿದೆ. ಇದಕ್ಕೆ ಕ್ರೀಡಾಪಟುಗಳ ಜೊತೆ ಪೋಷಕರ ಸಹನೆ ಸಹಕಾರಣ ಎಲ್ಲಾ ಮಕ್ಕಳಿಗೂ ಶುಭವಾಗಲಿ ಎಂದರು.

ಕರಾಟೆ ಅಸೋಸಿಯೇಷನ್ ನ ವಿನೋದ್ ಅವರು ಮಾತನಾಡುತ್ತಾ ಇಂದು ಶಿವಮೊಗ್ಗ ಜಿಲ್ಲಾಮಟ್ಟದಲ್ಲಿ ಆಟವಾಡುತ್ತಿರುವ ನೀವು ನಾಳೆ ರಾಜ್ಯ ಹಾಗೂ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಆಟವಾಡುವಷ್ಟು ಉನ್ನತವಾಗಿ ತಮ್ಮ ಸಾಧನೆಯನ್ನು ತೋರಿಸಿ. ಗೆಲುವನ್ನು ಸಮನಾಗಿ ಸ್ವೀಕರಿಸಿ ಗೆದ್ದಾಗ ಹಿಗ್ಗದಿರಿ. ಸೋತಾಗ ಕುಗ್ಗದೆ ಮುಂದೆ ಗೆಲುವನ್ನು ಕಾಯಿರಿ, ಪ್ರಯತ್ನಿಸಿ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ನಮ್ಮ ಶಿವಮೊಗ್ಗ ರೋಲರ್ ಸ್ಕೇಟಿಂಗ್ ಅಸೋಸಿಯೇಷನ್ ಉಪಾಧ್ಯಕ್ಷ ಹಾಗೂ ಪತ್ರಕರ್ತ ಎಸ್. ಕೆ. ಗಜೇಂದ್ರ ಸ್ವಾಮಿ ಅವರು, ಕಳೆದ 2010 ರಿಂದ ಹಳೆಯ ಹೆಸರಿನಲ್ಲಿ ಆರಂಭಗೊಂಡ ಈ ಸಂಸ್ಥೆ ಈಗ ನಿತ್ಯ ನೂರಾರು ಮಕ್ಕಳಿಗೆ ಕ್ರೀಡಾ ಸಂಕೀರ್ಣ ಹಾಗೂ ಶಿವಮೊಗ್ಗ ಹೆಲಿಫ್ಯಾಡ್ ನಲ್ಲಿ ತರಬೇತಿ ನೀಡುತ್ತಿದೆ. ಇಲ್ಲಿನ ಮಕ್ಕಳು ರಾಜ್ಯ ಹಾಗೂ ಅಂತಾರಾಷ್ಟ್ರೀಯ ಮಟ್ಟವನ್ನು ಪ್ರವೇಶಿಸುತ್ತಿರುವುದು. ನಮ್ಮಲ್ಲಿ ಉತ್ತಮವಾದ ತರಬೇತುದಾರರು ಲಭ್ಯವಿದ್ದು, ಅವರಿಂದ ಮಕ್ಕಳ ಕಲಿಕೆ ಅತಿ ವೇಗವಾಗಿ ಬೆಳೆಯುತ್ತಿದೆ. ಇದಕ್ಕೆ ಕಾರಣರಾದ ಎಲ್ಲಾ ಕ್ರೀಡಾಪಟುಗಳು ಹಾಗೂ ಅವರ ಪೋಷಕರಿಗೆ ಅಭಿನಂದನೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯದರ್ಶಿ ಹಾಗೂ ಕರ್ನಾಟಕ ರೋಲರ್ ಸ್ಕೇಟಿಂಗ್ ಅಸೋಸಿಯೇಷನ್ ಸಹ ಕಾರ್ಯದರ್ಶಿ ಎಂ. ರವಿ, ಸಂಸ್ಥೆಯ ಪ್ರಮುಖರು ಹಾಗೂ ವಕೀಲರಾದ ಪ್ರವೀಣ್, ಸಂಸ್ಥೆಯ ತರಬೇತುದಾರರಾದ ವಿಶ್ವಾಸ್, ಅತೀಶ್, ಯೂಟ್ಯೂಬ್ ಚಾನೆಲ್ ನ ವಿರೂಪಾಕ್ಷಪ್ಪ, ಅಸೋಸಿಯೇಷನ್ ನ ತಾರಾನಾಥ್, ಸುಧೀರ್, ಶ್ರೀನಾಥ್ ,ರಘು ಶೆಟ್ಟಿ

ಹಾಗೂ ಇತರರು ಉಪಸ್ಥಿತರಿದ್ದರು.
ರೋಡ್ ರೇಸ್ ಹಾಗೂ ರಿಂಗ್ ರೇಸ್ ನಲ್ಲಿ ಸುಮಾರು 200 ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿದ್ದು, ಅವರೊಂದಿಗೆ ಪೋಷಕರು ಭಾಗವಹಿಸಿದ್ದರು. ಇದೊಂದು ಸ್ಕೇಟಿಂಗ್ ಹಬ್ಬ ಎಂಬಂತಹ ವಾತಾವರಣ ಕಂಡುಬಂದಿತ್ತು.

ಈ ಆಯ್ಕೆಯಲ್ಲಿ ಕರ್ನಾಟಕ ರೋಲರ್ ಸ್ಕೇಟಿಂಗ್ ಅಸೋಸಿಯೇಷನ್ ನಿಂದ ತರಬೇತಿ ಪಡೆದ ಉನ್ನತ ಮಟ್ಟದ ತರಬೇತುದಾರರು ತೀರ್ಪುಗಾರರಾಗಿರುವುದು ಹಿರಿಮೆಯ ಸಂಗತಿ ಇಲ್ಲಿ ಗೆದ್ದ ಸ್ಕೇಟರ್ಗಳನ್ನು ಮುಂದಿನ ರಾಜ್ಯ ಮಟ್ಟದ ಸ್ಪರ್ಧೆಗಳಿಗೆ ಜಿಲ್ಲಾ ತಂಡಕ್ಕೆ ಆಯ್ಕೆ ಮಾಡಲಾಗುವುದು.

ವೇಗದ ರೋಲರ್ ಸ್ಕೇಟಿಂಗ್ ಕ್ರೀಡೆಯನ್ನು ಉತ್ತೇಜಿಸುವುದು, ಪ್ರತಿಭಾವಂತ ಕ್ರೀಡಾಪಟುಗಳನ್ನು ಗುರುತಿಸುವುದು ಹಾಗೂ ಅವರಿಗೆ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಸ್ಪರ್ಧಿಸಲು ಉತ್ತಮ ಅವಕಾಶ ಕಲ್ಪಿಸುವುದು ಈ ಚಾಂಪಿಯನ್ಶಿಪ್ನ ಪ್ರಮುಖ ಉದ್ದೇಶವಾಗಿದೆ.